Asianet Suvarna News Asianet Suvarna News

Breast Milk Bank : ಮಂಗಳೂರಲ್ಲಿ ರಾಜ್ಯದ 2ನೇ ಎದೆ ಹಾಲು ಸಂಗ್ರಹ ಬ್ಯಾಂಕ್‌

  •  ಮಂಗಳೂರಲ್ಲಿ ರಾಜ್ಯದ 2ನೇ ಎದೆ ಹಾಲು ಸಂಗ್ರಹ ಬ್ಯಾಂಕ್‌
  • ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಫೆಬ್ರವರಿಯೊಳಗೆ ಸ್ಥಾಪನೆ,
  • ಅನಾಥ, ಅವಧಿ ಪೂರ್ವ ಜನಿಸಿದ ಶಿಶುಗಳಿಗಾಗಿ
     
Breast Milk Bank Will Open in Mangalore Lady Goschen Hospital snr
Author
Bengaluru, First Published Dec 26, 2021, 9:29 AM IST
  • Facebook
  • Twitter
  • Whatsapp

 ಮಂಗಳೂರು (ಡಿ.26):  ತಾಯಿಯನ್ನು (Mother) ಕಳೆದುಕೊಂಡ ಅನಾಥ ಹಾಗೂ ಅವಧಿ ಪೂರ್ವ ಜನಿಸಿದ ಶಿಶುವಿಗೆ (Baby) ಹಾಲು ನೀಡಲು ಮಂಗಳೂರಿನ (Mangaluru) ಸರ್ಕಾರಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ‘ಎದೆ ಹಾಲು ಸಂಗ್ರಹ ಬ್ಯಾಂಕ್‌’  (Breast Milk Bank)ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ. ರೋಟರಿ ಕ್ಲಬ್‌ ಮಂಗಳೂರು ಇದರ ರೋಟರಿ ಫೌಂಡೇಶನ್‌ ಗ್ಲೋಬಲ್‌ ಗ್ರಾಂಟ್‌ ಪ್ರಾಜೆಕ್ಟ್ನಡಿ 45 ಲಕ್ಷ ರು. ವೆಚ್ಚದಲ್ಲಿ ಈ ಯೋಜನೆ ಕಾರ್ಯಗತಗೊಳ್ಳುತ್ತಿದೆ. 2022ರ ಫೆಬ್ರವರಿಯೊಳಗೆ ಎದೆ ಹಾಲು ಸಂಗ್ರಹ ಬ್ಯಾಂಕ್‌ (Bank) ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ.

ಲೇಡಿಗೋಷನ್‌ ಆಸ್ಪತ್ರೆ (Hospital) ಹೊಸ ಕಟ್ಟಡದ ಮೂರನೇ ಮಹಡಿಯಲ್ಲಿ ಎದೆ ಹಾಲು ಸಂಗ್ರಹ ಬ್ಯಾಂಕ್‌ (Bank) ಸ್ಥಾಪನೆಯಾಗಲಿದೆ. ಬೆಳಗಾವಿಯ ಕೆಎಲ್‌ಇ, ಬೆಂಗಳೂರಿನ (Bengaluru) ಅಮರ ಮಿಲ್ಕ್ ಬ್ಯಾಂಕ್‌ ಹೊರತುಪಡಿಸಿದರೆ ಬೆಂಗಳೂರಿನ ವಾಣಿ ವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ ಎದೆ ಹಾಲು ಸಂಗ್ರಹ ಬ್ಯಾಂಕ್‌ ಸ್ಥಾಪಿಸಲಾಗಿದೆ. ಬೆಂಗಳೂರು ಹೊರವಲಯದ ಸರ್ಕಾರಿ ಆಸ್ಪತ್ರೆಗಳ ಪೈಕಿ ಇಲ್ಲಿನ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಎದೆ ಹಾಲು ಸಂಗ್ರಹ ಬ್ಯಾಂಕ್‌ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು.

ತಾಯಿಯ ( Mother) ಎದೆ ಹಾಲು ಶಿಶುಗಳಿಗೆ ಎಲ್ಲ ಹಾಲುಗಳಿಗಿಂತ (Milk) ಅತ್ಯಂತ ಶ್ರೇಷ್ಠವಾದ್ದು. ಜನಿಸಿದ ಶಿಶುಗಳಿಗೆ ಆರು ತಿಂಗಳ ವರೆಗೆ ಎದೆ ಹಾಲು ನೀಡಿದರೆ ಅತ್ಯುತ್ತಮ ಎನ್ನುತ್ತಾರೆ ವೈದ್ಯರು. ಎದೆ ಹಾಲಿನಲ್ಲಿ ಲವಣಾಂಶ, ಪ್ರೊಟೀನ್‌, ಶರ್ಕರಪಿಷ್ಠ ಸೇರಿದಂತೆ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಜೀವಕಣಗಳಿರುತ್ತವೆ. ಹಾಗಾಗಿ ಎದೆ ಹಾಲು ವಂಚಿತ ಶಿಶುಗಳ ಪಾಲನೆ, ಪೋಷಣೆ ಸಲುವಾಗಿ ಎದೆ ಹಾಲು ಸಂಗ್ರಹ ಬ್ಯಾಂಕ್‌ ಯೋಜನೆ ಹಮ್ಮಿಕೊಳ್ಳಲಾಗಿದೆ.

ಪ್ರಸ್ತುತ ಅವಧಿಪೂರ್ವ ಜನಿಸುವ ಶಿಶುಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಶೇ.30ರಿಂದ 35 ರಷ್ಟು ಶಿಶುಗಳನ್ನು ಅವಧಿ ಪೂರ್ವ ಜನಿಸಿದವು. ಇಲ್ಲಿ ಎಲ್ಲ ಶಿಶುಗಳಿಗೆ ತಾಯಂದಿರ (Mother) ಸ್ತನ್ಯಪಾನ ಸಿಗುತ್ತದೆ ಎಂದು ಹೇಳಲಾಗದು. ಶಿಶು ಹಂತದಲ್ಲೇ ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಸ್ತನ್ಯ ಪಾನದ ಅವಶ್ಯಕತೆ ಇದೆ. ಎದೆ ಹಾಲು ಸಂಗ್ರಹ ಬ್ಯಾಂಕ್‌ ಈ ಕೊರತೆ ಹೋಗಲಾಡಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಲೇಡಿಗೋಷನ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ದುರ್ಗಾಪ್ರಸಾದ್‌ ಎಂ.ಆರ್‌.

ಉದ್ದೇಶಿತ ಎದೆ ಹಾಲು ಬ್ಯಾಂಕ್‌ನಲ್ಲಿ (Bank) ತರಬೇತಿ ಹೊಂದಿದ ಲೇಡಿಗೋಷನ್‌ ಆಸ್ಪತ್ರೆಯ ಸಿಬ್ಬಂದಿಯೇ ಕಾರ್ಯನಿರ್ವಹಿಸಲಿದ್ದಾರೆ. ಬೆಂಗಳೂರು (Bengaluru) ಅಮರ ಮಿಲ್‌್ಕ ಬ್ಯಾಂಕ್‌ನ ಡಾ.ಶ್ರೀನಾಥ್‌ ಅವರು ತರಬೇತುದಾರರಾಗಿದ್ದಾರೆ. ಎದೆ ಹಾಲು ಬ್ಯಾಂಕ್‌ ಕಾರ್ಯಾರಂಭ ಬಳಿಕ ಇದಕ್ಕೆ ಪ್ರತ್ಯೇಕ ಕಾಯಂ ಸಿಬ್ಬಂದಿ ನೇಮಿಸುವಂತೆ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಮೆನೇಜರ್‌, ಲ್ಯಾಬ್‌ ಟೆಕ್ನೀಶಿಯನ್‌, ಕೌನ್ಸೆಲರ್‌, ಗ್ರೂಪ್‌ ಡಿ ಸೇರಿ ಒಟ್ಟು 14 ಸಿಬ್ಬಂದಿಯ ಅವಶ್ಯಕತೆ ಇದೆ.

ಮಂಗಳೂರು (Mangaluru) ಕೆಎಂಸಿ (KMC) ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕ, ಮಕ್ಕಳ ತಜ್ಞ ಡಾ.ಶಾಂತಾರಾಮ ಬಾಳಿಗ ಅವರ ಮುತುವರ್ಜಿಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಮಕ್ಕಳ ತಜ್ಞ ಡಾ.ಬಾಲಕೃಷ್ಣ ರಾವ್‌ ಅವರು ಈ ಬ್ಯಾಂಕ್‌ಗೆ ನೋಡೆಲ್‌ ಅಧಿಕಾರಿಯಾಗಿದ್ದಾರೆ. ರೋಟರಿ ಮಂಗಳೂರು ಅಧ್ಯಕ್ಷ ಆರ್ಚಿ ಬಿ.ಮಿನೇಜಸ್‌ ಈ ಯೋಜನೆ ಕಾರ್ಯಗತಗೊಳಿಸುತ್ತಿದ್ದಾರೆ.

ಎದೆ ಹಾಲು ದಾನಕ್ಕೆ ಜಾಗೃತಿ :  ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಸ್ಥಾಪನೆಯಾಗುವ ಎದೆ ಹಾಲು ಸಂಗ್ರಹಣಾ ಬ್ಯಾಂಕ್‌ ಬ್ಲಡ್‌ ಬ್ಯಾಂಕ್‌ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಕನಿಷ್ಠ ಮೂರು ತಿಂಗಳ ವರೆಗೆ ಎದೆ ಹಾಲು ಸಂಗ್ರಹಿಸಬಹುದಾಗಿದೆ. ಏಕಕಾಲಕ್ಕೆ ಎಷ್ಟುಮಂದಿ ಶಿಶುಗಳಿಗೆ ಎದೆ ಹಾಲು ನೀಡಬಹುದು ಎಂಬುದು ಇನ್ನಷ್ಟೆಲೆಕ್ಕಾಚಾರವಾಗಬೇಕು. ಇಲ್ಲಿ ಎದೆ ಹಾಲು ಸಂಗ್ರಹ ಹಾಗೂ ನವಜಾತ ಶಿಶುಗಳಿಗೆ ಎದೆ ಹಾಲು ನೀಡುವುದು ಕೂಡ ಉಚಿತವಾಗಿಯೇ ಇರುತ್ತದೆ. ಆದರೂ ಈ ಬ್ಯಾಂಕ್‌ಗೆ ಎದೆ ಹಾಲು ದಾನ ಪಡೆಯುವುದೇ ದೊಡ್ಡ ಸವಾಲಾಗಲಿದೆ.

ಎದೆ ಹಾಲು ನೀಡಬೇಕಾದರೆ ಅಂತಹ ಮಹಿಳೆಯರ (woman) ಆರೋಗ್ಯ ತಾಪಸಣೆ ನಡೆಸಿ ಆರೋಗ್ಯ ಖಚಿತಪಡಿಸಿದ ಬಳಿಕವೇ ಎದೆ ಹಾಲು ಸಂಗ್ರಹಿಸಲಾಗುತ್ತದೆ. ಸಂಗ್ರಹಗೊಂಡ ಹಾಲನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಿ ಶಿಥಲೀಕರಿಸಿ ಇರಿಸಲಾಗುತ್ತದೆ. ಸಂಗ್ರಹಗೊಂಡ ಎದೆ ಹಾಲನ್ನು ಹೊರಗೆ ನೀಡುವುದಿಲ್ಲ. ಕೇವಲ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಅನಾಥ, ಎದೆ ಹಾಲು ವಂಚಿತ ಶಿಶುಗಳಿಗೆ ಮಾತ್ರ ನೀಡಲಾಗುತ್ತದೆ. ಸ್ತ್ರೀಶಕ್ತಿ, ಮಹಿಳಾ ಸಂಘಟನೆ, ಮಹಿಳಾ ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಅವರಲ್ಲಿ ಎದೆ ಹಾಲು ದಾನದ ಬಗ್ಗೆ ಅರಿವು ಮೂಡಿಸಲು ಉದ್ದೇಶಿಸಲಾಗಿದೆ.

ರೋಟರಿ ಕ್ಲಬ್‌ ಮಂಗಳೂರು ಇದರ ಸಾಮಾಜಿಕ ಬದ್ಧತೆಯ ಯೋಜನೆ ಇದಾಗಿದೆ. ಸುಮಾರು 45 ಲಕ್ಷ ರು. ವೆಚ್ಚದಲ್ಲಿ ಎದೆ ಹಾಲು ಸಂಗ್ರಹ ಬ್ಯಾಂಕ್‌ ಸ್ಥಾಪನೆಯಾಗುತ್ತಿದೆ. ಫೆಬ್ರವರಿಯೊಳಗೆ ಈ ಯೋಜನೆ ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ.

-ಡಾ.ದುರ್ಗಾ ಪ್ರಸಾದ್‌ ಎಂ.ಆರ್‌. ವೈದ್ಯಕೀಯ ಅಧೀಕ್ಷಕ, ಲೇಡಿಗೋಷನ್‌ ಆಸ್ಪತ್ರೆ, ಮಂಗಳೂರು

Follow Us:
Download App:
  • android
  • ios