ಮಂಗಳೂರು(ಸೆ.07): ನಗರದಲ್ಲಿ ಮದ್ಯ ಸೇವನೆ ಮಾಡಿ ಪೊಲೀಸರ ವಶಕ್ಕೆ ಸಿಕ್ಕಿದ ಯುವಕನೊಬ್ಬ ತಾನು ಮಾದಕ ವ್ಯಸನ ತ್ಯಜಿಸಿ ಜೀವನದಲ್ಲಿ ಬದಲಾವಣೆಯ ನಿರ್ಧಾರ ತಳೆದ ಬಗ್ಗೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ. ಹರ್ಷ ಅವರಿಗೆ ಪತ್ರ ಬರೆದು, ಪೊಲೀಸ್‌ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾನೆ.

ನಾನು 5 ವರ್ಷದಿಂದ ಮಾದಕ ವ್ಯಸನಿಯಾಗಿದ್ದು, ಇದರಿಂದ ನನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು. ಇದರಿಂದ ನನ್ನ ಭವಿಷ್ಯವೇ ಆತಂಕದ ಸ್ಥಿತಿಗೆ ತಲುಪಿತ್ತು. ಮಾದಕ ವ್ಯಸನ ಮುಕ್ತಗೊಳ್ಳಲು ನಾನಾ ರೀತಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಪತ್ರದಲ್ಲಿ ಯುವಕ ತಿಳಿಸಿದ್ದಾನೆ.

ಸೆ.2ರಂದು ಮಾದಕ ದ್ರವ್ಯ ಸೇವನೆ ಮಾಡಿದಾಗ ಕಾವೂರು ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದರು. ಬಳಿಕ ಠಾಣೆಯಲ್ಲಿ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಶ್ರೀನಿವಾಸ್‌ ಸಾರ್‌ ಮತ್ತು ಕಾವೂರು ಇನ್‌ಸ್ಪೆಕ್ಟರ್‌ ರಾಘವ್‌ ಅವರು ಮಾದಕ ದುಷ್ಪರಿಣಾಮಗಳು, ನನ್ನ ಜೀವನದ ಮಹತ್ವಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು.

ಜೀವನವನ್ನು ಮುನ್ನಡೆಸಲು ಯಾವ ರೀತಿಯ ಒಳ್ಳೆಯ ಅವಕಾಶಗಳನ್ನು ಎಂಬುವುದನ್ನು ಸ್ಪಷ್ಟಪಡಿಸಿದರು. ಈ ಸಲಹೆಗಳು ನನ್ನ ಜೀವನವನ್ನೇ ಬದಲಿಸಿದ್ದು, ನಾನು ಮಾದಕ ವ್ಯಸನ ಮುಕ್ತಗೊಂಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ. ಯುವಕ ಬರೆದ ಪತ್ರಕ್ಕೆ ಕಮಿಷನರ್‌ ಡಾ. ಹರ್ಷಾ ಶ್ಲಾಘನೆ ವ್ಯಕ್ತಪಡಿಸಿದ್ದು, ಪತ್ರವನ್ನು ಟ್ವೀಟ್‌ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.