ದಾವಣಗೆರೆ(ಜು.27): ಸ್ಪಷ್ಟಬಹುಮತ ಇಲ್ಲದಿದ್ದರೂ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಭ್ರಷ್ಟರಾಜಕಾರಣಿ ಬಿ.ಎಸ್‌.ಯಡಿಯೂರಪ್ಪಗೆ ಸರ್ಕಾರ ರಚಿಸಲು ಆಹ್ವಾನಿಸಿದ ರಾಜ್ಯಪಾಲ ವಜುಬಾಯಿವಾಲಾ ನಡೆಯನ್ನು ಕೆಎಸ್‌ಐಸಿ ಮಾಜಿ ಅಧ್ಯಕ್ಷ, ಕೆಪಿಸಿಸಿ ಮುಖಂಡ ಡಿ.ಬಸವರಾಜ ತೀವ್ರವಾಗಿ ಖಂಡಿಸಿದ್ದಾರೆ.

ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಆರೇ ತಿಂಗಳು ಆಯುಷ್ಯ

ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟಬಹುಮತವೇ ಇಲ್ಲ. ಅಕ್ರಮ ಹಾಗೂ ಅನೈತಿಕ ಅಡ್ಡ ದಾರಿಗಳಿಂದ ಮುಖ್ಯಮಂತ್ರಿ ಹುದ್ದೆಯನ್ನು ಯಡಿಯೂರಪ್ಪ ಅಲಂಕರಿಸುತ್ತಿರುವುದು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬಗೆದ ಅಪಚಾರವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನೈತಿಕ ಸರ್ಕಾರ ರಚನೆ: ಪ್ರಮಾಣ ವಚನ ಸಮಾರಂಭಕ್ಕೆ ಬರಲು ಮೋದಿ, ಶಾಗೆ ಮುಖವಿಲ್ಲ:

ಅನೈತಿಕ ಸರ್ಕಾರ ರಚನೆ ಹಿನ್ನೆಲೆ ಯಡಿಯೂರಪ್ಪ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ಮೋದಿಯಾಗಲೀ, ಅಮಿತ್‌ ಶಾ ಆಗಲಿ ಬರಲು ಮುಖವಿಲ್ಲ. ಅಕ್ರಮ ಹಾಗೂ ಅನೈತಿಕವಾಗಿ ಅಧಿಕಾರಕ್ಕೆ ಬರುತ್ತಿರುವ ಯಡಿಯೂರಪ್ಪ ಸರ್ಕಾರಕ್ಕೆ ಭವಿಷ್ಯವಂತೂ ಇಲ್ಲ ಎಂದಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈಗಾಗಲೇ 3 ಸಲ ಭಾರೀ ಪ್ರಮಾಣ ವಚನ ಸ್ವೀಕರಿಸಿರುವ ಯಡಿಯೂರಪ್ಪ ತಮ್ಮ ರಾಜಕೀಯ ಜೀವನದಲ್ಲಿ ಒಮ್ಮೆಯೂ ಜನರ ಮನ್ನಣೆಯನ್ನು ಪೂರ್ಣ ಪ್ರಮಾಣದಲ್ಲಿ ಪಡೆದಿಲ್ಲ ಎಂದು ಟೀಕಿಸಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡಲು ಸಾಧ್ಯವೇ ಇಲ್ಲ. ಬಿಜೆಪಿ ಆಡಳಿತ ಅಲ್ಪ ದಿನಕ್ಕೆ ಕುಸಿಯಲಿದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ ಎಂದಿದ್ದಾರೆ.