ಧಾರವಾಡ (ಸೆ.21): ನವಲೂರು ಬಳಿಯ ಬಿಆರ್‌ಟಿಎಸ್‌ನ ಅಪೂರ್ಣಗೊಂಡ ಸೇತುವೆ ಕುಸಿದು ಬಿದ್ದಿರುವುದಕ್ಕೆ ಶಾಸಕ ಅರವಿಂದ ಬೆಲ್ಲದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಕಾರಣರಾದವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹಾಕಲು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೇತುವೆ ಕುಸಿಯುವ ಕುರಿತು ಸ್ಥಳೀಯರು ಒಂದು ವರ್ಷದ ಹಿಂದೆಯೇ ತಮಗೆ ಮಾಹಿತಿ ನೀಡಿದ್ದರು. ಈ ಕುರಿತು ಬಿಆರ್‌ಟಿಎಸ್‌ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಇದೀಗ ಸೇತುವೆ ಕಂಬವು ಕುಸಿದಿದೆ. ಹೀಗಾಗಿ ಈ ಬಗ್ಗೆ ತನಿಖೆಯಾಗಿ ಮಾಡಿ ತಪ್ಪಿತಸ್ಥರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೇರಲು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.

ಬಿಆರ್‌ಟಿಎಸ್‌ ಯೋಜನೆ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬೆಲ್ಲದ ಇಡೀ ಯೋಜನೆಯೇ ಸರಿಯಾಗಿಲ್ಲ. ಸರ್ಕಾರದಿಂದ ಅಗತ್ಯ ಅನುದಾನ ಬಂದಿದ್ದು ಸರಿಯಾಗಿ ಕೆಲಸ ಮಾಡಬೇಕಿದ್ದ ಅಧಿಕಾರಿಗಳು, ಎಂಜಿನಿಯರ್‌ಗಳು ಉತ್ತಮ ಯೋಜನೆಯೊಂದನ್ನು ಹಾಳು ಮಾಡಿದ್ದಾರೆ. ಅದಕ್ಕೆ ರಾಜಕಾರಣಿಗಳು ಹೇಗೆ ಕಾರಣರಾಗುತ್ತಾರೆ? ಎಂದರು.

ಏಕಕಾಲಕ್ಕೆ 201 ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ: ಸಚಿವ ಶೆಟ್ಟರ್‌

ಶೀಘ್ರ ರಸ್ತೆ ಸುಧಾರಣೆ:  ಧಾರವಾಡದ ಹದಗೆಟ್ಟರಸ್ತೆಗಳ ಕುರಿತು ಪ್ರತಿಕ್ರಿಯೆ ನೀಡಿದ ಬೆಲ್ಲದ, ಗಾಂಧಿನಗರ, ಕೆಲಗೇರಿಯ ಕುಸುಮನಗರ, ಮಂಜುನಾಥಪುರ ಸೇರಿದಂತೆ ನಗರದ ಐದು ಪ್ರಮುಖ ರಸ್ತೆಗಳು ಹದಗೆಟ್ಟಿವೆ. ಇವು ಕಳೆದ ವರ್ಷವೇ ಸುಧಾರಣೆಯಾಗಬೇಕಿತ್ತು. ಆಗ ಅತಿವೃಷ್ಟಿಈಗ ಕೊರೋನಾ ಹಿನ್ನೆಲೆಯಲ್ಲಿ ತಡವಾಗಿದ್ದು, ಅವುಗಳ ಸುಧಾರಣೆ ಆಗದೇ ಇರುವುದಕ್ಕೆ ಜನತೆಯಲ್ಲಿ ನಾನು ಕ್ಷಮೆ ಕೇಳುತ್ತೇನೆ. ಈ ಕುರಿತು ಪಾಲಿಕೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು ಮಳೆ ನಿಂತ ಕೂಡಲೇ ನವೆಂಬರ್‌ನಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
 
ಈಗಾಗಲೇ ಪಕ್ಷವು ನನಗೆ ಶಾಸಕರಾಗುವ ಅವಕಾಶ ಒದಗಿಸಿಕೊಟ್ಟಿದೆ. ಶಾಸಕರಾದವರು ಎಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದು ನಾನು ಸಹ. ಆದರೆ, ಪಕ್ಷದ ನಾಯಕತ್ವ ಉತ್ತಮವಾಗಿದ್ದು ಯಾವ ಸಂದರ್ಭದಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆಯೋ ಅದಕ್ಕೆ ನಾನು ಬದ್ಧ. ಓರ್ವ ಶಾಸಕನಾಗಿ, ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಮಂತ್ರಿಗಿಂತೂ ಹೆಚ್ಚಿನ ಕೆಲಸ ಮಾಡುತ್ತಿದ್ದೇನೆ. ಮಂತ್ರಿಗಿರಿ ಬೇಕೆಂದು ಪಕ್ಷಕ್ಕೆ ನಾನಾಗಿಯೇ ಕೇಳುವ ಅಗತ್ಯತೆ ಇಲ್ಲ.

ಅರವಿಂದ ಬೆಲ್ಲದ ಶಾಸಕರು

(ಸಾಂದರ್ಭಿಕ ಚಿತ್ರ)