Asianet Suvarna News Asianet Suvarna News

ದುಡ್ಡು ಕೊಡ್ತೀನಿ ಅಂದ್ರೂ ಸಿಗ್ತಿಲ್ಲ ಬೂಸ್ಟರ್‌ ಡೋಸ್‌..!

*  ಧಾರವಾಡ ಜಿಲ್ಲೆಯ ಎರಡು ಆಸ್ಪತ್ರೆಗಳಲ್ಲಿ ಮಾತ್ರ ಬೂಸ್ಟರ್‌ ಲಭ್ಯ
*  18-59 ವಯೋಮಿತಿ ಅರ್ಹರಿಗೆ ಸಿಗುತ್ತಿಲ್ಲ ಬೂಸ್ಟರ್‌ ಡೋಸ್‌
*  ಖಾಸಗಿ ಆಸ್ಪತ್ರೆಯಿಂದ ಸ್ಪಂದನೆ ಬೇಕು
 

Booster Dose Vaccine Not Get in Dharwad grg
Author
Bengaluru, First Published Jun 21, 2022, 2:25 PM IST

ಬಸವರಾಜ ಹಿರೇಮಠ

ಧಾರವಾಡ(ಜೂ.21):  ಧಾರವಾಡ ಜಿಲ್ಲೆಯಲ್ಲಿ ಹಣ ಕೊಡುತ್ತೇನೆ ಎಂದರೂ ಕೋವಿಡ್‌ ನಿಯಂತ್ರಣಕ್ಕಾಗಿ ನೀಡುತ್ತಿರುವ ಬೂಸ್ಟರ್‌ ಡೋಸ್‌ ಸಿಗುತ್ತಿಲ್ಲ..!

ಹೌದು. 18-59 ವಯಸ್ಸಿನವರಿಗೆ ಉಚಿತ ಕೋವಿಡ್‌ ಬೂಸ್ಟರ್‌ ಡೋಸ್‌ ನೀಡದಿರಲು ಸರ್ಕಾರ ನಿರ್ಧರಿಸಿರುವುದರಿಂದ ಈ ವಯೋ ಗುಂಪಿನಲ್ಲಿರುವವರು ಬೂಸ್ಟರ್‌ ಡೋಸ್‌ಗಾಗಿ ಪರದಾಡುವಂತಾಗಿದೆ. ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ನಿಗದಿತ ಬೆಲೆಗೆ ಬೂಸ್ಟರ್‌ ಲಸಿಕೆ ನೀಡಲು ಅವಕಾಶ ಕೊಟ್ಟಿದ್ದರೂ ಧಾರವಾಡ ಜಿಲ್ಲೆಯಲ್ಲಿ ಎರಡು ಖಾಸಗಿ ಆಸ್ಪತ್ರೆಗಳನ್ನು ಹೊರತುಪಡಿಸಿ ಮತ್ತಾವ ಆಸ್ಪತ್ರೆಗಳೂ ಈ ಲಸಿಕೆ ನೀಡಲು ಆಸಕ್ತಿ ತೋರುತ್ತಿಲ್ಲ.ಇದರಿಂದ ಕೋವ್ಯಾಕ್ಶಿನ್‌, ಕೋವಿಶೀಲ್ಡ್‌ ಎರಡು ಡೋಸ್‌ ಪಡೆದು 9 ತಿಂಗಳು ಪೂರ್ಣಗೊಳಿಸಿ ಬೂಸ್ಟರ್‌ ಡೋಸ್‌ಗಾಗಿ ಕಾಯುತ್ತಿರುವ 18-59 ವಯೋ ಗುಂಪಿನವರು ತೀವ್ರ ಪರದಾಡುವಂತಾಗಿದೆ. ಹಣ ಕೊಟ್ಟರೂ ಕೂಡಾ ಬೂಸ್ಟರ್‌ ಲಸಿಕೆ ಸಿಗದಂತಾಗಿದೆ.

ಅಗ್ನಿಪಥ್‌ ಯೋಜನೆಗೆ ನಮ್ಮ ವಿರೋಧ, 4 ವರ್ಷದ ಬಳಿಕ ಅಭ್ಯರ್ಥಿಗಳ ಪರಿಸ್ಥಿತಿ ಏನು?: ಸಿದ್ದು

ಹುಬ್ಬಳ್ಳಿಯ ದೇಶಪಾಂಡೆ ನಗರದ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆ ಹಾಗೂ ಗೋಕುಲ ರಸ್ತೆಯ ಸುಚಿರಾಯು ಆಸ್ಪತ್ರೆಗಳಲ್ಲಿ ಮಾತ್ರ ಬೂಸ್ಟರ್‌ ಡೋಸ್‌ ಲಸಿಕೆ ನೀಡಲಾಗುತ್ತಿದ್ದು, ಇಡೀ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯ 18-59 ವರ್ಷದ ಅರ್ಹ 4ಲಕ್ಷ ಜನರು ಈ ಎರಡು ಆಸ್ಪತ್ರೆಗಳಲ್ಲಿ ಡೋಸ್‌ ಪಡೆಯುವುದು ಕಷ್ಟಸಾಧ್ಯವಾಗಿದೆ. ಈ ವಯೋಮಾನದವರಿಗೆ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ನಿರ್ದಿಷ್ಟಬೆಲೆ (.375)ಗೆ ಬೂಸ್ಟರ್‌ ಡೋಸ್‌ ಪಡೆದುಕೊಳ್ಳಲು ಸೂಚನೆ ನೀಡಿತ್ತು. ಆರಂಭದಲ್ಲಿ ಬೂಸ್ಟರ್‌ ಡೋಸ್‌ಗೆ ಒಂದು ಸಾವಿರ ರುಪಾಯಿ ನಿಗದಿ ಮಾಡಲಾಗಿತ್ತು. ಆಗ ಉತ್ಸಾಹದಿಂದ ಖಾಸಗಿ ಆಸ್ಪತ್ರೆಯವರು ಖರೀದಿ ಸಹ ಮಾಡಿದ್ದರು. ಆದರೆ, ಲಸಿಕೆ ಪಡೆಯಲು ಯಾರೂ ಮುಂದೆ ಬರಲಿಲ್ಲ. ಇದೀಗ 4ನೇ ಅಲೆಯ ಭಯದಿಂದ ಲಸಿಕೆ ಪಡೆಯಲು ಮುಂದೆ ಬಂದಿದ್ದಾರೆ. ಆದರೆ, ಸಾವಿರ ರುಪಾಯಿಗೆ ಲಸಿಕೆ ಪಡೆದು ಈಗ ಅದನ್ನು .375ಕ್ಕೆ ಹಾಕುವುದಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಒಪ್ಪುತ್ತಿಲ್ಲ. ಹೀಗಾಗಿ ಬೂಸ್ಟರ್‌ ಡೋಸ್‌ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.

ಇತ್ತೀಚೆಗೆ ಆರೋಗ್ಯ ಇಲಾಖೆ ಏರ್ಪಡಿಸಿದ್ದ ಸಭೆಯಲ್ಲಿ ಖಾಸಗಿ ಆಸ್ಪತ್ರೆಯವರು, ತಮ್ಮ ಬಳಿ ಇರುವ ಹಳೆಯ ದಾಸ್ತಾನು ಹಿಂದೆ ನಿಗದಿ ಪಡಿಸಿದ ಸಾವಿರ ರುಪಾಯಿ ಬೆಲೆಗೆ ನೀಡುವುದಾಗಿ ಹೇಳುತ್ತಿದ್ದಾರೆ. ಕಡಿಮೆ ಮಾಡಿರುವ ಬೆಲೆಗೆ ಲಸಿಕೆ ನೀಡಿ ಹಾನಿ ಅನುಭವಿಸಲು ಸಿದ್ಧರಿಲ್ಲ ಎಂಬುದು ಖಾಸಗಿ ಆಸ್ಪತ್ರೆಯವರ ನಿಲುವು.

ಅಂಗಡಿ ಅಂಗಡಿಗೆ ಹೋಗಿ ಪೈಸಾ ವಸೂಲಿ, ನಕಲಿ ಆಫೀಸರ್‌ ಕಳ್ಳಾಟ CC TVಯಲ್ಲಿ ಸೆರೆ

ಕೋವಿಡ್‌ ಸಂಭಾವ್ಯ 4ನೇ ಅಲೆ ಜುಲೈ-ಆಗಸ್ಟ್‌ ತಿಂಗಳಲ್ಲಿ ತಲೆ ಎತ್ತುವ ಸಂಭವ ಇದೆ ಎಂಬ ತಜ್ಞರ ನಿರೀಕ್ಷೆಯ ಹಿನ್ನೆಲೆಯಲ್ಲಿ ಬೂಸ್ಟರ್‌ ಡೋಸ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಬೂಸ್ಟರ್‌ ಡೋಸ್‌ ಮಾತ್ರ ಲಭ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಕೂಡಲೇ ಸರ್ಕಾರಿ ಆಸ್ಪತ್ರೆಗಳ ಮೂಲಕ ಬೂಸ್ಟರ್‌ ಡೋಸ್‌ ನೀಡಲು ವ್ಯವಸ್ಥೆ ಮಾಡಬೇಕು. ಜೊತೆಗೆ ಹಣ ಕೊಟ್ಟು ಲಸಿಕೆ ಪಡೆಯಲು ಸಿದ್ಧರಿರುವವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಲಸಿಕೆ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಬೂಸ್ಟರ್‌ ಡೋಸ್‌ಗಾಗಿ ಕಾಯುತ್ತಿರುವ ಗುರುರಾಜ ಪಿಸೆ ಆಗ್ರಹಿಸುತ್ತಾರೆ.

ಖಾಸಗಿ ಆಸ್ಪತ್ರೆಯಿಂದ ಸ್ಪಂದನೆ ಬೇಕು

ಸರ್ಕಾರದ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಕಳೆದ ಜ.21ರಂದು ಬೂಸ್ಟರ್‌ ಡೋಸ್‌ ನೀಡಲು ಆರಂಭಿಸಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಶೇ.58ರಷ್ಟುಲಸಿಕೆ ನೀಡಿದ್ದು ಉಳಿದವರಿಗೆ ಮನೆ ಮನೆಗೆ ತೆರಳಿ ನೀಡಲಾಗುತ್ತಿದೆ. ಆದರೆ, 18-19 ವಯೋಮಿತಿಯವರಿಗೆ ಬೂಸ್ಟರ್‌ ಡೋಸ್‌ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ನೀಡಲು ಅವಕಾಶ ನೀಡಿಲ್ಲ. ಬೂಸ್ಟರ್‌ ಡೋಸ್‌ ನೀಡುವ ಕುರಿತು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಜತೆಗೆ ಮೂರು ಸಭೆ ನಡೆಸಿದ್ದು ಲಸಿಕೆ ಲಭ್ಯತೆ ಇದ್ದರೂ ಅವರಿಂದ ಸ್ಪಂದನೆ ಸಿಗುತ್ತಿಲ್ಲ ಅಂತ ಆರೋಗ್ಯ ಇಲಾಖೆ ನೋಡಲ್‌ ಅಧಿಕಾರಿ ಎಸ್‌.ಎಂ. ಹೊನಕೇರಿ ತಿಳಿಸಿದ್ದಾರೆ.  
 

Follow Us:
Download App:
  • android
  • ios