ಬೆಂಗಳೂರು [ಜ.24]:  ರಾಜಧಾನಿಯಲ್ಲಿ ಬಾಡಿಗೆ ಆಧಾರಿತ ಬೈಕ್‌ ಸೇವೆ ನೀಡುತ್ತಿರುವ ‘ಬೌನ್ಸ್‌’ ಕಂಪನಿಯು ಏಕಾಏಕಿ ನೌಕರರನ್ನು ಉದ್ಯೋಗದಿಂದ ತೆಗೆಯುತ್ತಿದೆ ಎಂದು ಆರೋಪಿಸಿ ಕಂಪನಿಯ ನೌಕರರು ಸಿ.ವಿ.ರಾಮನ್‌ ನಗರದ ಬೌನ್ಸ್‌ ಕಂಪನಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಕಚೇರಿ ಎದುರು ಬೌನ್ಸ್‌ ಬೈಕ್‌ಗಳನ್ನು ಸಾಲಾಗಿ ನಿಲುಗಡೆ ಮಾಡಿದ್ದ ನೌಕರರು, ‘ವೀ ವಾಂಟ್‌ ಜಾಬ್‌’, ‘ನೀಡ್‌ ಜಾಬ್‌ ಬ್ಯಾಕ್‌’, ‘ನೀಡ್‌ ಸ್ಯಾಲರಿ’ ಎಂಬಂತಹ ಫಲಕ ತೂಗು ಹಾಕಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗ ಕಳೆದುಕೊಂಡಿರುವ ಗುಣಶೇಖರ್‌ ಮಾತನಾಡಿ, ಬೌನ್ಸ್‌ ಕಂಪನಿಯು ಸೂಚನೆ ನೀಡದೆ 10 ದಿನಗಳಲ್ಲಿ ಏಕಾಏಕಿ 100ಕ್ಕೂ ಹೆಚ್ಚು ನೌಕರರನ್ನು ಉದ್ಯೋಗದಿಂದ ತೆಗೆದಿದೆ. ಕಂಪನಿಗಾಗಿ ಮೂರು ಪಾಳಿಯಲ್ಲಿ ಹಗಲು-ರಾತ್ರಿ ಕೆಲಸ ಮಾಡುತ್ತೇವೆ. ಹೀಗಿದ್ದರೂ ಯಾವುದೇ ಸೂಚನೆ ನೀಡದೆ ನೌಕರರನ್ನು ಕೆಲಸದಿಂದ ತೆಗೆದು ಅನ್ಯಾಯ ಮಾಡಿದೆ. ಉದ್ಯೋಗದಿಂದ ತೆಗೆಯಲು ಕಾರಣ ಸಹ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲಸದಿಂದ ವಜಾ ಮಾಡಿದ್ದಕ್ಕೆ ಬೌನ್ಸ್‌ ವಾಹನಕ್ಕೆ ಬೆಂಕಿ!...

ಕಳೆದ ಎರಡು ತಿಂಗಳಿಂದ ವೇತನ ಸಹ ಸರಿಯಾಗಿ ಪಾವತಿಸಿಲ್ಲ. ವೇತನ ಬಾಕಿ ಇರಿಸಿಕೊಂಡು ಇತ್ತ ಉದ್ಯೋಗದಿಂದಲೂ ತೆಗೆಯಲಾಗುತ್ತಿದೆ. ಯಾವ ಕಾರಣಕ್ಕೆ ಉದ್ಯೋಗದಿಂದ ತೆಗೆಯಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಕಚೇರಿಗೆ ಹೋದವರನ್ನು ಕರೆಸಿ ಒತ್ತಾಯಪೂರ್ವಕವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಕೇಂದ್ರ ಕಚೇರಿಯ ಸೂಚನೆಯಿದೆ ಎಂದಷ್ಟೇ ಹೇಳುತ್ತಿದ್ದಾರೆ. ನಿಯಮದ ಪ್ರಕಾರ ನೋಟಿಸ್‌ ನೀಡಿ ನಂತರ ಉದ್ಯೋಗದಿಂದ ತೆಗೆಯಬೇಕು. ಕಂಪನಿ ಯಾವ ನಿಯಮವನ್ನೂ ಪಾಲಿಸುತ್ತಿಲ್ಲ ಎಂದು ಕಿಡಿಕಾರಿದರು.

ಬೌನ್ಸ್‌ನಲ್ಲಿ ಬರ್ತಾರೆ ಸರಗಳ್ಳರು..! ಬಾಡಿಗೆ ಬೈಕ್ ಪಡೆದು ಕೃತ್ಯ...

ನೌಕರರಿಗೆ ಬಾಕಿ ವೇತನ ಪಾವತಿಸಬೇಕು. ಜತೆಗೆ ಉದ್ಯೋಗಕ್ಕೆ ಮರು ನೇಮಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸಲಿದ್ದೇವೆ ಎಂದರು.

ಬೌನ್ಸ್‌ ಕಂಪನಿಯ ವಿವಿಧ ವಿಭಾಗಗಳನ್ನು ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಈ ಪೈಕಿ ಒಂದು ತಂಡವು ಈ ಬದಲಾವಣೆ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದೆ. ಅವರ ಸಮಸ್ಯೆ ಆಲಿಸಿ ಪರಿಹರಿಸಲು ಸಿದ್ಧರಿದ್ದೇವೆ.

-ಅಂಕಿತ್‌ ಆಚಾರ್ಯ, ಬೌನ್ಸ್‌ ಕಂಪನಿಯ ಪ್ರತಿನಿಧಿ.