ಚಾಮರಾಜನಗರ (ನ.17):  ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ವಿರುದ್ಧ ಬಿಎಸ್ಪಿ ಟೀಕಾ ಪ್ರಹಾರ ಮುಂದುವರೆಸಿದ್ದು, ಮಹೇಶ್‌ ಮನೆಮಗನಲ್ಲ ಮನೆಹಾಳ ಎಂದು ಬಿಎಸ್ಪಿ ಕೊಳ್ಳೇಗಾಲ ಕ್ಷೇತ್ರ ಉಸ್ತುವಾರಿ ಜಯಂತ್‌ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಬಿಎಸ್ಪಿಯ ಕಾರ್ಯಕರ್ತರಿಗೆ ಪ್ರಬುದ್ಧತೆಯ ಪಾಠ ಹೇಳಲು ಹೊರಟ ಶಾಸಕ ಎನ್‌. ಮಹೇಶ್‌ ಮಾಯಾವತಿ ಅವರ ಆದೇಶವನ್ನು ಉಲ್ಲಂಘಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದಾರೆ. ಉಚ್ಛಾಟನೆ ಆದ ನಂತರ ತನ್ನ ಅಭಿಮಾನಿಗಳಿಗೆ ಪಕ್ಷ ತೊರೆಯಲು ರಾಜೀನಾಮೆ ಪರ್ವ ಮಾಡಿಸಿದ್ಡು ಮನೆ ಮಕ್ಕಳು ಮಾಡುವ ಕೆಲಸವೇ ಎಂದು ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ಸಂಮಿಶ್ರ ಸರ್ಕಾರವನ್ನು ಕೆಡವಿ ಬಿಜೆಪಿಗೆ ಬೆಂಬಲಿಸಿದ್ದು, ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ ಬಿಎಸ್ಪಿ ಅ​ಧಿಕೃತ ಅಭ್ಯರ್ಥಿ ಜಯಮೇರಿ ವಿರುದ್ಧ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದ್ದು, ಚಾಮರಾಜನಗರ ನಗರಸಭೆಯಲ್ಲಿ ಗೆದ್ದಿದ್ದ ಏಕೈಕ ಬಿಎಸ್‌ಪಿ ಸದಸ್ಯನನ್ನು ಬಿಜೆಪಿ ಬೆಂಬಲಿಸುವಂತೆ ಮಾಡಿ ಬಿಜೆಪಿ ಏಜೆಂಟಾಗಿ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಶಾಸಕನ ರಾಜೀನಾಮೆಗೆ ಒತ್ತಡ : ಡಿಸೆಂಬರ್ ಬಳಿಕ ಶಕ್ತಿ ತೋರಿಸ್ತೀನೆಂದು ಸವಾಲ್

ಉಚ್ಛಾಟನೆಯಾದ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿ ಅವರನ್ನು ಭೇಟಿ ಮಾಡಿ ತಪ್ಪಿಗೆ ಕ್ಷಮೆಯಾಚಿಸಬೇಕಿತ್ತು. ಆದರೆ ಗುಪ್ತ ಸಭೆಗಳನ್ನು ನಡೆಸಿ ಮಾಯಾವತಿ ಮತ್ತು ಪಕ್ಷದ ನಾಯಕರ ವಿರುದ್ಧ ಸುಳ್ಳು ಅಪಪ್ರಚಾರ ಮಾಡಿದ್ದು ಪ್ರಬುದ್ಧತೆ ಇರುವ ಮನೆ ಮಗ ಮಾಡುವ ಕೆಲಸವೇ ಎಂಬುದಕ್ಕೆ ಶಾಸಕರು ಉತ್ತರಿಸಲಿ ಎಂದು ಅವರು ಕಿಡಿಕಾರಿದ್ದಾರೆ.

ಶಾಸಕ ಎನ್‌. ಮಹೇಶ್‌ ಮಾತನಾಡಿ, ನನ್ನ ವಿರುದ್ಧ ಅಪಪ್ರಚಾರ ಮಾಡಿ, ಬೈಯ್ದು ನಾಯಕರಾಗುತ್ತೇವೆ ಎಂಬ ಭ್ರಮೆಯನ್ನು ಮೊದಲು ಬಿಡಬೇಕು, ಮನೆಯಿಂದ ಹೊರಹಾಕಿದ ಮನೆಮಗನನ್ನು ಹೇಗೆ ನಡೆಸಿಕೊಳ್ಳಬೇಕೆಂದು ಅವರಿಗೆ ಗೊತ್ತಿಲ್ಲ, ಬಿಎಸ್ಪಿಯ ಕೆಲ ಪಟ್ಟಭದ್ರರು ನಾನು ಮತ್ತೇ ಪಕ್ಷಕ್ಕೆ ಮರಳದಂತೆ ಕೆಲಸ ಮಾಡುತ್ತಿರುವುದರಿಂದ ಅಲ್ಲಿನ ನಾಯಕರಿಗೆ, ಬುದ್ಧಿಜೀವಿಗಳಿಗೆ ದೊಡ್ಡ ನಮಸ್ಕಾರ ಎಂದು ಬೇಸರ ಹೊರಹಾಕಿದ್ದಕ್ಕೆ ಮರುತ್ತರವಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.