ಸಿಡಿಲಾರ್ಭಟಕ್ಕೆ ವಿಜಯಪುರದಲ್ಲಿ ಸಹೋದರರು ಬಲಿ, ಸಿಡಿಲಿನ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ತಿಳಿಯಿರಿ
•ಬರದ ನಾಡಲ್ಲಿ ವರುಣನ ಅಬ್ಬರ..!
•ಸಿಡಿಲಾರ್ಭಟಕ್ಕೆ ವಿಜಯಪುರದಲ್ಲಿ ಸಹೋದರರು ಬಲಿ..!
•ಪ್ರತ್ಯೇಕ ಎರೆಡು ಪ್ರಕರಣದಲ್ಲಿ 17 ಕುರಿಗಳ ಸಾವು..!
•ಸಿಡಿಲು ಆರ್ಭಟಿಸುವಾಗ ಮುನ್ನೆಚ್ಚರಿಗೆ ಹೇಗೆ ತೆಗೆದುಕೊಳ್ಳಬೇಕು..!
ವರದಿ-ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್..
ವಿಜಯಪುರ (ಏ18): ಜಿಲ್ಲೆಯಲ್ಲಿ ಬೇಸಿಗೆಯೋ ಮಳೆಗಾಲವೋ ಅನ್ನೋದೆ ತಿಳಿಯುತ್ತಿಲ್ಲ. ಆ ಮಟ್ಟಿದೆ ವರುಣನ ಆರ್ಭಟ ಶುರುವಾಗಿದೆ. ವಿಪರ್ಯಾಸ ಅಂದ್ರೆ ಒಂದೆಡೆ ಅಕಾಲಿಕ ಮಳೆಗೆ ರೈತರ ಬೆಳೆ ನಾಶವಾದ್ರೆ, ಇತ್ತ ಸಿಡಿಲಿನ ಹೊಡೆತಕ್ಕೆ ಜೀವಗಳೇ ಬಲಿಯಾಗಿವೆ..
ಸಿಡಿಲು ಬಡಿದು ಕುರಿಗಾಯಿ ಸಹೋದರರ ಸಾವು..!
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಸವನ ಬಾಗೇವಾಡಿ, ಕೊಲ್ಹಾರ ಸೇರಿ ಕೆಲ ತಾಲೂಕುಗಳಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಜೊತೆಗೆ ಸಿಡಿಲಿನ ಅಬ್ಬರಕ್ಕೆ ಜೀವಗಳೇ ಹೋಗಿವೆ. ಕೊಲ್ಹಾರ ತಾಲೂಕಿನ ಚಿರಲದಿನ್ನಿ ಗ್ರಾಮದಲ್ಲಿ ಜಮೀನೊಂದರಲ್ಲಿ ಕುರಿ ನಿಲ್ಲಿಸಿಕೊಂಡಿದ್ದ ಕುರಿಗಾಯಿ ಸಹೋದರರಿಬ್ಬರು ಸಿಡಿಲಿನ ಹೊಡೆತಕ್ಕೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೀರಪ್ಪ ಶಿವಪ್ಪ ಬಡೆಗೋಳ (20), ಮಹೇಶ ಸತ್ಯಪ್ಪ ಬಡೆಗೋಳ(14) ಸಾವನ್ನಪ್ಪಿದ್ದಾರೆ.. ಇಬ್ಬರು ಸಹ ಸಹೋದರ ಸಂಬಂಧಿಗಳು.. ಸಂಬಂಧದಲ್ಲಿ ಇಬ್ಬರು ಅಣ್ಣತಮ್ಮಂದಿರು ಎನ್ನಲಾಗಿದೆ.. ಸಹೋದರರ ಜೊತೆಗೆ ಇದ್ದ 9 ಕುರಿಗಳು ಸಹ ಸಿಡಿಲ ಬಡಿತಕ್ಕೆ ಸಾವನ್ನಪ್ಪಿವೆ..
Karnataka Rains: ಕರ್ನಾಟಕದಲ್ಲಿ ಮುಂದಿನ 4 ದಿನ ಗುಡುಗು, ಸಿಡಿಲು ಸಹಿತ ಭಾರೀ ಮಳೆ..!
ಕುರಿಕಾಯಲು ಬೆಳಗಾವಿ ಜಿಲ್ಲೆಯಿಂದ ಬಂದಿದ್ದರು..!
ಕುರಿ ಕಾಯುವುದನ್ನೆ ಕಾಯಕ ಮಾಡಿಕೊಂಡಿದ್ದ ಬಡೆಗೋಳ ಕುಟುಂಬಸ್ಥರು ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದವರು. ಬದುಕು ಕಟ್ಟಿಕೊಳ್ಳಲು ಕುರಿಗಳ ಸಮೇತ ವಿಜಯಪುರ ಜಿಲ್ಲೆಗೆ ಬಂದಿದ್ದರು.. ಇಂದು ಸಾಯಂಕಾಲ ಕುರಿಗಳ ಸಮೇತ ಚಿರಲದಿನ್ನಿ ಗ್ರಾಮದ ಜಮೀನೊಂದಕ್ಕೆ ಬಂದಿದ್ದಾರೆ. ಈ ವೇಳೆ ಮಳೆ ಬರುತ್ತಿರೋದನ್ನ ಕಂಡ ಸಹೋದರರು ಕುರಿಗಳ ಸಮೇತ ಆಶ್ರಯ ಹುಡುಕಿ ಹೊರಟಾಗಲೇ ಸಿಡಿಲು ಬಡಿದಿದೆ. ಸ್ಥಳದಲ್ಲಿ ಇಬ್ಬರು ಸಹೋದರರು ಅಸುನೀಗಿದ್ದು, 9 ಕುರಿಗಳು ಸಾವನ್ನಪ್ಪಿವೆ.
ಹುಣಸ್ಯಾಳ ಪಿಸಿ ಗ್ರಾಮದಲ್ಲು ಸಿಡಿಲಾರ್ಭಟ..!
ಇನ್ನು ಇತ್ತ ಹುಣಸ್ಯಾಳ ಪಿ.ಸಿ ಗ್ರಾಮದಲ್ಲು ಸಿಡಿಲು ಆರ್ಭಟಿಸಿದೆ. ಜಮೀನಿನಲ್ಲಿದ್ದ ಕುರಿಗಳ ಹಿಂಡಿಗೆ ಸಿಡಿಲು ಬಡೆದಿದ್ದು 8 ಕುರಿಗಳು ಅಸುನೀಗಿವೆ. 3 ಕುರಿಗಳಿಗೆ ಗಾಯಗಳಾಗಿವೆ. ಇದೆ ಗ್ರಾಮದ ರುದ್ರಪ್ಪ ಸಂಗಪ್ಪ ಹುಣಶೀಕಟ್ಟಿ ಎಂಬುವರಿಗೆ ಸೇರಿದ ಕುರಿಗಳಾಗಿವೆ..
ಪರಿಹಾರಕ್ಕೆ ಆಗ್ರಹ..!
ಸಿಡಿಲಿಗೆ ಬಲಿಯಾದ ಸಹೋದರರ ಕುಟುಂಬಕ್ಕೆ ಜಿಲ್ಲಾಡಳಿತ ಪರಿಹಾರ ನೀಡಬೇಕು.. ಸಿಡಿಲಾರ್ಭಟಕ್ಕೆ ಸಾವನ್ನಪ್ಪಿದ ಕುರಿಗಳ ಸಾವಿಗು ಕುರಿಗಾಯಿಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ..
ಸಿಡಿಲು ಅಬ್ಬರಿಸುವಾಗ ಬಯಲಲ್ಲಿ ನಿಲ್ಲಬೇಡಿ..!
ಸಿಡಿಲಿನ ಬಗ್ಗೆ ಎಷ್ಟೇ ಮುನ್ನೆಚ್ಚರಿಕೆ ಸಲಹೆಗಳನ್ನ ನೀಡಿದ್ರು ರೈತರು, ಕುರಿಗಾಯಿಗಳು ಬಲಿಯಾಗುತ್ತಲೆ ಇದ್ದಾರೆ. ಸಿಡಿಲಿನಿಂದ ತಪ್ಪಿಸಿಕೊಳ್ಳುವು ಹೇಗೆ ಎನ್ನುವುದರ ಬಗ್ಗೆ ತಜ್ಞರು ಕೆಲ ಮಾಹಿತಿಗಳನ್ನ ನೀಡಿದ್ದಾರೆ. ಸಿಡಿಲು ಕಾಣಿಸಿಕೊಂಡರೆ ಈ ವೇಳೆ ಮನೆ, ಸೂಕ್ತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು.. ಸಿಡಿಲು ಆರ್ಭಟಿಸುವಾಗ ರೈತರು ಜಮೀನಿನ ಬಯಲು ಪ್ರದೇಶಕ್ಕೆ ಹೋಗುವುದನ್ನ ಕೆಲ ಸಮಯದ ವರೆಗೆ ಮುಂದೂಡುವುದು ಒಳಿತು.. ಯಾವುದೇ ಕಾರಣಕ್ಕು ಮರಗಳ ಕೆಳಗೆ ಆಶ್ರಯ ಪಡೆಯಬಾರದು.. ಕುರಿಗಳನ್ನ ಶೆಡ್ ಗಳ ಒಳಗೆ ಹಾಕುವುದು ಉತ್ತಮ. ಸುತ್ತಮುತ್ತಲು ಸಿಡಿಲಿನಿಂದ ತಪ್ಪಿಸಿಕೊಳ್ಳಲು ಆಶ್ರಯ ಸಿಗದೆ ಇದ್ದ ಪಕ್ಷದಲ್ಲಿ ತಗ್ಗು ಪ್ರದೇಶಕ್ಕೆ ತೆರಳುವುದು ಒಳಿತು.
ಅಪಾಯ ಹಚ್ಚಾಗ್ತಿದೆ ಎಂದಾಗ ತಲೆಯನ್ನ ನೆಲಕ್ಕಿಟ್ಟು ಬೆನ್ನು ಮೇಲೆ ಮಾಡಿ ಕೂರಬೇಕು. ಇದರಿಂದ ಕೊಂಚ ಪ್ರಮಾಣದಲ್ಲಿ ಸಿಡಿಲಿನಿಂದಾಗುವ ಹೆಚ್ಚಿನ ಹಾನಿಯನ್ನ ತಡೆಯಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಸಿಡಿಲು ಬಯಲು ಪ್ರದೇಶದ ಎತ್ತರದ ಮರ, ಗಿಡ, ಮನುಷ್ಯರನ್ನ ಆಯ್ದುಕೊಳ್ಳುವ ಕಾರಣ ಎತ್ತರದ ಮರಗಳ ಕೆಳಗೆ ನಿಲ್ಲದಿರುವುದೇ ಉತ್ತಮ. ಸಿಡಿಲು ಅಬ್ಬರಿಸುವಾಗ ಸುರಕ್ಷಿತವಾಗಿ ಮನೆಯಲ್ಲಿ, ಆಶ್ರಯಗಳಲ್ಲಿ ಇರುವುದು ಉತ್ತಮಕಾರ್ಯ ಎನ್ನಲಾಗಿದೆ...