ಮೈಸೂರು(ಸೆ.29): ವಿಶ್ವಸಂಸ್ಥೆಯ 74ನೇ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ಬುದ್ಧನನ್ನು ಹಾಡಿ ಹೊಗಳಿದ್ದಾರೆ. ಹಾಗಾಗಿ ಅವರು ರಾಮ ಮಂದಿರ ಕಟ್ಟುವ ಬದಲು ಬುದ್ಧ ಮಂದಿರ ಕಟ್ಟುವಂತಾಗಲಿ ಎಂದು ಚಿಂತಕ ಪ್ರೊ.ಕೆ.ಎಸ್‌. ಭಗವಾನ್‌ ಸಲಹೆ ನೀಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಸಂಸ್ಥೆಯ 74ನೇ ಮಹಾ ಅಧಿವೇಶನದಲ್ಲಿ ಮೋದಿಯವರು ‘ನಾವು ಬುದ್ಧನ ನಾಡಿನಿಂದ ಬಂದವರು ಯುದ್ಧ ಬಯಸುವುದಿಲ್ಲ’ ಎಂದಿದ್ದಾರೆ. ಈ ಮಾತನ್ನು ನಾನು ಒಪ್ಪುತ್ತೇನೆ. ಆದರೆ ರಾಮ ಮಂದಿರ ಕಟ್ಟುತ್ತೇವೆ ಎಂದು ಹೊರಟಿರುವ ಇವರು, ಅದರ ಬದಲು ಬುದ್ಧ ಮಂದಿರ ಕಟ್ಟುತ್ತೇವೆ ಎಂದು ಹೇಳಲಿ ಎಂದು ತಾಕೀತು ಮಾಡಿದರು.

ಮಹಿಷಾ ದಸರಾ ರದ್ದು: ಮೋದಿ, ಪ್ರತಾಪ್ ಸಿಂಹ ವಿರುದ್ಧ ಗುಡುಗಿದ ಭಗವಾನ್

ವೈದಿಕರು ರಾಮಾಯಣ, ಮಹಾಭಾರತದಲ್ಲಿ ಬುದ್ಧನನ್ನು ಕಳ್ಳ ಎಂದು ಬರೆದಿದ್ದಾರೆ. ರಾಮ 14 ವರ್ಷ ಕಾಡಿಗೆ ಹೋದಾಗ ಕೊಂದಿದ್ದು ರಾಕ್ಷಸರನ್ನಲ್ಲ ಬೌದ್ಧರನ್ನು, ಹಾಗೆ ಅಶೋಕನ ಕಾಲದಲ್ಲಿ ಮಹಿಷ ಮಂಡಲಕ್ಕೆ ಬಂದು ಆಡಳಿತ ನಡೆಸಲು ಬಂದವನೇ ಮಹಿಷ. ಆತ ಬೌದ್ಧ ಧರ್ಮ ಸ್ವೀಕರಿಸಿದವನು. ಅಂತಹ ವ್ಯಕ್ತಿಯನ್ನು ರಾಕ್ಷಸ ಎಂದು ಬಿಂಬಿಸುವುದು ಸರಿಯಲ್ಲ ಎಂದು ಪುನರುಚ್ಚರಿಸಿದರು.

ಗುಲಾಮರಿಂದ ವೇದಿಕೆ ತೆರವು:

ಕೆಲವರು ವೈದಿಕ ಧರ್ಮದ ನಿಷ್ಠಾವಂತ ಗುಲಾಮರಂತೆ ವರ್ತಿಸುತ್ತಿದ್ದಾರೆ. ಇಂತಹ ಗುಲಾಮರು ನಾವು ಹಾಕಿದ್ದ ಶಾಮಿಯಾನ ಕಿತ್ತು ಹಾಕಿ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಸಿದ್ದಾರೆ. ಮಹಿಷ ರಾಕ್ಷಸ ಎಂದು ಹೇಳುವವರು ಮೈಸೂರಿಗೆ ಮೈಸೂರು ಎಂಬ ಹೆಸರು ಬಂದಿದ್ದಾದರು ಹೇಗೆ? ಎಂಬುದನ್ನು ಹೇಳಲಿ ಎಂದರು.

ಪ್ರತಾಪ್‌ ಸಿಂಹ ವಿರುದ್ಧ ದೂರು ದಾಖಲಿಗೆ ಚಿಂತನೆ:

ದಲಿತ ವೆಲ್ಫೇರ್‌ ಟ್ರಸ್ಟ್‌ ಅಧ್ಯಕ್ಷ ಶಾಂತರಾಜು ಮಾತನಾಡಿ, ಚಾಮುಂಡಿ ಬೆಟ್ಟದಲ್ಲಿ ಹಾಕಿದ್ದ ಶಾಮಿಯಾನ ಕಿತ್ತು ಹಾಕಿ ದಲಿತ ವಿರೋಧಿ ಧೋರಣೆ ತೋರಿರುವ ಸಂಸದರ ಗೂಂಡಾಗಿರಿತನವನ್ನ ಖಂಡಿಸುತ್ತೇವೆ. ಅವರು ಪುರಾಣವನ್ನು ಓದಿಕೊಂಡು ಮಾತನಾಡುವುದಲ್ಲ. ಇತಿಹಾಸವನ್ನು ಇಟ್ಟುಕೊಂಡು ಓದಿ ಚರ್ಚೆಗೆ ಬರಬೇಕು. .ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ಸಂಸದರು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಸರಿಯಲ್ಲ. ಇದರ ಬಗ್ಗೆ ದೂರು ದಾಖಲಿಸುವ ಬಗ್ಗೆ ವಕೀಲರ ಜೊತೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

ನಾಡಹಬ್ಬ ದಸರಾಗೆ ಚಾಲನೆ: ಭೈರಪ್ಪ ಭಾ಼ಷಣದ ಮಾತುಗಳಿವು

ಹುಣಸೂರಿನಲ್ಲಿ ನಿಷೇಧಾಜ್ಞೆ ಇದ್ದರೂ ಸಹ ಹನುಮ ಜಯಂತಿ ಮಾಡಿ ಕಾನೂನಿಗೆ ಅಗೌರವ ತೋರಿದವರು ನಮಗೆ ಪಾಠ ಮಾಡಲು ಬರುತ್ತಿದ್ದಾರೆ. ನಾವು ಕಾನೂನನ್ನು ಗೌರವಿಸುತ್ತೇವೆ. ಆದ್ದರಿಂದ ನಿಷೇಧಾಜ್ಞೆ ಇರುವ ಕಾರಣದಿಂದ ಶಾಂತಿಯುತವಾಗಿ ಪ್ರತಿಭಟಿಸಿದ್ದೇವೆ. ಅವರ ತರ ಗೂಂಡಾಗಿರಿ ವರ್ತನೆ ತೋರಿಲ್ಲ ಎಂದು ಟೀಕಿಸಿದರು. ಲೇಖಕ ಸಿದ್ದಸ್ವಾಮಿ, ಚಿಕ್ಕಂದಾನಿ, ವಕೀಲ ಮಹೇಶ್‌ ಹಾಜರಿದ್ದರು.