2016ರಲ್ಲಿ ನಡೆದ ದುರಂತದಿಂದಾಗಿ ಸ್ಥಗಿತಗೊಂಡಿದ್ದ ಈ ಪ್ರವಾಸಿ ಆಕರ್ಷಣೆಯು, ಇದೀಗ ಪೆಡೆಲ್ ಬೋಟ್, ಸ್ಪೀಡ್ ಬೋಟ್ ಸೇರಿದಂತೆ ವಿವಿಧ ದೋಣಿಗಳೊಂದಿಗೆ ಮತ್ತು ಕಡ್ಡಾಯ ಲೈಫ್ ಜಾಕೆಟ್ ಸುರಕ್ಷತಾ ಕ್ರಮಗಳೊಂದಿಗೆ ಮರುಕಳಿಸುತ್ತಿದೆ.

ವಿಜಯಪುರ: ಪ್ರವಾಸಿ ತಾಣ ಆಲಮಟ್ಟಿಯ ರಾಕ್ ಉದ್ಯಾನದಲ್ಲಿರುವ ಸಿಲ್ವರ್ ಲೇಕ್‌ನಲ್ಲಿ ಕಳೆದ 9 ವರ್ಷಗಳಿಂದ ಸ್ಥಗಿತಗೊಂಡಿದ್ದ ದೋಣಿ ವಿಹಾರಕ್ಕೆ ಜ.24ರಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಎಸ್.ಆರ್.ಪಾಟೀಲ, ಮುಖ್ಯ ಎಂಜಿನಿಯರ್ ಡಿ.ಬಸವರಾಜ ಉಪಸ್ಥಿತರಿರಲಿದ್ದಾರೆ.

ಪ್ರತಿ ಪ್ರವಾಸಿಗರಿಗೂ ಲೈಫ್ ಜಾಕೆಟ್ ಕಡ್ಡಾಯ

ಪೆಡೆಲ್ ಬೋಟ್, ಸ್ಪೀಡ್ ಬೋಟ್, ಕಯಾಕಿಂಗ್, ಚಾಬಿರ್ಂಗ್, ರಾಫ್ಟಿಂಗ್, ರೋಯಿಂಗ್ ಸೇರಿದಂತೆ ನಾನಾ ಬೋಟ್ ಗಳು ಕಾರ್ಯನಿರ್ವಹಿಸಲಿದ್ದು, ಒಂದು ರೈಡ್‌ಗೆ ಪ್ರತಿ ವ್ಯಕ್ತಿಗೆ ₹50ರಿಂದ ₹100 ದರ ನಿಗದಿಗೊಳಿಸಲಾಗಿದೆ. ವಾರ್ಷಿಕ ₹11.50 ಲಕ್ಷ ಟೆಂಡರ್ ಆಗಿದ್ದು, ಬೋಟ್‌ಗಳನ್ನು ಗುತ್ತಿಗೆದಾರರೇ ತಂದು ನಿರ್ವಹಿಸಬೇಕು ಜತೆಗೆ ಎಲ್ಲಾ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಬೇಕು, ಬೋಟಿಂಗ್ ಮಾಡುವ ಪ್ರತಿ ಪ್ರವಾಸಿಗರೂ ಲೈಫ್ ಜಾಕೆಟ್ ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಇಷ್ಟು ದಿನ ಬಂದ್‌ ಬೀಳಲು ಕಾರಣ:

ಕೆಬಿಜೆಎನ್ಎಲ್ ಅರಣ್ಯ ಇಲಾಖೆಯಿಂದ 2006 ಏ.21ರಿಂದಲೇ ಪ್ರವಾಸಿಗರಿಗಾಗಿ ಪ್ಯಾಡೆಲ್ ಬೋಟಿಂಗ್ ಕಾರ್ಯಾಚರಣೆ ಆರಂಭಗೊಂಡಿತ್ತು. ಆಗ ಇಡೀ ಜಿಲ್ಲೆಯಲ್ಲಿಯೇ ಪ್ರವಾಸಿಗರಿಗಾಗಿ ಇದ್ದ ಏಕೈಕ ಬೋಟಿಂಗ್ ತಾಣ ಇದಾಗಿತ್ತು. ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸಿತ್ತು. ಆದರೆ 2016 ರಲ್ಲಿ ಬೋಟಿಂಗ್ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಿಲ್ವರ್ ಲೇಕ್‌ನಡಿ (9 ಅಡಿ ಆಳ ಇರುವ) ಬಿದ್ದು ಮೃತಪಟ್ಟಿದ್ದನು. ಈ ಘಟನೆಯಾದಾಗಿನಿಂದ ಬೋಟಿಂಗ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ನಾನಾ ತಾಂತ್ರಿಕ, ಕಾನೂನು ಸಮಸ್ಯೆಯ ಕಾರಣ ಬೋಟಿಂಗ್ ಆರಂಭಗೊಳ್ಳಲೇ ಇಲ್ಲ. ಆಲಮಟ್ಟಿಗೆ ನಿತ್ಯ ಬರುತ್ತಿದ್ದ ಸಹಸ್ರಾರು ಪ್ರವಾಸಿಗರು ಬೋಟಿಂಗ್ ಇಲ್ಲದೇ ನಿರಾಶೆ ಹಾಗೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.