ಕೊಳ್ಳೇಗಾಲ ಶಾಸಕ ಎನ್‌. ಮಹೇಶ್‌ ಅವರಿಂದ ಪಕ್ಷಕ್ಕೆ ಮೋಸ  ಸರ್ಕಾರಿ ನೌಕರಿಬಿಟ್ಟು ಸ್ವಯಂ ನಿವೃತ್ತಿಯಾಗಿ ಪಕ್ಷಕ್ಕೆ ಸೇರ್ಪಡೆಯಾದ ಮಹೇಶ್‌ ಅವರಿಗೆ ಅನುಕೂಲ ಸೃಷ್ಟಿ ಆದರೂ ಪಕ್ಷಕ್ಕೆ ಮಹಾ ಮೋಸ ಮಾಡಿದ ಕಾರಣ ಉಚ್ಛಾಟನೆ

ಮೈಸೂರು (ಆ.19): ಕೊಳ್ಳೇಗಾಲ ಶಾಸಕ ಎನ್‌. ಮಹೇಶ್‌ ಅವರಿಂದ ಬಿಎಸ್ಪಿಗೆ ಮೋಸ, ವಿಶ್ವಾಸ ದ್ರೋಹವಾಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ದೂರಿದರು.

ಸರ್ಕಾರಿ ನೌಕರಿಬಿಟ್ಟು ಸ್ವಯಂ ನಿವೃತ್ತಿಯಾಗಿ ಪಕ್ಷಕ್ಕೆ ಸೇರ್ಪಡೆಯಾದ ಮಹೇಶ್‌ ಅವರಿಗೆ ಮೂರು ಕಾರು ಕೊಡಲಾಯಿತು. ಟಿಕೆಟ್‌ ಕೊಟ್ಟಿದ್ದು ಪಕ್ಷದ ತಪ್ಪಾ?. ಮೂರು ಬಾರಿ ಸೋತಿದ್ದರೂ ನಾಲ್ಕನೇ ಬಾರಿ ಟಿಕೆಟ್‌ ನೀಡಲಾಯಿತು. ಬೇರೆ ಪಕ್ಷದಲ್ಲಿ ಒಮ್ಮೆ ಸೋತರೂ ಮತ್ತೆ ಟಿಕೆಟ್‌ ನೀಡುವುದಿಲ್ಲ. ಅವರ ತಪ್ಪಿನ ಅರಿವು ಮುಂದೆ ಅವರಿಗೇ ಗೊತ್ತಾಗುತ್ತದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಎಸ್ಪಿ ನೀಡಿದ ಕಾರು ಮತ್ತು ಟಿಕೆಟ್‌ನಿಂದ ಅವರು ಶಾಸಕರಾಗಿದ್ದಾರೆ. ಎನ್‌. ಮಹೇಶ್‌ ಅವರಿಗೆ ಸಚಿವ ಸ್ಥಾನ ನೀಡುವುದು ದೇವೇಗೌಡರಿಗೆ ಇಷ್ಟಇರಲಿಲ್ಲ. ಆಗ ಮಾಯಾವತಿ ಅವರು ಸತೀಶ್‌ ಚಂದ್ರ ಮಿಶ್ರಾ ಅವರು ಒತ್ತಡ ಹೇರಿದ್ದರಿಂದ ಮಹೇಶ್‌ ಅವರು ಸಚಿವರಾಗಲು ಸಾಧ್ಯವಾಯಿತು ಎಂಬುದನ್ನು ಮರೆಯಬಾರದು. ವಿನಾಕಾರಣ ಇವರನ್ನು ಪಕ್ಷದಿಂದ ಉಚ್ಛಾಟಿಸಲು ಸಾಧ್ಯವೇ? ಎಚ್‌.ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ವಿಶ್ವಾಸಮತ ಯಾಚಿಸುವಾಗ ಇವರು ಸದನದಲ್ಲಿ ಹಾಜರಿರಬೇಕು ಅಥವಾ ತಟಸ್ಥರಾಗಿ ಉಳಿಯಬೇಕು. ಆದರೆ ಇವರು ತಲೆ ಮರೆಸಿಕೊಂಡಿದ್ದು ಏಕೆ? ಎಂಬುದಕ್ಕೆ ಉತ್ತರ ಕೊಡಲಿ. ಸಾಮಾನ್ಯ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಬಿಜೆಪಿ ನೀಡಿದ ಆಮಿಷಕ್ಕೆ ಒಳಗಾಗಿದ್ದರು. ಅವರ ಎಲ್ಲಾ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು ಎಂದು ಅವರು ದೂರಿದರು.

ಬಿಎಸ್ಪಿಯಿಂದ ನನಗೆ ಮೋಸವಾಗಿದೆ, ನನ್ನಿಂದ ಬಿಎಸ್ಪಿಗೆ ಮೋಸ ಆಗಿಲ್ಲ: ಮಹೇಶ್‌

ಇವರು ಸಚಿವರಾಗಿದ್ದಾಗ ಸಮರ್ಥವಾಗಿ ನಿಭಾಯಿಸಲಿಲ್ಲ. ಶಾಲೆಗಳಿಗೆ ಕಳಪೆ ಶೂ ವಿತರಿಸಿದರು. ಇದಕ್ಕೆ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಡೆ ಒಡ್ಡಿದರು. ಇದರಿಂದಾಗಿ ಇವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. 20 ವರ್ಷ ಸಂವಿಧಾನದ ಪರ ಮಾತನಾಡಿ 21ನೇ ವರ್ಷ ಸಂವಿಧಾನ ವಿರೋಧಿಗಳು ಎಂದು ಟೀಕಿಸುತ್ತಿದ್ದ ಪಕ್ಷಕ್ಕೆ ಸೇರಿದ್ದು ಏಕೆ? ನೀವು ಕೊಟ್ಟಸಂದೇಶವಾದರೂ ಏನು? ನೀವು ನೈತಿಕವಾಗಿ ದಿವಾಳಿ ಆಗಿದ್ದೀರಿ. ಮೋದಿ ಅವರನ್ನು ಅತಿ ಹೆಚ್ಚು ಸುಳ್ಳು ಹೇಳಿದ್ದಕ್ಕೆ ನೋಬೆಲ್‌ ಪ್ರಶಸ್ತಿ ಕೊಡಬೇಕು ಎಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಹೇಳಿದ್ದ ತಮಗೆ ಈಗ ತಾಕತ್ತು ಇದ್ದರೆ ಈಗ ಮಾತನಾಡಿ. ವಚನ ಭ್ರಷ್ಟಪ್ರಧಾನಿ ಅಂತ ಹೇಳಿ. ಈಗ ನಿಮ್ಮ ನೈತಿಕತೆ ಸತ್ತು ಹೋಗಿದೆಯಾ ಎಂದು ಅವರು ಪ್ರಶ್ನಿಸಿದರು.

ಬಿಎಸ್ಸಿ ಗೆ ನಿಯತ್ತಾಗಿರಲಿಲ್ಲ. ಈಗ ಕನಿಷ್ಠ ಬಿಜೆಪಿಗಾದರೂ ನಿಯತ್ತಾಗಿರಿ. ಯಡಿಯೂರಪ್ಪನವರು ಮಠಾಧೀಶರು ಮತ್ತು ಅವರೇ ಕರೆದುಕೊಂಡು ಬಂದ ಶಾಸಕರು ಜತೆಯಲ್ಲಿ ಇದ್ದರೂ ಪಕ್ಷಾಂತರ ಮಾಡಲಿಲ್ಲ. ಯಡಿಯೂರಪ್ಪ ಅವರನ್ನು ನೋಡಿಯಾದರೂ ಇವರು ಪಕ್ಷ ನಿಷ್ಠೆ ಕಲಿಯಲಿ. ಸಚಿವ ಸ್ಥಾನ ಕೊಡಲಿಲ್ಲ ಅಂದರೆ ಅಲ್ಲೂ ಇವರು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾರೆ ಎಂಬದನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ತಿಳಿಯಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಶಿವಮಾದೇಗೌಡ, ನಗರ ಅಧ್ಯಕ್ಷ ಶ್ರೀನಿವಾಸ ಪ್ರಸಾದ್‌, ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷ ಬಿ.ಆರ್‌. ಪುಟ್ಟಸ್ವಾಮಿ ಮೊದಲಾದವರು ಇದ್ದರು.