Chikkamagaluru: ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆಯದೇ ಬಾಲಕ ಸಾವು
ತಂದೆ ತಾಯಿ ನಿರ್ಲಕ್ಷ್ಯಕ್ಕೆ ರೇಬಿಸ್ ಉಲ್ಬಣಿಸಿ ಬಾಲಕ ಸಾವು
ಎದೆಯುದ್ದ ಬೆಳೆದ ಮಗನನ್ನು ಬಲಿಪಡೆದ ಪೋಷಕರ ನಿರ್ಲಕ್ಷ್ಯ
ಮನೆಯಲ್ಲಿ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.15): ನಾಯಿ ಕಡಿತಕ್ಕೆ ಸೂಕ್ತ ಚಿಕಿತ್ಸೆ ಪಡೆಯದ ಬಾಲಕ ಆರು ತಿಂಗಳ ಬಳಿಕ ರೇಬಿಸ್‍ನಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಸಮೀಪದ ಕಾರ್ಲಗದ್ದೆ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನ 12 ವರ್ಷದ ಪ್ರಧಾನ್ ಎಂದು ಗುರುತಿಸಲಾಗಿದೆ. ಆಲ್ದೂರು ಸಮೀದ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಲ್‍ಗದ್ದೆ ಗ್ರಾಮದ ರಮೇಶ್ ಅವರ ಮಗ ಮನೆ ಮುಂದೆ ಆಟವಾಡುವಾಗ ಬೀದಿ ನಾಯಿ ಬಾಲಕನ ಮೇಲೆ ದಾಳಿ ಮಾಡಿತ್ತು. ಬೀದಿ ನಾಯಿ ದಾಳಿ ಮಾಡಿದಾಗ ಮನೆಯವರು ಸೂಕ್ತ ಚಿಕಿತ್ಸೆ ಕೊಡಿಸಬೇಕಿತ್ತು. ಆದರೆ, ನಾಯಿ ದಾಳಿ ಮಾಡಿದರೂ ಸೂಕ್ತ ಚಿಕಿತ್ಸೆ ಕೊಡಿಸದ ಕಾರಣ ಬಾಲಕ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಕಳೆದೊಂದು ವಾರದ ಹಿಂದೆ ಬಾಲಕ ಪ್ರಧಾನ್‍ಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಆತನನ್ನ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಸನದ ಆಸ್ಪತ್ರೆಯಲ್ಲಿ ನಾಯಿ ಕಡಿತದಿಂದ ರೇಬಿಸ್ ಕಾಯಿಲೆಗೆ ತುತ್ತಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವಿಗೀಡಾಗಿದ್ದಾನೆ. ಮೃತ ಬಾಲಕನ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಇಂದು ಸಂಜೆ ನಡೆಯಿತು.
World Rabies Day 2022: ಮಾರಣಾಂತಿಕ ರೋಗ ರೇಬಿಸ್‌ನ ಲಕ್ಷಣಗಳೇನು ?
ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ: ಇನ್ನು ಮನೆಯಲ್ಲಿ ಆಟವಾಡಿಕೊಂಡು ಎದೆಯುದ್ದಕ್ಕೆ ಬೆಳೆದಿದ್ದ ಮಗನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದರಿಂದ ಮಗ ಕೈಗೆ ಸಿಗಲಾರದಷ್ಟು, ಶಾಶ್ವತವಾಗಿ ದೂರವಾಗಿದ್ದಾನೆ. ಅಮಾಯಕ ಮಗನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾವ ಕಾರ್ಯಗಳನ್ನು ಯಾವಾಗ ಮಾಡಬೇಕೋ ಆಗ ಮಾಡಿದ್ದರೆ ಅನಾಹುತ ತಡೆಗಟ್ಟಬಹುದು. ಇಲ್ಲದಿದ್ದರೆ ಅದರಿಂದ ಆಗಬಹುದಾದ ನಷ್ಟವನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇನ್ನು ಮುಂದಾದರೂ ಎಲ್ಲ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಸಾಕು ಪ್ರಾಣಿ ಕಡಿತಕ್ಕೆ ಚಿಕಿತ್ಸೆ ಪಡೆಯಿರಿ: ಇನ್ನು ನಮ್ಮ ಮನೆಗಳಲ್ಲಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳಲ್ಲಿ ರೇಬಿಸ್ ರೋಗ ಲಕ್ಷಣಗಳು ಇರುತ್ತದೆ, ಇನ್ನು ಇಲಿ ಕಡಿತದಿಂದಲೂ ಈ ರೋಗ ಹರಡುವ ಸಾಧ್ಯತೆ ಇದೆ. ಆದ್ದರಿಂದ ಮನೆಯಲ್ಲಿ ಯಾವುದೇ ಪ್ರಾಣಿಗಳ ಕಡಿತಕ್ಕೆ ಒಳಗಾದರೂ ಕೂಡಲೇ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದರೆ ಮಾರಣಾಂತಿಕ ರೇಬಿಸ್ ಅಥವಾ ಇನ್ಯಾವುದೋ ಕಾಯಿಲೆ ಬಂದು ಸಾವು ಸಂಭವಿಸುವುದು ಖಚಿತವಾಗಲಿದೆ. ಇನ್ನು ಪ್ರಾಣಿಗಳ ಕಡಿತದಿಂದ ಉಂಟಾಗುವ ರೋಗಗಳು ಆರಂಭದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಚಿಕಿತ್ಸೆ ಪಡೆಯದಿದ್ದರೆ ಒಂದು ವರ್ಷದಲ್ಲಿ ಯಾವಾಗ ಬೇಕಾದರೂ ರೋಗ ಉಲ್ಬಣಿಸಿ ಜೀವಕ್ಕೆ ಮಾರಕವಾಗಲಿದೆ.
ತಿಂಗಳ ಹಿಂದೆ ಕಚ್ಚಿದ ನಾಯಿ: ರೇಬಿಸ್‌ಗೆ 19 ವರ್ಷದ ತರುಣಿ ಬಲಿ
ರೇಬಿಸ್‌ನಿಂದ ಕೇರಳದ ಯುವತಿ ಸಾವು: ದೇವರ ನಾಡು ಕೇರಳದ ಪಾಲಕ್ಕಾಡ್‌ನಲ್ಲಿ ಹುಚ್ಚು ನಾಯಿ ಕಡಿದು ತಿಂಗಳ ಬಳಿಕ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಜೂನ್ ತಿಂಗಳಲ್ಲಿ ನಡೆದಿತ್ತು. ಯುವತಿ ನೆರೆ ಮನೆಯವರ ಮನೆಗೆ ಹೋದಾಗ ಅಲ್ಲಿ ಸಾಕಿದ್ದ ನಾಯಿಯು ಕಾಲೇಜು ವಿದ್ಯಾರ್ಥಿನಿಗೆ ಕಡಿದಿತ್ತು. ಇದಾದ ಬಳಿಕ ವಿದ್ಯಾರ್ಥಿನಿ ಲಸಿಕೆ ತೆಗೆದುಕೊಂಡಿದ್ದಳು. ಆದಾಗ್ಯೂ ಆಕೆಗೆ ರೇಬಿಸ್ ಶುರುವಾಗಿದ್ದು, ತ್ರಿಶೂರ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (MCH) ರೇಬಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಸಾವನ್ನಪ್ಪಿದ್ದಳು.