ಭದ್ರತಾ ಸಿಬ್ಬಂದಿ, ವಿಮಾನವನ್ನು ತೀವ್ರವಾಗಿ ತಪಾಸಣೆಗೆ ಒಳಪಡಿಸಿದಾಗ ಇದೊಂದು ಹುಸಿ ಬೆದರಿಕೆ ಎಂಬುದು ಖಚಿತವಾಗಿದೆ.

ಬೆಂಗಳೂರು(ಆ.09): ರಾಜಸ್ಥಾನದ ಜೈಪುರದಿಂದ 175 ಪ್ರಯಾಣಿಕರಿದ್ದ ವಿಮಾನವೊಂದರಲ್ಲಿ ಬಾಂಬ್‌ ಬೆದರಿಕೆ ಪತ್ರ ಪತ್ತೆಯಾಗಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಇಂಡಿಗೋ ವಿಮಾನದ ಶೌಚಗೃಹದಲ್ಲಿ ಟಿಶ್ಯೂ ಪೇಪರ್‌ನಲ್ಲಿ ಬರೆದಿದ್ದ ಬೆದರಿಕೆ ಬರಹ ಕಂಡ ಗಗನ ಸಖಿಯರು, ಕೂಡಲೇ ಭದ್ರತಾ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ವಿಮಾನ ಇಳಿಸಿದ ತಕ್ಷಣವೇ ಭದ್ರತಾ ಸಿಬ್ಬಂದಿ, ವಿಮಾನವನ್ನು ತೀವ್ರವಾಗಿ ತಪಾಸಣೆಗೆ ಒಳಪಡಿಸಿದಾಗ ಇದೊಂದು ಹುಸಿ ಬೆದರಿಕೆ ಎಂಬುದು ಖಚಿತವಾಗಿದೆ.

ರಾಜಸ್ಥಾನದ ಜೈಪುರದಿಂದ ಕೆಐಎಗೆ 175 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನವು (ನಂ. 6ಇ 556) ರಾತ್ರಿ 9.30ಕ್ಕೆ ಬಂದಿಳಿಯಿತು. ವಿಮಾನ ಭೂ ಸ್ಪರ್ಶಿಸುವ ಮುನ್ನ ಗಗನ ಸಖಿಯರು, ವಿಮಾನದ ಹಿಂಭಾಗದ ಶೌಚಾಲಯದಲ್ಲಿ ಟಿಶ್ಯೂ ಪೇಪರ್‌ ಬಿದ್ದಿದ್ದನ್ನು ನೋಡಿ ಪರಿಶೀಲಿಸಿದ್ದಾರೆ. ಆಗ ಅದರಲ್ಲಿ ‘ವಿಮಾನವನ್ನು ಲ್ಯಾಂಡ್‌ ಮಾಡಬೇಡಿ ಇದರಲ್ಲಿ ಬಾಂಬ್‌ ಇಡಲಾಗಿದೆ’ ಎಂದು ಹಿಂದಿಯಲ್ಲಿ ಬರೆದಿದ್ದನ್ನು ನೋಡಿ ಆತಂಕಗೊಂಡ ಗಗನ ಸಖಿಯರು ಕೂಡಲೇ ಕಾಕ್‌ಪಿಟ್‌ಗೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಇಂಡಿಗೋ ವಿಮಾನ ಪಾಕ್‌ನಲ್ಲಿ ತುರ್ತು ಭೂಸ್ಪರ್ಶ

ಆಗ ವಿಮಾನ ನಿಲ್ದಾಣದ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಹಾಗೂ ವಾಯು ಸಂಚಾರ ನಿಯಂತ್ರಣ ಘಟಕಕ್ಕೆ ವಿಮಾನ ಸಿಬ್ಬಂದಿ ವಿಷಯ ಮುಟ್ಟಿಸಿದ್ದಾರೆ. ಕೊನೆಗೆ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ವಿಮಾನ ಇಳಿಸಲು ಅವಕಾಶ ಕಲ್ಪಿಸಿದ ಭದ್ರತಾ ಸಿಬ್ಬಂದಿ, ವಿಮಾನ ಭೂ ಸ್ಪರ್ಶಿಸಿದ ಕೂಡಲೇ ಪ್ರತಿಯೊಬ್ಬ ಪ್ರಯಾಣಿಕರು ಹಾಗೂ ಅವರ ಲಗೇಜನ್ನು ತಪಾಸಣೆಗೆ ಒಳಪಡಿಸಿದ್ದಾರೆ. ನಂತರ ವಿಮಾನದಲ್ಲಿ ಬಾಂಬ್‌ ನಿಷ್ಕಿ್ರಯ ದಳ ಹಾಗೂ ಶ್ವಾನ ದಳ ಶೋಧಿಸಿವೆ. ಕೊನೆಗೆ ಹುಸಿ ಬೆದರಿಕೆ ಎಂಬುದು ಖಚಿತವಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಇದಾದ ಬಳಿಕ ನಾಲ್ಕು ಗಂಟೆಗಳ ತಡವಾಗಿ ಬೆಂಗಳೂರಿನಿಂದ ಜೈಪುರಕ್ಕೆ ಇಂಡಿಗೋ ವಿಮಾನವು 3.15ಕ್ಕೆ ಮತ್ತೆ ಪ್ರಯಾಣಿಸಿತು. ಈ ಸಂಬಂಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಯಾಣಿಕನ ಕುಚೋದ್ಯ?

ವಿಮಾನದಲ್ಲಿದ್ದ 175 ಪ್ರಯಾಣಿಕರ ಪೈಕಿ ಒಬ್ಬಾತನೇ ಈ ಕುಚೋದ್ಯ ಮಾಡಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಪ್ರತಿ ಪ್ರಯಾಣಿಕ ಟ್ರಾವೆಲ್‌ ಹಿಸ್ಟರಿ ಪಡೆಯಲಾಗಿದ್ದು, ಮತ್ತೆ ಎಲ್ಲರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.