ಚಾಮರಾಜನಗರ [ಸೆ.11] : ಬಿಎಸ್ಪಿ ರಾಷ್ಟ್ರೀಯ ವರಿಷ್ಠೆ ಮಾಯಾವತಿ ಆದೇಶ ಪಾಲನೆ ಮಾಡದೇ ಸಣ್ಣತನ ಮೆರೆದಿರುವ ಶಾಸಕ ಎನ್‌. ಮಹೇಶ್‌ ಅವರು ಸಂತನ ರೀತಿ ಮಾತಾಡುವುದನ್ನು ನಿಲ್ಲಿಸಿ ವಾಸ್ತವ ಮಾತನಾಡಲಿ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ  ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡ ಬಿಎಸ್ಪಿ ಕೊಳ್ಳೇಗಾಲ ಕ್ಷೇತ್ರದ ಅಭ್ಯರ್ಥಿಯಾಗಿ ಗೆದ್ದು ಶಾಸಕನಾಗಿ ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ನಂತರ ಮಾಯಾವತಿ ಆದೇಶದಂತೆ ಸಚಿವ ಸ್ಥಾನಕ್ಕೆ ಎನ್‌. ಮಹೇಶ್‌ ಅವರು ರಾಜೀನಾಮೆ ನೀಡಿದ್ದರು. ಸಮ್ಮಿಶ್ರ ಸರ್ಕಾರದ ವಿಶ್ವಾಸಮತ ಯಾಚನೆ ವೇಳೆ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮಾಯಾವತಿ ಸೂಚನೆ ನೀಡಿದ್ದರೂ, ಉಲ್ಲಂಘನೆ ಮಾಡಿರುವುದರಿಂದ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಮಾಯಾವತಿ ಬೇಡಿಕೆಗಳಿಗೆ ಸ್ಪಂದಿಸದಿದ್ದರಿಂದ ಬಿಎಸ್ಪಿ ಲೋಕಸಭೆ ಚುನಾವಣೆ ರಾಜ್ಯದಲ್ಲಿ ಮೈತ್ರಿ ಇಲ್ಲದೇ ಏಕಾಂಗಿಯಾಗಿ ಚುನಾವಣೆ ಎದುರಿಸಿತು. ಲಕ್ನೋದಲ್ಲಿ ಶಾಸಕ ಎನ್‌. ಮಹೇಶ್‌ ಬಿಎಸ್ಪಿ ಸಭೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಬೇಕೆ ಎಂದು ಕೇಳಿದಾಗ ಮಾಯಾವತಿ ಬಿಜೆಪಿ ವಿರೋಧ ಪಕ್ಷವಾದ್ದರಿಂದ ನೀವು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ ಎಂದು ಆದೇಶ ನೀಡಿದ್ದರು. ಟ್ವಿಟರ್‌ನಲ್ಲಿ ಜು.21ರಂದು ಸದನಕ್ಕೆ ಹೋಗಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ ಎಂದು ಟ್ವಿಟ್‌ ಮಾಡಿದ್ದರು ಎಂದರು.

ಸುಳ್ಳು ಹೇಳಿದ ಶಾಸಕ:

ಜು. 23ರಂದು ಸದನಕ್ಕೆ ಹೋಗದೇ ಮಾಯಾವತಿ ಆದೇಶವನ್ನು ಅವರು ಉಲ್ಲಂಘನೆ ಮಾಡಿದ್ದು, 24ರಂದು ಪತ್ರಿಕಾಗೋಷ್ಠಿ ಕರೆದು ಟ್ವಿಟರ್‌ನಲ್ಲಿ ಬಂದಿರುವ ಆದೇಶವನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ. ಆದರೆ, ಜು. 22ರಲ್ಲಿ ಶಾಸಕ ಎನ್‌. ಮಹೇಶ್‌ ಸಂಪರ್ಕಕ್ಕೆ ಸಿಗದಿದ್ದಾಗ ಅವರ ಮನೆಗೆ ಹೋಗಿದ್ದ ಬಿಎಸ್ಪಿ ರಾಜ್ಯ ಉಸ್ತುವಾರಿ ಅಶೋಕ್‌ ಸಿದ್ದಾಥ್‌ರ್‍ ಅವರು ಮೊಬೈಲ್‌ ಮೂಲಕ ಮಾಯಾವತಿ ಆದೇಶ ತಿಳಿಸಿದ್ದಾರೆ. ನಾನು ಟ್ವಿಟರ್‌ ಆದೇಶ ನೋಡಿಲ್ಲ ನನಗೆ ತಿಳಿದಿಲ್ಲ ಎಂದು ಸುಳ್ಳು ಹೇಳಿದ್ದಾರೆ ಎಂದು ಶಾಸಕ ಎನ್‌. ಮಹೇಶ್‌ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಯಾವತಿ ಆದೇಶ ಉಲ್ಲಂಘಿಸಿದ ಶಾಸಕ:

ಅಶೋಕ್‌ ಸಿದ್ದಾಥ್‌ರ್‍ ಅವರು ಮಹೇಶ್‌ ಮನೆಗೆ ಹೋಗಿ ಬೇರೆ ನಂಬರ್‌ಗೆ ಕರೆ ಮಾಡಿದಾಗ ನಾನು ಸಮ್ಮಿಶ್ರ ಸರ್ಕಾರಕ್ಕೆ ಮತ ಹಾಕಿದರೂ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ. ನನ್ನ ಕ್ಷೇತ್ರದಲ್ಲಿ ವೀರಶೈವ ಮತದಾರರು ಹೆಚ್ಚಾಗಿದ್ದು, ಸಮ್ಮಿಶ್ರ ಸರ್ಕಾರ ಪರವಾಗಿ ಮತ ಹಾಕಿದರೆ ವೀರಶೈವ ಮತದಾರರು ನನ್ನ ಮೇಲೆ ಮುನಿಸಿಕೊಳ್ಳುತ್ತಾರೆ ಎಂದ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇನ್ನೂ 3 ವರ್ಷ ಇರಲಿದ್ದು, ನಾನು ಸಮ್ಮಿಶ್ರ ಸರ್ಕಾರದ ಪರ ಮತ ಹಾಕಿದರೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡುವುದಿಲ್ಲ. ನನ್ನನ್ನು ಟಾರ್ಗೆಟ್‌ ಮಾಡುತ್ತಾರೆ. ನಾನು ಸಮ್ಮಿಶ್ರ ಸರ್ಕಾರದ ಪರ ಮತ ಹಾಕಲ್ಲ ಜನ ಬೆಂಬಲ ಪಡೆಯಲು ಇದು ಅನಿವಾರ್ಯ ಎಂದು ಹೇಳಿರುವುದನ್ನು ಅಶೋಕ್‌ ಸಿದ್ದಾಥ್‌ರ್‍ ವರಿಷ್ಠರಿಗೆ ತಿಳಿಸಿದ್ದಾರೆ ಎಂದರು.

ಇದುವರೆಗೂ ಭೇಟಿಯಾಗಿಲ್ಲ:

ರಾಷ್ಟ್ರೀಯ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ಶಾಸಕನಾಗಿರುವ ಎನ್‌. ಮಹೇಶ್‌ಗೆ ಆದೇಶ ನೀಡಿದಾಗ ಪಕ್ಷಕ್ಕೆ ಬದ್ಧನಾಗಿರುವ ವ್ಯಕ್ತಿ ಉಲ್ಲಂಘನೆ ಮಾಡಿದಾಗ ಇದನ್ನು ಪಕ್ಷ ನಿಷ್ಠೆ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಪಕ್ಷದಿಂದ ಉಚ್ಚಾಟನೆ ಮಾಡಿದಾಗ ಮಾಯಾವತಿ ಅವರನ್ನು ಭೇಟಿ ಮಾಡಿ ಕ್ಷಮೆ ಯಾಚಿಸಬೇಕಿತ್ತು. ಈವರೆಗೂ ಭೇಟಿ ನೀಡಿಲ್ಲ. ಬಿಎಸ್ಪಿ ಕಾರ್ಯಕರ್ತರನ್ನು ಕ್ಷಮೆ ಕೋರಬೇಕು ಎಂದರು.

ಸುಳ್ಳು ಹೇಳುವ ಮೂಲಕ ಮಹೇಶ್‌ ಬಿಎಸ್ಪಿ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಕಮೆಂಟ್‌ಗಳನ್ನು ಮಾಡಿದ್ದಾರೆ. ಶಾಸಕನಾಗಿ ಸಣ್ಣತನವನ್ನು ಮೆರೆಯುತ್ತಿದ್ದಾರೆ. ನಾನಿಲ್ಲ ಎಂದರೆ ಬಿಎಸ್ಪಿ ಪಕ್ಷದ ಅಸ್ತಿತ್ವ ರಾಜ್ಯದಲ್ಲಿ ಉಳಿಯುವುದಿಲ್ಲ ಎಂದು ಕೀಳು ಮಟ್ಟದ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿದರು.

ಎನ್‌. ಮಹೇಶ್‌ ಬಿಎಸ್ಪಿಗೆ ಬರುವ ಮುಂಚೆಯೇ ರಾಜ್ಯದಲ್ಲಿ ಪಕ್ಷ ಇತ್ತು. 1994ರಲ್ಲಿ ಜುಲ್ಪಿಕರ್‌ ಅಸ್ಮಿ ಎಂಬುವವರು ಬೀದರ್‌ ಜಿಲ್ಲೆಯಿಂದ ಆಯ್ಕೆಯಾಗಿದ್ದರು. ಅದನ್ನು ನೋಡಿ ಕೆಲವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಪಕ್ಷಕ್ಕೆ ಸೇರ್ಪಡೆಯಾದರು. ಅಂತಹವರ ಪೈಕಿ ಮಹೇಶ್‌ ಸಹ ಒಬ್ಬರು. ಇದು ವಿದ್ಯಾರ್ಥಿ ಸಂಘಟನೆಯಲ್ಲಿರುವ ಕೆಲವರಿಗೆ ಪಕ್ಷದ ಇತಿಹಾಸವೇ ಗೊತ್ತಿಲ್ಲ. ಬಹುಜನ ವಿದ್ಯಾರ್ಥಿ ಫೆಡರೇಷನ್‌ ಹೆಸರನ್ನು ಬದಲಾಯಿಸಿ ಬಿವಿಎಸ್‌ ಮಾಡಿದರು ತನಗೆ ಪಕ್ಷದಿಂದ ತೊಂದರೆ ಬಂದಲ್ಲಿ ತನ್ನ ಬೆಂಬಲಕ್ಕಾಗಿ ಇರಲಿ ಎಂದು ರಾಷ್ಟ್ರೀಯ ವರಿಷ್ಠರ ಗಮನಕ್ಕೆ ತಾರದೆ ಬಿವಿಎಸ್‌ ಕಟ್ಟಿಕೊಂಡಿದ್ದಾರೆ. ಇದರ ಮೂಲಕವೂ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.

ಮೌಲ್ಯಗಳನ್ನು ಗಾಳಿಗೆ ತೂರಿದರು:

ಶಾಸಕ ಎನ್‌. ಮಹೇಶ್‌ ಗೆಲ್ಲುವ ಮೊದಲು ಬಿಎಸ್ಪಿ ಪಕ್ಷದ ಸಿದ್ಧಾಂತ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡುತ್ತಿದ್ದರು. ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಅಭ್ಯರ್ಥಿಗಳು ಹೇಗೆ ಗೆಲ್ಲುತ್ತಾರೆ. ಅದೇ ರೀತಿ ಈ ಬಾರಿ ಮೌಲ್ಯಗಳನ್ನು ಗಾಳಿಗೆ ತೂರುವ ಮೂಲಕ ಗೆದ್ದು ಬಂದಿದ್ದಾರೆ. ಗೆಲುವಿನಲ್ಲಿ ವಿಶೇಷತೆ ಏನು ಇಲ್ಲ. ಬಿಎಸ್ಪಿ ಪಕ್ಷದ ಕಾರ್ಯಕರ್ತರು ಎನ್‌. ಮಹೇಶ್‌ ಅನ್ನು ಸೃಷ್ಟಿಸಿದ್ದಾರೆ. ಎನ್‌. ಮಹೇಶ್‌ ಬಿಎಸ್ಪಿಯನ್ನು ಸೃಷ್ಟಿಸಿಲ್ಲ ಎಂದರು.

ಶಾಸಕರಿದ್ದರೂ ಒಂದು ಸ್ಥಾನ ಗೆಲ್ಲಲಿಲ್ಲ:

ಶಾಸಕನಾಗಿ ಯಳಂದೂರು ಪುರಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲಿಸಲು ಆಗಲಿಲ್ಲ. ಒಬ್ಬ ಜಿಪಂ ಸದಸ್ಯನನ್ನು ಕೊಟ್ಟಿಲ್ಲ. ಎನ್‌. ಮಹೇಶ್‌ ತಮ್ಮ ಬೆಂಬಲಿಗರ ಮೂಲಕ ರಾಜೀನಾಮೆ ಕೊಡಿಸುವ ಬದಲು ಬಿಎಸ್ಪಿಯಿಂದ ಆನೆ ಚಿಹ್ನೆ ಮೂಲಕ ಗೆದ್ದಿರುವ ಅವರು ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಗೆದ್ದು ಬರಲಿ ಎಂದು ಸವಾಲು ಹಾಕಿದರು. ಈಗ ಮಹೇಶ್‌ ಕಾಟಕ್ಕೆ ಪಕ್ಷ ಬಿಟ್ಟಿದ್ದವರು ಮರಳಿ ಪಕ್ಷಕ್ಕೆ ವಾಪಸಾಗುತ್ತಿದ್ದಾರೆ. ಪಕ್ಷ ಬಲಿಷ್ಠವಾಗಿದೆ. ಈಗಲೂ ಮಾಯವತಿ ಅವರಲ್ಲಿ ಕ್ಷಮೆ ಕೋರಿದರೆ ಪಕ್ಷ ಮರಳಿ ಅವರನ್ನು ಸೇರಿಸಿಕೊಳ್ಳಲು ಸಿದ್ಧವಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಇ. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದೇವರಾಜು ಕಪ್ಪಸೋಗೆ ಸ್ವಾಗತಿಸಿದರು.