ಪಾಂಡವಪುರ [ಡಿ.30]: ವಿವಾಹದ ವೇಳೆ ತಾಳಿ ಕಟ್ಟಿಸಿಕೊಳ್ಳಲು ಯುವತಿ ನಿರಾಕರಿಸಿದ ಹಿನ್ನೆಲೆ ಮದುವೆ ಮುರಿದು ಬಿದ್ದ ಘಟನೆ ಪಟ್ಟಣದ ಚರ್ಚ್‌ನಲ್ಲಿ ಭಾನುವಾರ ನಡೆದಿದೆ.

ಕ್ರೈಸ್ತ ಸಮುದಾಯಕ್ಕೆ ಸೇರಿದ ಜೋಸಿ ಪುತ್ರಿ ವೀಣಾ ಹಾಗೂ ಅದೇ ಮೈಸೂರಿನ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ಆದರೆ, ವೀಣಾ ಹಿಂದೂ ಧರ್ಮದ ಯುವಕನನ್ನು ಪ್ರೀತಿಸುತ್ತಿದ್ದಳು. ಯುವತಿ ಮನೆಯವರು ವಿರೋಧಿಸಿ ಮೈಸೂರಿನ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. 

ಇದಕ್ಕೆ ಯುವತಿ ವೀಣಾ ಸಹ ಮೊದಲು ಒಪ್ಪಿಗೆ ಸೂಚಿಸಿ ಮದುವೆಯ ಎಲ್ಲಾ ಧಾರ್ಮಿಕ ಸಂಪ್ರದಾಯಗಳಲ್ಲೂ ಪಾಲ್ಗೊಂಡಿದ್ದರು. ಭಾನುವಾರ ಬೆಳಗ್ಗೆ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದಂತೆ ಪಟ್ಟಣದ ಚರ್ಚ್‌ನಲ್ಲಿ ವಿವಾಹ ನಡೆಯುತ್ತಿತ್ತು. ಈ ವೇಳೆ ಫಾದರ್ ಹುಡುಗ ಮತ್ತು ಹುಡುಗಿಗೆ ಮದುವೆ ನಿಮಗೆ ಒಪ್ಪಿಗೆ ಇದೆಯಾ ಎಂದು ಕೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಹುಡುಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ತಾಳಿಕಟ್ಟುವ ವೇಳೆ ಯುವಕನಿಂದ ವೀಣಾ ತಾಳಿಕಟ್ಟಿಸಿಕೊಳ್ಳದೆ ಹಿಂದೆ ಸರಿದಿದ್ದಾಳೆ. ಈ ಬಗ್ಗೆ ಹುಡುಗಿಯನ್ನು ಪ್ರಶ್ನಿಸಿದಾಗ ನನಗೆ ಈ ಮದುವೆ ಇಷ್ಟವಿಲ್ಲ. ನಾನು ಮತ್ತೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಅವನನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದಾಳೆ.

ಘಟನೆ ನಂತರ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಹುಡುಗಿ ಮತ್ತು ಪ್ರೀತಿಸಿದ ಹುಡುಗ ನನ್ನು ವಶಕ್ಕೆ ಪಡೆದುಕೊಂಡರು. ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದರು. ಹುಡುಗ ಮತ್ತು ಹುಡುಗಿಯರ ಮನೆಯವರಿಬ್ಬರಿಗೂ ಮಾಹಿತಿ ನೀಡಿದರೂ ಸಹ ಇಬ್ಬರು ಮನೆಯವರು ಠಾಣೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಪೊಲೀಸರು ಹೇಳಿಕೆ ಪಡೆದುಕೊಂಡರು ಹುಡುಗಿಯನ್ನು ಮಂಡ್ಯದ ಸಾಂತ್ವಾನ ಕೇಂದ್ರಕ್ಕೆ ಬಿಡಲಾಗಿದೆ. ಹುಡುಗನನ್ನು ವಾಪಸ್ ಮನೆಗೆ ಕಳುಹಿಸಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.