ಮದಲೂರು ಕೆರೆಗೆ ಹೇಮಾವತಿ ಹರಿಸಿ:ಮಾಜಿ ಶಾಸಕ ರಾಜೇಶ್ ಗೌಡ
ಮದಲೂರು ಕೆರೆಗೆ ನೀರು ಹರಿಸಿದರೆ ಹುಲಿಕುಂಟೆ ಹೋಬಳಿಯಲ್ಲಿ ಅಂತರ್ಜಲ ಹೆಚ್ಚಿ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಶಿರಾ: ಹೇಮಾವತಿ ಜಲಾಶಯದಿಂದ ಕುಡಿಯುವ ನೀರಿನ ಉದ್ದೇಶಕ್ಕೆ ತುಮಕೂರು ನಾಲೆಗೆ ನೀರು ಹರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಅದೇ ರೀತಿ ಶಿರಾ ತಾಲೂಕಿನ ಕಳ್ಳಂಬೆಳ್ಳ, ಶಿರಾ ಮತ್ತು ಮದಲೂರು ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕು. ಮದಲೂರು ಕೆರೆಗೆ ನೀರು ಹರಿಸಿದರೆ ಹುಲಿಕುಂಟೆ ಹೋಬಳಿಯಲ್ಲಿ ಅಂತರ್ಜಲ ಹೆಚ್ಚಿ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಅವರು ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದ ಕರೆಕಲ್ ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 50 ವರ್ಷಗಳಿಂದ ಅಭಿವೃದ್ಧಿ ಕಾಣದ ಗೊಲ್ಲರಹಟ್ಟಿಗಳ ಸರ್ವತೋಮುಖ ಅಭಿವೃದ್ಧಿಗೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಹೆಚ್ಚು ಆದ್ಯತೆ ನೀಡಿ ಕೋಟ್ಯಂತರ ರು. ಅನುದಾನ ನೀಡಿದ ಕಾರಣ ಗೊಲ್ಲರಹಟ್ಟಿಗಳು ಸಿಸಿ ರಸ್ತೆ ಮತ್ತು ಚರಂಡಿಯ ವ್ಯವಸ್ಥೆಯನ್ನು ನೋಡುವಂತಾಗಿದೆ. ಹಾಗೂ ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ೧ ಕೋಟಿ ರು. ಅನುದಾನ ಮಂಜೂರು ಮಾಡಿಸಿದ್ದೇನೆ. ಜೊತೆಗೆ ಗ್ರಾಮಗಳಲ್ಲಿರುವ ಸಣ್ಣ ಸಣ್ಣ ಸಮುದಾಯಗಳ ದೇವರಿಗೆ ಭವ್ಯ ದೇಗುಲ ನಿರ್ಮಾಣ ಮಾಡಬೇಕೆಂಬ ಒತ್ತಸೆಗೆ, ಹೆಚ್ಚು ಅನುದಾನ ನೀಡಿ ನೂರಾರು ದೇವಸ್ಥಾನ ಅಭಿವೃದ್ಧಿಪಡಿಸಿರುವುದು ಹೆಚ್ಚು ತೃಪ್ತಿ ನೀಡುತ್ತದೆ. ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗ ೫೦ ಲಕ್ಷ ವೆಚ್ಚದಲ್ಲಿ ಸಿಸಿ. ರಸ್ತೆ ಹಾಗೂ ಕೃಷ್ಣ ಕುಟೀರದ ಜೊತೆಗೆ ಜೆ.ಜೆ.ಎಂ. ಯೋಜನೆ ಅನುಷ್ಠಾನಗೊಳಿಸಿ ಮನೆ ಮನೆಗೆ ಕುಡಿಯುವ ನೀರು ಕೊಟ್ಟಿದ್ದೇವೆ ಎಂದರು.
ರಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ ಮಾತನಾಡಿ ಡಾ.ಸಿ.ಎಂ. ರಾಜೇಶ್ ಗೌಡ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಕಾಡುಗೊಲ್ಲರ ಅಭಿವೃದ್ಧಿಗೆ ಹಾಗೂ ಗೊಲ್ಲರಹಟ್ಟಿಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದ ಅವರು ದೇವರು ಸಂತೃಪ್ತನಾದರೆ ಭಕ್ತರು ಬೇಡಿದಂತ ಸಂಕಲ್ಪ ಈಡೇರಲಿದೆ, ಶ್ರದ್ಧೆ, ಭಕ್ತಿ ಮುಗ್ಧ ಮನಸ್ಸಿನ ಆರಾಧನೆ ದೇವರಿಗೆ ಹೆಚ್ಚು ಸಂತೋಷ ನೀಡಲಿದೆ. ಜಾತ್ರಾ ಮಹೋತ್ಸವಗಳು ಸ್ನೇಹ- ಸಂಬಂಧ ಗಟ್ಟಿಗೊಳಿಸುವಲ್ಲಿ ಹೆಚ್ಚು ಸಹಕಾರಿಯಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಮಾಜಿ ಸದಸ್ಯ ಚಿತ್ತಯ್ಯ, ಪೂಜಾರ್ ಜಯರಾಮಣ್ಣ, ಹೊಸೂರು ಪ್ರಕಾಶ್ ,ಮೂಡ್ಲಪ್ಪ, ಗಿರೀಶ್ ,ದಿನೇಶ್, ಸಂತೋಷ್, ಶಿವಕುಮಾರ್, ತಿಮ್ಮರಾಜ್, ವಿರೇಶ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.