ಹುಬ್ಬಳ್ಳಿ(ಮೇ.27): ಕೊರೋನಾ ವೇಳೆ ಜನಸೇವೆಯಿಂದ ಸಾಕಷ್ಟು ಜನಮನ್ನಣೆ ಗಳಿಸಿರುವ ಬಹುಭಾಷಾ ನಟ ಸೋನು ಸೂದ್ ಅವರ ಸೂದ್ ಚ್ಯಾರಿಟಿ ಫೌಂಡೇಶನ್ ನಗರದಲ್ಲಿ ತುರ್ತು ಆಕ್ಸಿಜನ್ ಸೇವಾ ಕೇಂದ್ರವನ್ನು ತೆರೆದಿದೆ.

ನಗರದ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿನ ರೈಲ್ವೆ ಪೊಲೀಸ್ ಠಾಣೆ ಬಳಿ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಲಾಗಿದೆ. ಬೆಂಗಳೂರಿನ ಸ್ವಾಗ್ ಸ್ಟಾರ್ಟ್ ಆಪ್ ಸಂಸ್ಥೆ ಇದಕ್ಕೆ ಕೈ ಜೋಡಿಸಿದ್ದು, ರೈಲ್ವೆ ಪೊಲೀಸ್ ಸಹಯೋಗ ನೀಡಿದೆ. ರೈಲ್ವೆ ಪೊಲೀಸ್ ಎಡಿಜಿಪಿ ಭಾಸ್ಕರ ರಾವ್ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಕಾರ್ಯ ನಿರ್ವಹಿಸಲಿದೆ.

"

ಸ್ವಾಗ್ ಸಂಸ್ಥೆಯ ನಿರ್ದೇಶಕ ಅಮಿತ್ ಪುರೋಹಿತ ಮಾತನಾಡಿ, ಹುಬ್ಬಳ್ಳಿ ಸುತ್ತಲಿನ 120 ಕಿಮೀ ಅಂತರದಲ್ಲಿ ಉಚಿತವಾಗಿ ಆಕ್ಸಿಜನ್ ಪೂರೈಕೆ ಸೇವೆ ಲಭ್ಯವಿದೆ.  ಸಧ್ಯಕ್ಕೆ ನಮ್ಮಲ್ಲಿ 20 ಆಕ್ಸಿಜನ್ ಸಿಲಿಂಡರ್ ಲಭ್ಯವಿವೆ. ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಬಂದಲ್ಲಿ ಇನ್ನಷ್ಟು ಸಿಲಿಂಡರ್ ತೀರಿಸಿಕೊಳ್ಳಲು ಮುಂದಾಗುತ್ತೇವೆ‌. 

ಕೊರೋನಾ ಸೋಂಕಿಗಿಂತ ಭಯದಿಂದ ಸತ್ತವರೇ ಹೆಚ್ಚು!

ತುರ್ತು ಅಗತ್ಯವಿದ್ದರೆ ನಮ್ಮ ಸಹಾಯವಾಣಿಗೆ ಕರೆ ಮಾಡಿ. ಸೂದ್ ಚ್ಯಾರಿಟಿ ಫೌಂಡೇಶನ್ ನೆರವಿಗೆ ಬರಲಿದೆ. ಹೋಂ ಐಸೋಲೇಶನ್ ಇರುವವರು, ಹಾಸ್ಪಿಟಲ್ ನಲ್ಲಿ ಆಕ್ಸಿಜನ್ ಏಕಾಏಕಿ ಸಮಸ್ಯೆ ಎದುರಾದರೆ ನಮ್ಮನ್ನು ಸಂಪರ್ಕ ಮಾಡಿ. ಆದಷ್ಟು ಶೀಘ್ರವಾಗಿ ಆಕ್ಸಿಜನ್ ಪೂರೈಸಲು ನೆರವು ನೀಡುತ್ತೇವೆ ಎಂದರು.

ಹುಬ್ಬಳ್ಳಿ ರೈಲ್ವೆ ಪೊಲೀಸ್ ಡಿವೈಎಸ್ಪಿ ಎನ್. ಪುಷ್ಪಲತಾ ಮಾತನಾಡಿ, ನಮ್ಮ ಇಲಾಖೆಯು ಈ ಕಾರ್ಯಕ್ಕೆ ವಾಹನ ಸೇವೆಯನ್ನು ಒದಗಿಸುತ್ತಿದೆ. ಅಲ್ಲದೇ ರೈಲ್ವೆ ಸ್ಟೇಷನ್ ಬಳಿಯ ನಮ್ಮ ಕಚೇರಿಯ ಸ್ಥಳದಲ್ಲಿ ಈ ಸೇವಾ ಕೇಂದ್ರ ತೆರೆಯಲಾಗಿದೆ. ಸಹಾಯವಾಣಿಗೆ ಬಂದ ಕರೆಗಳನ್ನು ನಾವು ಮೇಲ್ವಿಚಾರಣೆ ನಡೆಸಿ ತಕ್ಷಣ ನೆರವಿಗೆ‌ ಮುಂದಾಗುತ್ತೇವೆ‌ ಎಂದರು.

ಬಳಿಕ ರೈಲ್ವೆ ಪೊಲೀಸ್ ಸಿಬ್ಬಂದಿಗೆ ಆಕ್ಸಿಜನ್ ಸಿಲಿಂಡರ್ ಬಳಕೆ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಈ ವೇಳೆ ರೈಲ್ವೆ ಹಾಸ್ಪಿಟಲ್ ನಿರ್ದೇಶಕ ವಾಸುದೇವ,  ಸ್ವಾಗ್ ಸಂಸ್ಥೆಯ ಅಜಯಪ್ರತಾಪ ಸಿಂಗ್, ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಇತರರು ಇದ್ದರು.

ಸಹಾಯವಾಣಿ

7069999961 ಗೆ ಕರೆ ಮಾಡಿ ಆಕ್ಸಿಜನ್ ಸಿಲಿಂಡರ್ ಪಡೆದುಕೊಳ್ಳಬಹುದು. ಹುಬ್ಬಳ್ಳಿ ಧಾರವಾಡ ಸೇರಿ ಸುತ್ತಲಿನ 120 ಕಿಮೀ ಅಂತರದಲ್ಲಿ ಈ ಸಂಪೂರ್ಣ ಉಚಿತ ಸೇವೆ ಲಭ್ಯವಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona