BSY Visit to Mantralaya: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ರಾಯರ ಮುಂದೆ ಸಂಕಲ್ಪ
- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಯರ ಮಠಕ್ಕೆ ಕುಟುಂಬ ಸಮೇತ ಭೇಟಿ
- ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ರಾಯರ ಮುಂದೆ ಬಿಎಸ್‌ವೈ ಸಂಕಲ್ಪ.
ರಾಯಚೂರು (ಆ.12): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುಟುಂಬ ಸಮೇತವಾಗಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಗುರುವಾರ ಭೇಟಿ ನೀಡಿದರು. ಶ್ರೀಗುರುಸಾರ್ವಭೌಮರ 351ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಪುತ್ರರಾದ ಬಿ.ವೈ.ರಾಘವೇಂದ್ರ, ವಿಜಯೇಂದ್ರ ಅವರೊಂದಿಗೆ ಬುಧವಾರ ರಾತ್ರಿ ಮಂತ್ರಾಲಯಕ್ಕೆ ಆಗಮಿಸಿದ ಬಿಎಸ್‌ವೈ ಗುರುವಾರ ಬೆಳಗ್ಗೆ ಶ್ರೀಮಠಕ್ಕೆ ತೆರಳಿ ಗ್ರಾಮ ದೇವಿ ಮಂಚಾಲಮ್ಮರಿಗೆ ಪೂಜೆಯನ್ನು ಮಾಡಿದರು. ಬಳಿಕ ಶ್ರೀಗುರುರಾಯರ ಮೂಲಬೃಂದಾವನದ ದರ್ಶನ ಪಡೆದು ಮಂಗಳಾರತಿ ನೆರವೇರಿಸಿದರು. ಇದೇ ವೇಳೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಬಿಎಸ್‌ವೈ ಹಾಗೂ ಕುಟುಂಬ ಸದಸ್ಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿ ಶ್ರೀಮಠದಿಂದ ರಾಯರ ಪ್ರತಿಮೆ, ಫಲ-ಮಂತ್ರಾಕ್ಷತೆಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
ರಾಯರ 351ನೇ ಆರಾಧನೆಗೆ ವಿದ್ಯುಕ್ತ ಚಾಲನೆ: ವಿದ್ಯುದ್ದೀಪ, ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿದೆ ಮಂತ್ರಾಲಯ
ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಿಎಸ್‌ವೈ(BSY), ರಾಜ್ಯದಲ್ಲಿ ಮತ್ತೆ ಬಿಜೆಪಿ(BJP)ಯನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದು, ರಾಯರ ಬಳಿಯೂ ಅದನ್ನೇ ಬೇಡಿಕೊಂಡಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇನೆ. ಆ.21ರಿಂದ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಲು ತೀರ್ಮಾನಿಸಿದ್ದು, ಆ ನಿಟ್ಟಿನಲ್ಲಿ ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಬಿ.ವೈ.ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿದ್ದಾರೆ. ಅವರಿಗೆ ಯಾವ ಸ್ಥಾನಮಾನ ನೀಡಬೇಕು ಎನ್ನುವುದನ್ನು ಕೇಂದ್ರವೇ ನಿರ್ಧರಿಸಲಿದೆ ಎಂದು ಹೇಳಿದರು.
ಪಕ್ಷದಲ್ಲಿ ಯಾವುದೇ ಗೊಂದಗಳಿಲ್ಲ, ಸಿಎಂ ಬಸವರಾಜ ಬೊಮ್ಮಾಯಿ ಅವರೇ ಪೂರ್ಣಾವಧಿಯಲ್ಲಿರಲಿದ್ದಾರೆ. ರಾಜ್ಯದಾದ್ಯಂತ ಭಾರಿ ಮಳೆಯಿಂದಾಗಿ ರೈತರು ಸಂಕಷ್ಟಅನುಭವಸುತ್ತಿದ್ದಾರೆ. ಮಳೆಯಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ, ಸರ್ಕಾರ ಸೂಕ್ತ ಪರಿಹಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ(B.Y.Raghavendra) ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟುಸಂಭವಿಸಿದ್ದು ಯಾವುದೇ ಪರಿಸ್ಥಿತಿಯನ್ನಾಧರು ಸಮಾನವಾಗಿ ಸ್ವೀಕರಿಸಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. ಆ ಭಗವಂತ ಸಹ ಸಮನಾದ ಫಲವನ್ನೇ ಕೊಡುತ್ತಾನೆ. ರಾಜ್ಯದಲ್ಲಿ ನೆರೆಯಿಂದಾಗಿ ಬೆಳೆ ಹಾನಿಯಾಗಿ ರೈತರು ಸಂಘಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದು, ಅನ್ನದಾತರು ಆತಂಕ ಪಡದೆ ಸ್ವಾಭಿಮಾನದಿಂದ ಜೀವನ ನಡೆಸುವ ಶಕ್ತಿಯನ್ನು ಕರುಣಿಸುವಂತೆ ರಾಯರಲ್ಲಿ ಪ್ರಾರ್ಥಿಸಲಾಗಿದೆ. ಅದೇ ರೀತಿ ಕ್ಷೇತ್ರದಲ್ಲಿ ಮತ್ತಷ್ಟುಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ನೀಡುವಂತೆ ರಾಯರಲ್ಲಿ ಕೋರಲಾಗಿದೆ ಎಂದು ಹೇಳಿದರು.
ಸಿಎಂ ಬದಲಾವಣೆ ಚರ್ಚೆ ಮಾಡಬಾರ್ದು, ಇಲ್ಲಿಗೇ ನಿಲ್ಲಿಸಿ: ಯಡಿಯೂರಪ್ಪ ಖಡಕ್ ಸೂಚನೆ
ಸಿಎಂ ಬದಲಾವಣೆ ಬರೀ ಊಹಾಪೋಹ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸಿಎಂ ಬದಲಾವಣೆ ಬರೀ ಊಹಾಪೋಹ, ಯಾರೋ ಒಬ್ಬರು ಹೇಳಿದರೆ ತಕ್ಷಣ ಸಿಎಂ ಬದಲಾವಣೆ ಆಗುವುದಿಲ್ಲ. ಈಗಾಗಲೇ ಕೇಂದ್ರ ಮತ್ತು ರಾಜ್ಯದ ಅಧ್ಯಕ್ಷರು ಸಹ ಸಿಎಂ ಬದಲಾವಣೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುವ ವಿಶ್ವಾಸವಿದೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡಲಿದ್ದು, ರಾಜ್ಯಾಧ್ಯಕ್ಷರು, ಸಿಎಂ ನೇತೃತ್ವದಲ್ಲಿ ಒಂದು ತಂಡ, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೊಂದು ತಂಡ ಹೀಗೆ ಎಲ್ಲ ನಾಯಕರು ಸೇರಿಕೊಂಡು ಯೋಜನೆ ರೂಪಿಸಿ ಪ್ರವಾಸ ನಡೆಸುವುದರ ಕುರಿತು ಅಂತಿಮ ರೂಪುರೇಷಗಳನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
11ಕೆಪಿಆರ್‌ಸಿಆರ್01: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬ ಸಮೇತ ಆಗಮಿಸಿ ರಾಯರ ಮೂಲಬೃಂದಾವನದ ದರ್ಶನ ಪಡೆದು, ಪೂಜೆಯನ್ನು ನೆರವೇರಿಸಿದರು. 11ಕೆಪಿಆರ್‌ಸಿಆರ್02:ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಸನ್ಮಾನಿಸಿ ಆಶೀರ್ವದಿಸಿದರು.