ಮದಲೂರು ಕೆರೆ ಮತ್ತೆ ಸುದ್ದಿಯಲ್ಲಿ: ಕೆರೆ ತುಂಬಿದ್ದಕ್ಕೆ ಕೋಣ ಬಲಿಕೊಟ್ಟು ಸಂಭ್ರಮಿಸಿದ ಗ್ರಾಮಸ್ಥರು!

ಕರ್ನಾಟಕದಲ್ಲಿ ಹಲವು ದಿನಗಳಿಂದ ರಣರಕ್ಕಸ ಮಳೆಯಾಗುತ್ತಿದ್ದು, ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ತುಂಬಿ ಭೋರ್ಗರೆಯುತ್ತಿವೆ. ಇನ್ನು ತುಮಕೂರು ಜಿಲ್ಲೆಯಲ್ಲೂ ಸಹ   ಕೆಲವು ದಿನಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಹಲವು ಊರುಗಳಲ್ಲಿ ದಶಕಗಳ ಬಳಿಕ ಕೆರೆಗಳು ತುಂಬಿವೆ. ಇದರಿಂದ ಸಂತೋಷಗೊಂಡಿರುವ ಗ್ರಾಮಸ್ಥರು ಕೋಣ ಬಲಿ ಕೊಟ್ಟಿದ್ದಾರೆ.

buffalo sacrifice for Sira madaluru lake After Water Full Over continuous rain rbj

ತುಮಕೂರು, (ಸೆಪ್ಟೆಂಬರ್.08): ತುಮಕೂರು ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಶಿರಾ ತಾಲೂಕಿನ ಮದಲೂರು ಕೆರೆ ಇದೀಗ ಮತ್ತೆ ಸುದ್ದಿಯಲ್ಲಿದೆ.  ಮದಲೂರು ಕೆರೆಗೆ ನೀರು ತುಂಬಿಸುವುದೇ ರಾಜಕೀಯ ನಾಯಕರ ಪ್ರಮುಖ ಆಶ್ವಾಸನೆ. ಪ್ರತಿ ಬಾರಿ ಚುನಾವಣೆಯ ಸಮಯದಲ್ಲಿ ಮುನ್ನೆಲೆಗೆ ಬರುತ್ತಿದ್ದ ಮದಲೂರು ಕೆರೆ ವಿಚಾರ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ.

ಹೌದು...ದಶಕಗಳಿಂದ ಬರಿದಾಗಿದ್ದ ಮದಲೂರು ಕೆರೆಯು ಈ ಬಾರಿ ಸುರಿದ ಮಳೆಯಿಂದಾಗಿ ಎರಡನೇ ಬಾರಿಗೆ ತುಂಬಿದೆ. ಕೆರೆ ತುಂಬಿದ ಹರ್ಷದಲ್ಲಿ ಗ್ರಾಮಸ್ಥರೆಲ್ಲ ಸೇರಿ ಕೋಣವನ್ನು ಬಲಿ ಕೊಟ್ಟಿದ್ದಾರೆ.

ಕೆರೆ ತುಂಬಿದ ಸಂತೋಷದಲ್ಲಿ ಕೋಣವನ್ನು ಬಲಿ ಕೊಟ್ಟು ಸಂಭ್ರಮಿಸಿರುವ ಘಟನೆ ಶಿರಾ ತಾಲೂಕ್ಕಿನ ಮದಲೂರಿನಲ್ಲಿ  ಘಟನೆ ನಡೆದಿದೆ. ಶಿರಾ ಬಿಜೆಪಿ ಶಾಸಕ ಡಾ.ರಾಜೇಶ್ ಗೌಡ ಬೆಂಬಲಿಗರಿಂದ ಮೌಢ್ಯಾಚರಣೆ ನಡೆದಿದೆ. ಶಾಸಕ ಡಾ. ರಾಜೇಶ್ ಗೌಡ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಕೋಣವನ್ನು ಬಲಿಕೊಡಲಾಗಿದೆ. ಸೆಪ್ಟೆಂಬರ್ 01ರಂದೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನೀರಾವರಿ ಇಲಾಖೆಯ ಎಲ್ಲಾ ಕೆರೆಗಳು ಸುಭದ್ರ: ಸಚಿವ ಮಾಧುಸ್ವಾಮಿ

ಮಳೆಯಿಂದಾಗಿ ಅಪರೂಪಕ್ಕೆ ತುಂಬಿರುವ ಕೆರೆಯ ಕೋಡಿಯಿಂದ ಊರಿಗೆ ಯಾವುದೇ ಹಾನಿಯುಂಟಾಗಬಾರದು ಎಂದು ಕೆರೆ ಕೋಡಿ ಬಳಿಯಲ್ಲೇ ಇರುವ ದುರ್ಗಮ್ಮ ದೇವಿಗೆ ಆರು ವರ್ಷದ ಕೋಣವನ್ನು ಬಲಿಕೊಡಲಾಗಿದೆ. ಬಳಿಕ  ವ್ಯಕ್ತಿಯ ತಲೆ ಮೇಲೆ ಕೋಣದ ತಲೆಯನ್ನಿಟ್ಟು ಕೆರೆ ಸುತ್ತ ಪ್ರದಕ್ಷಣೆ ಹಾಕಿದ್ದಾರೆ. ಬಳಿಕ ಕೋಣದ ಮುಂಡವನ್ನು ಕೋಡಿ ಬೀಳುವ ಜಾಗದಲ್ಲಿ ನೀರಿನಲ್ಲಿ ತೇಲಿಬಿಟ್ಟಿದ್ದಾರೆ.

ಹಲವು ವರ್ಷಗಳ ಬಳಿಕ ಕರೆ ತುಂಬಿರುವುದಕ್ಕೆ ಸಂಭ್ರಮಿಸುವುದು ಓಕೆ. ಆದ್ರೆ, ಕೆರೆ ಕೋಡಿಯಾಗಿದ್ದಕ್ಕೆ ಮೂಕ ಪ್ರಾಣಿಯನ್ನು ಬಲಿಕೊಟ್ಟಿರುವುದು ದುರಂತ.

ಏನಿದು ಮದಲೂರು ಕೆರೆ ವಿವಾದ?
ಮದಲೂರು ಕೆರೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ,ಈ ಕೆರೆ ತುಂಬಿಸುವ ಸಂಬಂಧ ಸಚಿವ ಮಾಧುಸ್ವಾಮಿ ಹಾಗೂ ಬಿಜೆಪಿ ಶಾಸಕ ರಾಜೇಶ್ ಗೌಡ ನಡುವೆ ಕಿತ್ತಾಟ ನಡೆದಿದೆ.

ಮದಲೂರು ಕೆರೆಗೆ ನೀರು ಬಿಡೋಕೆ ಸಾಧ್ಯವೇ ಇಲ್ಲ, ಅದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂಬ ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ರೆ, ಶಿರಾ ಕ್ಷೇತ್ರದ ಶಾಸಕ ರಾಜೇಶ್ ಗೌಡ ಅಸಮಾಧಾನಗೊಂಡು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಉಂಟು. 

ಈ ಮಾತು ಶಿರಾ ತಾಲೂಕಿನಲ್ಲಿ ರಾಜಕೀಯ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿತ್ತು.‌ ಶಿರಾ ಶಾಸಕ ಡಾ.ರಾಜೇಶ್ ಗೌಡರ ಗೆಲವಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದ ಮದಲೂರು ಮದಲೂರು ಕೆರೆಗೆ ನೀರು ಬಿಡಲು ಸಾಧ್ಯವೇ ಇಲ್ಲ ಅದಕ್ಕೆ ಕಾನೂನಿಲ್ಲಿ ಅವಕಾಶವೇ ಇಲ್ಲ ಎಂದಿರುವ ಮಾಧುಸ್ವಾಮಿಯವರ ನಡೆ ತೀವ್ರ ತಲೆನೋವು ತಂದಿತ್ತು.

Latest Videos
Follow Us:
Download App:
  • android
  • ios