ಸಾರಿಗೆ ಒಕ್ಕೂಟದ ಗೌರವಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ

ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಸಾರಿಗೆ ಒಕ್ಕೂಟದ ಗೌರವಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರನ್ನು ವಜಾ ಮಾಡಲಾಗಿದೆ.

bribery alligation, Honorary President of Transport Union Kodihalli chandrashekar sacked akb

ಬೆಂಗಳೂರು (ಜುಲೈ 11): ಸಾರಿಗೆ ಒಕ್ಕೂಟದ ಗೌರವಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರನ್ನು ವಜಾ ಮಾಡಲಾಗಿದೆ. ಸಾರಿಗೆ ನೌಕರರ ಮುಷ್ಕರ ಕೈಬಿಡಲು ಲಂಚ ಪಡೆದ ಆರೋಪ ಕೇಳಿ ಬಂದ ಹಿನ್ನೆಲೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekar) ಅವರನ್ನು ಗೌರವಾಧ್ಯಕ್ಷ ಸ್ಥಾನದಿಂದ ಕರ್ನಾಟಕ ರಾಜ್ಯ ಸಾರಿಗೆ ನೌಕರರ (Karnataka State transport employee union)ಒಕ್ಕೂಟ ವಜಾಗೊಳಿಸಿದೆ.

2021ರಲ್ಲಿ ಸಾರಿಗೆ ನೌಕರರ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ನಿತ್ಯ ಬಸ್ ಸಂಚಾರ ಬಂದ್ ಆಗಿದ್ದರಿಂದ ಜನ ಪರದಾಡುವಂತಾಯ್ತು. ಈ ಮುಷ್ಕರದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರು ಪ್ರತಿಭಟನೆ ಕೈಬಿಡಲು ಲಂಚ ಪಡೆದಿರುವ ಆರೋಪ ಈಗ ಕೇಳಿ ಬಂದಿದೆ. ಹಾಗಾಗಿ ಸಾರಿಗೆ ನೌಕರರ ಸಂಘದಿಂದ ರೈತ ಮುಖಂಡ  ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾ ಮಾಡಲಾಗಿದೆ.

ಯಾರು ಏನೇ ಹೇಳಿದರೂ ನಾನೇ ರೈತ ಸಂಘದ ಅಧ್ಯಕ್ಷ: ಕೋಡಿಹಳ್ಳಿ

ಇನ್ಮುಂದೆ  ಸಾರಿಗೆ ಒಕ್ಕೂಟಕ್ಕೂ ಕೋಡಿಹಳ್ಳಿ ಚಂದ್ರಶೇಖರ್‌ಗೂ ಯಾವುದೇ ಸಂಬಂಧ ಇಲ್ಲ. ಸಾರಿಗೆ ಸಂಸ್ಥೆಗಳ ಅಭಿವೃದ್ಧಿ ಮತ್ತು ನೌಕರರ ಹಿತ ಚಿಂತನೆಯ ಅಥವಾ ಯಾವುದೇ ವಿಚಾರದಲ್ಲೂ ಕೋಡಿಹಳ್ಳಿ ಭಾಗಿಯಾಗುವಂತಿಲ್ಲ ಎಂಬುದನ್ನು ಸಾರಿಗೆ ನೌಕರರ ಒಕ್ಕೂಟ ಸ್ಪಷ್ಟಪಡಿಸಿದೆ.

ರಾಜ್ಯಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ 

ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್‌ ಬಣದ ಸದಸ್ಯರ ಮೇಲೆ ಜೆಡಿಎಸ್‌ ಕಾರ್ಯಕರ್ತರು ಮಸಿ ಎರಚಿದ ಘಟನೆ ಕಳೆದ ಮೇ ತಿಂಗಳಲ್ಲಿ ನಡೆದಿತ್ತು. ಪತ್ರಿಕಾಗೋಷ್ಠಿ ನಡೆಸಲು ಬೆಂಗಳೂರಿನ ಪ್ರೆಸ್‌ಕ್ಲಬ್‌ಗೆ ಕೋಡಿಹಳ್ಳಿ ಚಂದ್ರಶೇಖರ್‌ ಮತ್ತಿತರೆ ರೈತ ಮುಖಂಡರು ಆಗಮಿಸುತ್ತಿದ್ದ ವೇಳೆ ಏಕಾಏಕಿ ಜೆಡಿಎಸ್‌ ಪಕ್ಷದ ಸದಸ್ಯರು ಕೋಡಿಹಳ್ಳಿ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡುತ್ತಾ ಮುನ್ನುಗ್ಗಿದರು. ಈ ವೇಳೆ ರೈತ ಸಂಘ ಮತ್ತು ಜೆಡಿಎಸ್‌ ಪಕ್ಷದ ಸದಸ್ಯರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಈ ಹಂತದಲ್ಲಿ ರೈತರ ಮೇಲೆ ಕಪ್ಪು ಬಣ್ಣ ಎರಚಲಾಗಿತ್ತು.

ರೈತ ಸಂಘದ ಹೆಸರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ದಂಧೆ ನಡೆಸುತ್ತಿದ್ದಾರೆ. ಪ್ರತಿಭಟನೆಗೆ ಸಾರಿಗೆ ನೌಕರರು ಮುಂದಾದಾಗ ನೇತೃತ್ವ ವಹಿಸಿದ್ದ ಅವರು ಹಣ ಪಡೆದು ಪ್ರತಿಭಟನೆ ಕೈಬಿಟ್ಟಿದ್ದಾರೆ. ಈ ಸಂಬಂಧ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಜೆಡಿಎಸ್‌ ಕಾರ್ಯಕರ್ತರು ಆರೋಪಿಸಿದ್ದರು. ಘಟನೆಯಲ್ಲಿ ಇಬ್ಬರು ರೈತ ಸಂಘದ ಕಾರ್ಯಕರ್ತರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದರು. 

ಘಟನೆ ಸಂಬಂಧ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್‌, ರೈತ ಸಂಘದ ಕಾರ್ಯಕರ್ತರ ಮೇಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಬೆಂಬಲಿಗರಿಂದ ದಾಳಿ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆ ಬಗ್ಗೆ ಹತಾಶರಾಗಿ ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ನನ್ನ ಹೋರಾಟಕ್ಕೆ ಸಂಬಂಧಿಸಿದಂತೆ ಗೊಂದಲವಿದ್ದಲ್ಲಿ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ಆದರೆ, ನನ್ನ ಹೋರಾಟದ ಕುರಿತು ಚಾರಿತ್ರ್ಯವಧೆ ಮಾಡುವುದರಿಂದ ನಿಮ್ಮ ಪಕ್ಷಕ್ಕೆ ಯಾವುದೇ ಲಾಭವಾಗುವುದಿಲ್ಲ ಎಂದರು. ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ಜಾರಿ ಮಾಡುತ್ತಿರುವ ರೈತ ಕಾಯ್ದೆಗಳ ಪರವಾಗಿ ಇದ್ದಾರೆ. ಇದನ್ನು ನಾವು ರೈತ ಸಮೂಹಕ್ಕೆ ತಿಳಿಸುತ್ತಿದ್ದೇವೆ. ಜತೆಗೆ, ನಾನು ರಾಜಕೀಯ ಪ್ರವೇಶ ಮಾಡಿರುವುದರಿಂದ ಕುಮಾರಸ್ವಾಮಿ ಅವರು ಹತಾಶೆಗೆ ಒಳಗಾಗಿದ್ದು, ಈ ರೀತಿಯ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ನಾನು ಏನಾದರೂ ಹಣ ಪಡೆದಿದ್ದಲ್ಲಿ ಅದು ಅಪರಾಧವಾಗಲಿದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ತಪ್ಪಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ. ರಾಜ್ಯದ ರೈತ ಚಳವಳಿ ಚಾರಿತ್ರಿಕ ಚಳವಳಿ. ಅದನ್ನು ನಾನು ಮುಂಚೂಣಿಯಲ್ಲಿ ಕಂಡಿದ್ದೇನೆ. ನಾನು ಭ್ರಷ್ಟಾಚಾರ ವಿರೋಧಿಸುವವನು, ನನ್ನ ನೈತಿಕತೆಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೋಡಿಹಳ್ಳಿ  ಚಂದ್ರಶೇಖರ್ ಆಗ ಆರೋಪಿಸಿದ್ದರು. 

Latest Videos
Follow Us:
Download App:
  • android
  • ios