Asianet Suvarna News Asianet Suvarna News

Border dispute: ಗಡಿ ಕ್ಯಾತೆ ಮಹಾರಾಷ್ಟ್ರಕ್ಕೇ ತಿರುಗುಬಾಣ: ಎಂ.ಬಿ.ಪಾಟೀಲ ಎಚ್ಚರಿಕೆ

ಕರ್ನಾಟಕ- ಮಹಾರಾಷ್ಟ್ರ ಗಡಿವಿವಾದ ಮುಗಿದ ಅಧ್ಯಾಯ. ಮಹಾರಾಷ್ಟ್ರ ಪದೇ ಪದೇ ಗಡಿ ಕ್ಯಾತೆ ತೆಗೆದರೆ ಅದು ಮಹಾರಾಷ್ಟ್ರಕ್ಕೆ ತಿರುಗುಬಾಣವಾಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಎಚ್ಚರಿಸಿದರು.

border dispute issue mb patil warn to maharashtra at vijayapur rav
Author
First Published Nov 30, 2022, 9:33 PM IST

ವಿಜಯಪುರ (ನ.30) : ಕರ್ನಾಟಕ- ಮಹಾರಾಷ್ಟ್ರ ಗಡಿವಿವಾದ ಮುಗಿದ ಅಧ್ಯಾಯ. ಮಹಾರಾಷ್ಟ್ರ ಪದೇ ಪದೇ ಗಡಿ ಕ್ಯಾತೆ ತೆಗೆದರೆ ಅದು ಮಹಾರಾಷ್ಟ್ರಕ್ಕೆ ತಿರುಗುಬಾಣವಾಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಎಚ್ಚರಿಸಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಸೊಲ್ಲಾಪುರ, ದಕ್ಷಿಣ ಸೊಲ್ಲಾಪುರ, ಅಕ್ಕಲಕೋಟ ಹಾಗೂ ಜತ್ತ ತಾಲೂಕಿನ 47 ಗ್ರಾಮಗಳಲ್ಲಿ ಕನ್ನಡ ಭಾಷಿಕರು ಹೆಚ್ಚಿದ್ದಾರೆ. ಕನ್ನಡ ಭಾಷೆ ಮಾತನಾಡುವವರು ಅಧಿಕವಾಗಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ಆ ಭಾಗದಲ್ಲಿ ಶಾಲೆ ಕಾಲೇಜು ನಿರ್ಮಿಸಿಲ್ಲ. ಶಿಕ್ಷಕರನ್ನು ಒದಗಿಸಿಲ್ಲ. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇದರಿಂದ ಬೇಸತ್ತು ಮಹಾರಾಷ್ಟ್ರದ ಗಡಿಭಾಗದ ಕನ್ನಡ ಭಾಷಿಕರು ಕರ್ನಾಟಕ ಸೇರಲು ನಿರ್ಧಾರ ಕೈಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿಯೇ ಇದ್ದವರಿಗೆ ಸರಿಯಾಗಿ ಮೂಲಭೂತ ಸೌಕರ್ಯ ಕಲ್ಪಿಸಲು ಆಗದ ಮಹಾರಾಷ್ಟ್ರ ಸರ್ಕಾರ ಬೆಳಗಾವಿ, ಖಾನಾಪುರ, ನಿಪ್ಪಾಣಿ ಮತ್ತಿತರ ಪ್ರದೇಶಗಳನ್ನು ಕೇಳುತ್ತಿದೆ. ಮಹಾರಾಷ್ಟ್ರಕ್ಕೆ ಹೊಸಬರನ್ನು ಸೇರಿಸಿಕೊಂಡು ಅವರಿಗೂ ಮೂಲಭೂತ ಸೌಕರ್ಯ ನೀಡದೆ ಅವರಿಗೂ ಸತಾಯಿಸಬೇಕು ಎಂದುಕೊಂಡಂತೆ ಕಾಣುತ್ತದೆ ಎಂದು ದೂರಿದರು.

Border Dispute: ಯಥಾಸ್ಥಿತಿ- ಇಲ್ಲವೇ ಮಹಾಜನ ವರದಿ ಜಾರಿಗೊಳಿಸಿ: ಹೆಚ್.ಕೆ. ಪಾಟೀಲ ಸಲಹೆ

ಪದೇ ಪದೇ ಗಡಿ ಕ್ಯಾತೆ ತೆಗೆದರೆ ಮಹಾರಾಷ್ಟ್ರ ಸರ್ಕಾರಕ್ಕೆ ಅದುವೇ ತಿರುಗುಬಾಣವಾಗಿ ಸೊಲ್ಲಾಪುರ, ದಕ್ಷಿಣ ಸೊಲ್ಲಾಪುರ, ಅಕ್ಕಲಕೋಟ, ಜತ್ತ ತಾಲೂಕಿನ 47 ಹಳ್ಳಿಗಳನ್ನು ಅದು ಕಳೆದುಕೊಳ್ಳಬೇಕಾಗುತ್ತದೆ ಎಂದು ನುಡಿದರು. ಜತ್ತ ಭಾಗದ ಕುಡಿಯುವ ನೀರಿನ ಮಾಶ್ಯಾಳ ಯೋಜನೆ 50 ವಷÜರ್‍ಗಳಿಂದ ನನೆಗುದಿಗೆ ಬಿದ್ದಿದೆ. ಅದನ್ನು ಪೂರ್ಣಗೊಳಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ. ಆ ಭಾಗದ ಜನರ ಕುಡಿಯುವ ತಾಪತ್ರಯ ಕಂಡು ಕನ್ನಡ ಭಾಷಿಕರೇ ಹೆಚ್ಚಾಗಿರುವುದರಿಂದ ಮಾನವೀಯತೆ ದೃಷ್ಟಿಯಿಂದ ವಿಜಯಪುರ ಜಿಲ್ಲೆಯಲ್ಲಿರುವ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಜತ್ತ, ಸಂಖ, ತಿಕ್ಕುಂಡಿ ಮುಂತಾದ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ ಎಂದರು.

ಕನ್ನಡ ನೆಲ, ಜಲ, ಭಾಷೆಗೆ ಧಕ್ಕೆಯಾದರೆ ನಾವೆಲ್ಲರೂ ಪಕ್ಷ ಬೇಧ ಮರೆತು ಒಗ್ಗಟ್ಟು ಪ್ರದರ್ಶಿಸುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ಕನ್ನಡದ ಬಗ್ಗೆ ಪ್ರಬಲವಾಗಿ ಬೆಂಬಲಿಸುತ್ತೇವೆ ಎಂದರು.

ಅಧಿಕಾರಕ್ಕೆ ಬರಲು ಮತದಾರರ ಪಟ್ಟಿಹೆಸರು ಡಿಲಿಟ್‌

ಬಿಜೆಪಿ ಮತ್ತೆ ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಮತದಾರರ ಹೆಸರು ಡಿಲಿಟ್‌, ಸೇರ್ಪಡೆ ಮಾಡುವ ಅಕ್ರಮದಲ್ಲಿ ತೊಡಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರೋಪಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸರ್ಕಾರ ಬಿಬಿಎಂಪಿಯಲ್ಲಿ ಚಿಲುಮೆ ಎಂಬ ಖಾಸಗಿ ಸಂಸ್ಥೆ ಮೂಲಕ ಅಕ್ರಮ ಎಸಗಲು ಹೊರಟಿದೆ. ಯಾವುದೇ ಟೆಂಡರ್‌ ಕರೆಯದೇ, ಸಂಸ್ಥೆಯ ಪೂರ್ವಪರ ವಿಚಾರಿಸದೆ ಕೇವಲ ಅರ್ಜಿ ಸಲ್ಲಿಸಿದ ಮರು ದಿನವೇ ಆ ಸಂಸ್ಥೆಗೆ ಜವಾಬ್ದಾರಿ ನೀಡಿರುವುದು ಅಕ್ರಮವಲ್ಲದೆ ಬೇರೇನು ಎಂದು ಪ್ರಶ್ನಿಸಿದರು.

ಆ ಸಂಸ್ಥೆಯಿಂದ ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್‌ ಮಾಡಿದ್ದು ಅಕ್ರಮ. ಅಲ್ಪಸಂಖ್ಯಾತರು, ದಲಿತರು, ಕೊಳಚೆ ನಿವಾಸಿಗಳು ಇರುವ ಪ್ರದೇಶದಲ್ಲಿ ಮತದಾರರ ಪಟ್ಟಿಯಿಂದ ಸುಮಾರು 30 ಸಾವಿರವರೆಗೆ ಮತದಾರರ ಹೆಸರು ಡಿಲಿಟ್‌ ಮಾಡಲಾಗಿದೆ. ಸುಮಾರು 25 ಸಾವಿರ ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಇದು ಕಾನೂನು ಬಾಹಿರವಾಗಿದೆ ಎಂದು ಹೇಳಿದರು.

ಚುನಾವಣೆ ಕಾರ್ಯದ ಬಿಎಲ್‌ಒಗಳು ಸರ್ಕಾರಿ, ಅರೆಸರ್ಕಾರಿ ನೌಕರರಾಗಿರುತ್ತಾರೆ. ಆದರೆ ಚಿಲುಮೆ ಸಂಸ್ಥೆಯವರು ಬಿಎಲ್‌ಒ ಜವಾಬ್ದಾರಿ ಕೂಡ ನಿಭಾಯಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಎಲ್ಲ ಕಾರಣಗಳಿಂದಾಗಿ ಕಾಂಗ್ರೆಸ್‌ ಪಕ್ಷದಿಂದ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದರು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ರಾಜ್ಯದಿಂದ ಸಮರ್ಥ ವಾದ, ಸಿಎಂ ಬೊಮ್ಮಾಯಿ

ಈಗಾಗಲೇ ಈ ಸಂಬಂಧ ತನಿಖೆ ಕೂಡ ನಡೆದು ಹಲವರನ್ನು ವಶಕ್ಕೆ ಪಡೆಯಲಾಗಿದೆ. ಇಂತಹ ವ್ಯವಸ್ಥೆ ಹುಟ್ಟು ಹಾಕಿರುವುದು ದುರಂತವಾಗಿದೆ. ಇದು ಕೇವಲ ಬೆಂಗಳೂರು ಮಾತ್ರಕ್ಕೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕುವ ಕೆಲಸ ನಡೆದಿದೆ. ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ವ್ಯಾಪ್ತಿಯಲ್ಲಿ ಈ ಕೆಲಸ ನಡೆದಿದೆ. ವಿಜಯಪುರದಲ್ಲಿ ದೂರು ನೀಡಲಾಗಿದೆ. ಚುನಾವಣಾಧಿಕಾರಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ವಾಮಮಾರ್ಗದಿಂದ ಅಧಿಕಾರಕ್ಕೆ ಬರಬೇಕು ಎಂಬ ಬಿಜೆಪಿ ಆಸೆ ಕೈಗೂಡಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

Follow Us:
Download App:
  • android
  • ios