Asianet Suvarna News Asianet Suvarna News

50 ವರ್ಷದ ದೂರದೃಷ್ಟಿ ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿ: ವಿ.ಸೋಮಣ್ಣ

ರಾಜ್ಯದಲ್ಲಿ ಭವಿಷ್ಯದ ಐವತ್ತು ವರ್ಷಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ (ರಾಜ್ಯ ಘಟಕ) ಅಧಿಕಾರಿಗಳು ಸಮನ್ವಯದಿಂದ ಹೆದ್ದಾರಿ ಕಾಮಗಾರಿ ಕೈಗೊಳ್ಳುವಂತೆ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಸೂಚಿಸಿದ್ದಾರೆ.

Build National Highway with a 50-year vision: V. Somanna snr
Author
First Published Aug 4, 2024, 12:49 PM IST | Last Updated Aug 4, 2024, 12:49 PM IST

ಬೆಂಗಳೂರು :  ರಾಜ್ಯದಲ್ಲಿ ಭವಿಷ್ಯದ ಐವತ್ತು ವರ್ಷಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ (ರಾಜ್ಯ ಘಟಕ) ಅಧಿಕಾರಿಗಳು ಸಮನ್ವಯದಿಂದ ಹೆದ್ದಾರಿ ಕಾಮಗಾರಿ ಕೈಗೊಳ್ಳುವಂತೆ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಸೂಚಿಸಿದ್ದಾರೆ.

ಅವರು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಕಚೇರಿಯಲ್ಲಿ ತುಮಕೂರು ಜಿಲ್ಲೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆಯೇ ಸಮಸ್ಯಾತ್ಮಕ ಸ್ಥಳ (ಬ್ಲಾಕ್‌ಸ್ಪಾಟ್‌) ನಿರ್ಮಾಣ ಆಗದಂತೆ ಕ್ರಮ ವಹಿಸಬೇಕು. ಹೆದ್ದಾರಿ ನಿರ್ಮಾಣವಾದ ಹತ್ತೇ ವರ್ಷದಲ್ಲಿ ಸಮಸ್ಯೆಗಳು ಎದುರಾಗುವುದನ್ನು ತಪ್ಪಿಸಬೇಕು. ಪದೇಪದೇ ದುರಸ್ತಿ ಕಾಮಗಾರಿ ಕೈಗೊಳ್ಳುವಂತಹ ಪರಿಸ್ಥಿತಿ ತಂದುಕೊಳ್ಳಬಾರದು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ-206 ಮಲ್ಲಸಂದ್ರ-ಕರಡಿ 90 ಕಿ.ಮೀ. ಚತುಷ್ಪಥ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ರಾಹೆ 105(ಎ) ಕೆಬಿ ಕ್ರಾಸ್, ತುರುವೆಕೆರೆ ಮಲ್ಲಸಂದ್ರ, ನೆಲ್ಲಿಗೆರೆ ದ್ವಿಪಥ ರಸ್ತೆ ಸಂಬಂಧಿಸಿ 5 ವರ್ಷಗಳ ಹಿಂದೆ ಭೂಸ್ವಾಧೀನ ಕೈಗೊಂಡು ಕಾಮಗಾರಿ ನಡೆಸಲಾಗಿತ್ತು. ಮಾರ್ಗದ ಮಧ್ಯೆ 2 ಕಿ.ಮೀ. ರಸ್ತೆ ಬಿಟ್ಟು ಉಳಿದೆಲ್ಲ ಕಡೆ ಕಾಮಗಾರಿ ಪೂರ್ಣಗೊಳಿಸಿದ್ದರು. ಈ ಪ್ರದೇಶ ಜನರಿಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ನೆಲಮಂಗಲ- ತುಮಕೂರು, ಸಿರಾ- ಚಿತ್ರದುರ್ಗದವರೆಗೆ ರಾಷ್ಟ್ರೀಯ ಹೆದ್ದಾರಿ-48ರ ಚತುಷ್ಪಥ ಕಾಮಗಾರಿ ನಡೆಯಲಿದೆ. ಮೊದಲ ಹಂತದಲ್ಲಿ ನೆಲಮಂಗಲ - ತುಮಕೂರು ಸರ್ವೀಸ್‌ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಕಾಮಗಾರಿ ತ್ವರಿತಗೊಳಿಸಿ, ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾಗಿ ಹೇಳಿದರು.

ರಾಜ್ಯದಲ್ಲಿ ₹6400 ಕೋಟಿ ವೆಚ್ಚದ 375 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ನಡೆದಿದೆ. ರಾಹೆ 234 ಹುಳಿಯಾರು- ಸಿರಾ ದ್ವಿಪಥ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ ಎಂದು ಮಾಹಿತಿ ನೀಡಿದರು.

ಮಳವಳ್ಳಿ- ಮದ್ದೂರು- ಕುಣಿಗಲ್- ತುಮಕೂರು- ಕೊರಟೆರೆ- ಮಧುಗಿರಿ- ಪಾವಗಡ- ಕಲ್ಯಾಣದುರ್ಗ- ಬಳ್ಳಾರಿ ಸಂಪರ್ಕಿಸುವ 347 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೇವೆ ಎಂದರು.

ರಾಯದುರ್ಗ-ತುಮಕೂರು ರೈಲ್ವೆಗೆ ಭೂಸ್ವಾಧೀನ:

1994ರಲ್ಲಿ ಮಂಜೂರಾಗಿದ್ದ ರಾಯದುರ್ಗ ತುಮಕೂರು ಮಾರ್ಗ ವಿಳಂಬವಾಗಿತ್ತು. ಈ ಮಾರ್ಗಕ್ಕೆ 1900 ಎಕರೆ (ಆಂಧ್ರಪ್ರದೇಶ ಬಿಟ್ಟು) ಭೂಸ್ವಾಧೀನ ಆಗಬೇಕಿತ್ತು. ಇದೀಗ ಬಹುತೇಕ ಸ್ವಾಧೀನ ಕಾರ್ಯ ಮುಗಿದಿದ್ದು, 123 ಎಕರೆ ಭೂಸ್ವಾಧೀನ ಬಾಕಿ ಇದೆ. ಬಳಿಕ ಟೆಂಡರ್ ಕರೆದು ಕೆಲಸ ಪ್ರಾರಂಭಸಿಸಲಾಗುವುದು. ಇದಕ್ಕೆ ಇಲಾಖೆ ಸದ್ಯ ₹300 ಕೋಟಿ ಒದಗಿಸಿದೆ ಎಂದು ವಿ.ಸೋಮಣ್ಣ ತಿಳಿಸಿದರು.

ತುಮಕೂರು -ಚಿತ್ರದುರ್ಗ -ದಾವಣಗೆರೆ ರೈಲ್ವೆ ಮಾರ್ಗಕ್ಕೆ ಇನ್ನು 400 ಎಕರೆ ಭೂಸ್ವಾಧೀನ ಆಗಬೇಕಿದ್ದು, ಈ ಯೋಜನೆಗೆ ಒಟ್ಟಾರೆ 2600 ಎಕರೆ ಭೂಮಿ ಬೇಕಾಗಿದೆ. ಸುಮಾರು ₹600 ಕೋಟಿಯನ್ನು ನೀಡಲಾಗಿದ್ದು, ತಮುಕೂರು ಹಾಗೂ ಶಿರಾ ನಡುವಿನ ಮಾರ್ಗಕ್ಕೆ ಟೆಂಡರ್‌ ಕರೆಯಲಾಗಿದೆ. ತುಮಕೂರಿನಲ್ಲಿ ಐದು ರೈಲ್ವೆ ಕೆಳಸೇತುವೆ, ಮೇಲ್ಸೇತುವೆಯನ್ನು ಸಂಪೂರ್ಣ ವೆಚ್ಚ ₹358 ಕೋಟಿಯನ್ನು ರೈಲ್ವೆ ಇಲಾಖೆಯೆ ಭರಿಸಲು ತೀರ್ಮಾನಿಸಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

Latest Videos
Follow Us:
Download App:
  • android
  • ios