2 ತಿಂಗಳಿಂದ ಬಿಎಸ್‌ಎನ್‌ಎಲ್‌ ಸ್ವಿಚ್ಡ್‌ ಆಫ್‌..!

*  ಬರಸಿಡಿಲಿಗೆ ನಿಷ್ಕ್ರೀಯಗೊಂಡಿರುವ ಹೇರೂರು, ಕುಂಬಾರುಕುಡಿಗೆ ಮೊಬೈಲ್‌ ಟವರ್‌ಗಳು
*  ದೂರವಾಣಿ ವಿನಿಮಯ ಕೇಂದ್ರದಲ್ಲಿ ಯಾವೊಬ್ಬ ಸಿಬ್ಬಂದಿಯೂ ಇಲ್ಲ
*  ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ 
 

BSNL Mobile Service Not Available for Last 2 Months at Herur in Chikkamagaluru grg

ಕೊಪ್ಪ(ಮೇ.13): ತಾಲೂಕಿನ ಮೇಗುಂದಾ ಹೋಬಳಿ ವ್ಯಾಪ್ತಿಯ ಹೇರೂರು ಹಾಗೂ ಕುಂಬಾರುಕುಡಿಗೆಯ ಬಿಎಸ್‌ಎನ್‌ಎಲ್‌(BSNL) ಮೊಬೈಲ್‌ ಟವರ್‌ಗಳು ಕಳೆದ ಎರಡು ತಿಂಗಳಿನಿಂದ ಪದೇ ಪದೇ ನಿಷ್ಕ್ರೀಯಗೊಳ್ಳುತ್ತಿವೆ. ಬಿಎಸ್‌ಎನ್‌ಎಲ್‌ ಗ್ರಾಹಕರು ಕರೆ ಹಾಗೂ ಇಂಟರ್‌ನೆಟ್‌(Internet) ಬಳಕೆ ಮಾಡಲು ಸಾಧ್ಯವಾಗದೇ, ತೊಂದರೆ ಜತೆಗೆ ಆರ್ಥಿಕ ನಷ್ಟವನ್ನೂ ಅನುಭವಿಸುತ್ತಿದ್ದಾರೆ.

ಸ್ಥಳೀಯ ಕೆನರಾ ಬ್ಯಾಂಕ್‌, ಪಿಎಸಿಎಸ್‌, ಹೇರೂರು ಗ್ರಾಮ ಪಂಚಾಯತಿ ಮತ್ತು ಹೇರೂರು ಪಡಿತರ ವಿತರಣಾ ಕೇಂದ್ರದಲ್ಲಿ ಇಂಟರ್‌ನೆಟ್‌ ಸೌಲಭ್ಯ ಇಲ್ಲದೇ ಗ್ರಾಹಕರು(Customers) ಪರದಾಡುವಂತಾಗಿದೆ. ಸಮಸ್ಯೆ ಸರಿಪಡಿಸಬೇಕಾಗಿದ್ದ ಬಿಎಸ್‌ಎನ್‌ಎಲ್‌ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಜನೆ ಮಾಡುವ ಜನ ಕಾಂಗ್ರೆಸ್ಸಿಗೆ ಉಗ್ರರಂತೆ ಕಾಣುತ್ತಾರೆ: ಸಿಟಿ ರವಿ

ಹೇರೂರು ಹಾಗೂ ಕುಂಬಾರುಕುಡಿಗೆಯ ಮೊಬೈಲ್‌ ಟವರ್‌ಗಳು(Mobile Tower) ಕಳೆದ ವಾರ ಸಿಡಿಲು ಬಡಿದ ಕಾರಣ ಸಂಪೂರ್ಣವಾಗಿ ಒಂದು ವಾರ ನಿಷ್ಕ್ರೀಯಗೊಂಡಿದ್ದವು. ವಾರದ ನಂತರ ಟವರ್‌ ದುರಸ್ತಿ ಮಾಡಲಾಯಿತು. ಆದರೂ ಆಗಾಗ ಸಿಗ್ನಲ್‌(Signal) ಸ್ಥಗಿತಗೊಂಡು ಜನರು ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಬಿಎಸ್‌ಎನ್‌ಎಲ್‌ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಹೇರೂರು ಟವರ್‌ ನಿಷ್ಕ್ರೀಯಗೊಳ್ಳುತ್ತಿರುವ ಕಾರಣ ಹೇರೂರು, ಹಿಳ್ಳಿಕೆರೆ, ರವಿನಗರ, ಕಟ್ಟೆಗದ್ದೆ, ದೂಬ್ಳ, ಎಲೆಮಡಿಲು ಸೇರಿದಂತೆ ಹತ್ತಾರು ಗ್ರಾಮಗಳು ಹಾಗೂ ಕುಂಬಾರುಕೊಡಿಗೆ ಟವರ್‌ ನಿಷ್ಕ್ರೀಯಗೊಳ್ಳುವುದರಿಂದ ಸ್ಥೀರೂರು, ಹುತ್ತಿನಗದ್ದೆ, ಕಲ್ಲುಕೊರೆ, ಹೊಸಕೊಪ್ಪ, ಕುಂಬಾರುಕುಡಿಗೆ, ತೋಟದಮನೆ ಸೇರಿದಂತೆ ಅನೇಕ ಗ್ರಾಮಗಳ ಜನರು ಬಿಎಸ್‌ಎನ್‌ಎಲ್‌ ಸಿಗ್ನಲ್‌ ಹಾಗೂ ಇಂಟರ್‌ನೆಟ್‌ ಸಂಪರ್ಕದಿಂದ ವಂಚಿತರಾಗಿದ್ದಾರೆ. ಪರಿಣಾಮ ವಿಪರೀತ ತೊಂದರೆ ಅನುಭವಿಸುವಂತಾಗಿದೆ. ಈ ಭಾಗದಲ್ಲಿನ ಸಾವಿರಕ್ಕೂ ಹೆಚ್ಚು ಬಿಎಸ್‌ಎನ್‌ಎಲ್‌ ಗ್ರಾಹಕರು ಮೊಬೈಲ್‌(Mobile) ಸಂಪರ್ಕ ಕಳೆದುಕೊಂಡು ಪರದಾಡುತ್ತಿದ್ದಾರೆ. ಬ್ಯಾಂಕ್‌ ಸೇರಿದಂತೆ ಇತರೇ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳಾಗದೇ ಗ್ರಾಮಸ್ಥರು ಪರದಾಡುವಂತಾಗಿದೆ.

ಖಾಸಗಿ ಮೊಬೈಲ್‌ ಕಂಪನಿಗಳ(Private Mobile Companies) ಆಮಿಷಕ್ಕೆ ಬಲಿಯಾಗಿರುವ ಹಿರಿಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಟವರ್‌ ದುರಸ್ತಿ ಮಾಡದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಹಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಮೊದಲ ಬಾರಿ ಸಚಿವ ಸ್ಥಾನದ ಆಸೆ ಕೈಬಿಟ್ಟ ಶಾಸಕ ಕುಮಾರಸ್ವಾಮಿ!

ಇಲ್ಲಿನ ಗ್ರಾಹಕರ ಸಮಸ್ಯೆ ಸರಿಪಡಿಸಲು ಹೇರೂರಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರದಲ್ಲಿ ಯಾವೊಬ್ಬ ಸಿಬ್ಬಂದಿಯೂ ಇಲ್ಲ. ಇಲ್ಲಿನ ಟವರ್‌ಗಳ ನಿರ್ವಹಣೆಗೆ ಸಂಬಂಧಿಸಿದ ಕೊಪ್ಪದ ಬಿಎಸ್‌ಎನ್‌ಎಲ್‌ ಜೆಟಿಒ ಯಾವೊಬ್ಬ ಗ್ರಾಹಕರ ಫೋನ್‌ ಕರೆಯನ್ನೂ ಸ್ವೀಕರಿಸಿತ್ತಿಲ್ಲ. ಕೂಡಲೇ ಸಂಬಂಧಪಟ್ಟ ಬಿಎಸ್‌ಎನ್‌ಎಲ್‌ ಹಿರಿಯ ಅಧಿಕಾರಿಗಳು ಎರಡೂ ಟವರ್‌ಗಳಲ್ಲಿ ಆಗಿರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ, ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಕೊಪ್ಪದ ಬಿಎಸ್‌ಎನ್‌ಎಲ್‌ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಸೌಲಭ್ಯ ವಂಚಿತರು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಹೇರೂರಿನ ಬಿಎಸ್‌ಎನ್‌ಎಲ್‌ ಟವರ್‌ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಎರಡು ತಿಂಗಳಿನಿಂದ ಕಚೇರಿ ಕೆಲಸ ನಿರ್ವಹಿಸಲು ಸಮಸ್ಯೆ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಿಂದ ಬರುವ ಬಡ ಕೂಲಿ ಕಾರ್ಮಿಕರಿಗೆ ಆಧಾರ್‌, ರೇಷನ್‌ ಕಾರ್ಡ್‌ ಹಾಗೂ ಪಂಚತಂತ್ರ ಸೇರಿದಂತೆ ಸರ್ಕಾರದ ಸೇವೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಟವರ್‌ ದುರಸ್ತಿಗೊಳಿಸಬೇಕು ಅಂತ ಹೇರೂರು ಗ್ರಾಪಂ ಪಿಡಿಒ ಮಹೇಶ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios