ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ. ಗ್ರಾಮ ಪಂಚಾಯತ್ ಚುನಾವಣೆ ರಾಜಕೀಯ ಜೋರಾದ ಬೆನ್ನಲ್ಲೇ ಪಕ್ಷಾಂತರ ಪರ್ವವೂ ಜೋರಾಗಿದೆ.
ಮಡಿಕೇರಿ (ಡಿ.04): ಹಳ್ಳಿ ಫೈಟ್ ಎಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಕಾರ್ಯ ಚಟುವಟಿಕೆ ಜಿಲ್ಲೆಯಲ್ಲಿ ಚಳಿಗಾಲದಲ್ಲಿ ಚುರುಕಾಗಿ ಸಾಗುತ್ತಿದೆ. ಇನ್ನೇನು ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷದಲ್ಲೂ ಕೆಲವು ಕಾರ್ಯಕರ್ತರು ಅತ್ತಿಂದ ಇತ್ತ, ಇತ್ತಿಂದ ಅತ್ತ ತೆರಳುತ್ತಿರುವುದು ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕಾವು ಜೋರಾಗಿದ್ದು, ಮೂರೂ ಪಕ್ಷದ ಮುಖಂಡರು ಗ್ರಾಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಇದರಿಂದ ಚುನಾವಣೆ ಹೊತ್ತಿನಲ್ಲಿ ಇನ್ನಷ್ಟುಕೆಲವು ಮಂದಿ ತಮ್ಮ ಮೂಲ ಪಕ್ಷ ತೊರೆದು ಇತರೆ ಪಕ್ಷಕ್ಕೆ ಪಕ್ಷಾಂತರಗೊಳ್ಳುವ ಸಾಧ್ಯತೆಗಳಿದೆ. ಇದಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಂದ ಕಸರತ್ತು ಕೂಡ ನಡೆಯುತ್ತಿದೆ.
ಅತ್ತ ಡಿಕೆಸು ಚುರುಕು - ಇತ್ತ ಅನಿತಾ ಬಿರುಸು : ತಣ್ಣಗಿರುವ ಬಿಜೆಪಿಗರು .
ಕೊಡಗು ಜಿಲ್ಲಾ ಬಿಎಸ್‌ಪಿ ಅಧ್ಯಕ್ಷರಾಗಿದ್ದ ರಫೀಕ್, ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿದ್ದ ನಾಗೇಶ್ ಪೂಜಾರಿ ಅವರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಕುಶಾಲನಗರ, ಹಾಕತ್ತೂರು ಭಾಗದಿಂದ ಜೆಡಿಎಸ್‌ಗೆ ಕೆಲವರು ಸೇರ್ಪಡೆಯಾಗಿದ್ದಾರೆ. ನಾಪೋಕ್ಲು ಗ್ರಾ.ಪಂ. ಮಾಜಿ ಸದಸ್ಯ ಹನೀಫ್ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲಿತ, ನಾಪೋಕ್ಲು ಗ್ರಾ.ಪಂ. ಸದಸ್ಯ ಚೋಕಿರ ರೋಶನ್ ಅವರು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದು, ಈ ಬಾರಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಎಮ್ಮೆಮಾಡುವಿನ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿದೆ ಎನ್ನಲಾಗುತ್ತಿದೆ. ಈ ಬಾರಿ ಅವರನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನಾಗಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಲಾಗುವುದು. ಚೆಟ್ಟಳ್ಳಿ ಗ್ರಾಪಂ ಉಪಾಧ್ಯಕ್ಷ, ಕಾಂಗ್ರೆಸ್‌ನ ಡೆನ್ನಿ ಬರೋಸ್, ಮರಗೋಡು ಗ್ರಾಪಂ ಅಧ್ಯಕ್ಷ ಬಿಜೆಪಿ ಮೋಹನ್ ಜೆಡಿಎಸ್ ಸೇರ್ಪಡೆಯಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೊಡಗಿನಲ್ಲಿ 14 ತಿಂಗಳಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳಿಂದಾಗಿ ಜೆಡಿಎಸ್‌ನತ್ತ ಇತರೆ ಪಕ್ಷದ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಮಾಜಿ ಸಚಿವ ಜೀವಿಜಯ ಅವರು ನಮ್ಮ ಪಕ್ಷ ಬಿಟ್ಟು ಹೋದರೆ ನಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ ಕೆ.ಎಂ. ಗಣೇಶ್.
ವಿರಾಜಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಚೇಂದಂಡ ನೀವಿನ್ ಅವರ ನೇತೃತ್ವದಲ್ಲಿ ಎರಡು ತಿಂಗಳ ಹಿಂದಷ್ಟೇ 70ಕ್ಕೂ ಅಧಿಕ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಾವಾಗಿ ಯಾರನ್ನೂ ಪಕ್ಷಕ್ಕೆ ಸೇರಿ ಎಂದು ಒತ್ತಾಯ ಮಾಡುವುದಿಲ್ಲ. ನಮ್ಮ ಪಕ್ಷದ ತತ್ವ ಸಿದ್ಧಾಂತ ಅರಿತುಕೊಂಡು ಪಕ್ಷಕ್ಕೆ ಆಗಮಿಸುವವರನ್ನು ಸ್ವಾಗತ ಮಾಡುತ್ತೇವೆ ಎನ್ನುತ್ತಾರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ.
ವಿರಾಜಪೇಟೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಕಾಂಗ್ರೆಸ್ ಪಕ್ಷಕ್ಕೆ 20 ಮಂದಿ ಇತ್ತೀಚೆಗಷ್ಟೇ ಸೇರ್ಪಡೆಗೊಂಡಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 4, 2020, 3:45 PM IST