ಬೆಂಗಳೂರು[ಆ.05]: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಅನಗತ್ಯ ವೆಚ್ಚವಾಗುತ್ತಿರುವ ಹಿನ್ನೆಲೆಯಲ್ಲಿ ಬಜೆಟ್‌ ಪರಿಶೀಲನೆ ನಡೆಸುವ ಉದ್ದೇಶದಿಂದ ಅನುಮೋದನೆಗೆ ತಡೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಹಣವು ಬೇಕಾಬಿಟ್ಟಿಯಾಗಿ ಹಣ ದುಂದುವೆಚ್ಚವಾಗುತ್ತಿದೆ. ಪರಿಶೀಲನೆ ನಡೆಸಬೇಕಾಗಿರುವ ಕಾರಣ ಅನುಮೋದನೆಗೆ ತಡೆ ನೀಡಲಾಗಿದೆ ಎಂದು ಹೇಳಿದರು.

ಅನಗತ್ಯ ಪಾದಚಾರಿ ಮಾರ್ಗವನ್ನು ಕಿತ್ತು ರಿಪೇರಿ ಕೆಲಸ ಮಾಡುತ್ತಿದ್ದಾರೆ. ವೈಟ್‌ ಟಾಪಿಂಗ್‌ನಲ್ಲಿಯೂ ಅನಗತ್ಯ ವೆಚ್ಚ ಮಾಡಲಾಗುತ್ತಿದೆ. ನಗರದ ಅಭಿವೃದ್ಧಿ ಕಾರ್ಯ ನಿಲ್ಲಿಸುವುದು ನಮ್ಮ ಉದ್ದೇಶವಲ್ಲ. ಮನಬಂದಂತೆ ಮಾಡುವ ವೆಚ್ಚಕ್ಕೆ ಕಡಿವಾಣ ಹಾಕಬೇಕು. ಯಾವುದೇ ಕಾಮಗಾರಿಗಳಿಗೆ ಅಂದಾಜು ಮಾಡಿ ವೆಚ್ಚ ಮಾಡಬೇಕು. ಆದರೆ, ಬಿಬಿಎಂಪಿಯನ್ನು ಅದು ನಡೆಯುತ್ತಿಲ್ಲ ಎಂದು ಕಿಡಿಕಾರಿದರು.

ಮೂರು ದಿನಗಳ ಕಾಲ ದೆಹಲಿಗೆ ತೆರಳುತ್ತಿದ್ದು, ವಾಪಸ್‌ ಬಂದ ಬಳಿಕ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಕಸದ ಸಮಸ್ಯೆ ಹೆಚ್ಚಾಗಿದೆ. ದೆಹಲಿಯಿಂದ ಬರುವಷ್ಟರಲ್ಲಿ ಈ ಸಮಸ್ಯೆ ಬಗೆಹರಿದಿರಬೇಕು. ನಗರದ ಯಾವುದೇ ಭಾಗದಲ್ಲಿಯೂ ತ್ಯಾಜ್ಯ ಸಮಸ್ಯೆ ಇರಬಾರದು. ಒಂದು ವೇಳೆ ಕಸದ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.