ಮೋಹನ ಹಂಡ್ರಂಗಿ

 ಬೆಂಗಳೂರು [ಮಾ.11]:  ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತೆವಳುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಏಪ್ರಿಲ್‌ನಿಂದ ಮತ್ತಷ್ಟುಸಂಕಷ್ಟಕ್ಕೆ ಸಿಲುಕುವುದು ಖಚಿತ! ಏಕೆಂದರೆ, ರಾಜ್ಯ ಬಜೆಟ್‌ನಲ್ಲಿ ಇಂಧನದ ಮೇಲಿನ ತೆರಿಗೆ ಹೆಚ್ಚಳ ಮಾಡಿರುವುದರಿಂದ ಡೀಸೆಲ್‌ ದರ ಪ್ರತಿ ಲೀಟರ್‌ಗೆ 1.59 ರು. ಏರಿಕೆ ಆಗುವುದರಿಂದ ನಿಗಮಕ್ಕೆ ಮಾಸಿಕ 1.50 ಕೋಟಿ ರು. ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ.

ಕಳೆದ 4 ವರ್ಷಗಳಿಂದ ಸತತ ನಷ್ಟಅನುಭವಿಸುತ್ತಿರುವ ಬಿಎಂಟಿಸಿ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದೆ. ಸಾರಿಗೆ ಸಚಿವರೇ ಹೇಳುವಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಷ್ಟಅನುಭವಿಸುತ್ತಿವೆ. ಈ ಪೈಕಿ ಬಿಎಂಟಿಸಿ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಈ ನಡುವೆ ರಾಜ್ಯ ಸರ್ಕಾರ ಇಂಧನದ ಮೇಲಿನ ತೆರಿಗೆ ಹೆಚ್ಚಳ ಮಾಡಿದೆ. ಸರ್ಕಾರವೇ ಮಾಹಿತಿ ನೀಡಿರುವ ಪ್ರಕಾರ ಮುಂದಿನ ಏಪ್ರಿಲ್‌ನಿಂದ ಪ್ರತಿ ಲೀಟರ್‌ ಡೀಸೆಲ್‌ ದರ 1.59 ರು.  ಹೆಚ್ಚಳವಾಗಲಿದೆ. ಇದರಿಂದ ನಿಗಮಕ್ಕೆ ಮಾಸಿಕ 1.50 ರು. ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಅಗುವುದರಿಂದ ನಿಗಮದ ಆರ್ಥಿಕ ಸ್ಥಿತಿ ಮತ್ತಷ್ಟುಹದಗೆಡುವುದು ನಿಶ್ಚಿತ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಬಿಎಸ್‌ವೈ ಬಜೆಟ್ ಖಾಸ್ ಬಾತ್: ಮಹಿಳಾ ಕಾರ್ಮಿಕರಿಗೆ ಉಚಿತ BMTC ಪಾಸ್!...

ದಿನಕ್ಕೆ 3.16 ಲಕ್ಷ ಲೀಟರ್‌:

ರಾಜಧಾನಿಯಲ್ಲಿ ಸುಮಾರು 6500 ಬಸ್‌ ಕಾರ್ಯಾಚರಣೆ ಮಾಡುತ್ತಿರುವ ಬಿಂಟಿಸಿಯು ಪ್ರತಿ ದಿನ 3.16 ಲಕ್ಷ ಲೀಟರ್‌ ಡೀಸೆಲ್‌ ಬಳಕೆ ಮಾಡುತ್ತಿದೆ. ಮಾಸಿಕ 94.80 ಲಕ್ಷ ಲೀಟರ್‌ ವ್ಯಯಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೊಲಿಯಂ ಕಾರ್ಪೊರೇಶನ್‌ ಲಿಮಿಟೆಡ್‌ (ಬಿಪಿಸಿಎಲ್‌) ನಿಂದ ಬಿಎಂಟಿಸಿ ಡೀಸೆಲ್‌ ಖರೀದಿಸುತ್ತಿದೆ. ಬಿಎಂಟಿಸಿ ಭಾರೀ ಪ್ರಮಾಣದಲ್ಲಿ ಡೀಸೆಲ್‌ ಖರೀದಿಸುವುದರಿಂದ ಬಿಪಿಸಿಎಲ್‌ ಡೀಸೆಲ್‌ಗೆ ಸಗಟು ದರ ವಿಧಿಸುತ್ತಿದೆ. ಅಂದರೆ, ಮಾರುಕಟ್ಟೆಗೆ ದರಕ್ಕಿಂತ ಕೊಂಚ ಕಡಿಮೆ ದರಲ್ಲಿ ಡೀಸೆಲ್‌ ಪೂರೈಸುತ್ತಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆದರಕ್ಕೆ ಅನುಗುಣವಾಗಿ ದಿನ ನಿತ್ಯ ತೈಲ ದರ ಪರಿಷ್ಕರಣೆಯಾಗಲಿದೆ. ಹೀಗಾಗಿ ಡೀಸೆಲ್‌ ದರ ಏರಿಳಿತದಿಂದ ಕೂಡಿರುತ್ತದೆ. ದರ ಏರಿಕೆಯಾದಾಗಲೆಲ್ಲ ಸಾರಿಗೆ ನಿಗಮಗಳಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ.

ಬಿಎಂಟಿಸಿ ನಷ್ಟದ ಮಾಹಿತಿ

ವರ್ಷ ನಷ್ಟ(ಕೋಟಿ .)

2016-17 260

2017-18 217

2018-19 300

2019-20 350

1300 ಕೋಟಿ ಸಾಲ!

ಸಾರಿಗೆ ಆದಾಯ ನಷ್ಟ, ಅಧಿಕ ಕಾರ್ಯಾಚರಣೆ ವೆಚ್ಚ, ಡೀಸೆಲ್‌ ದರ ಏರಿಕೆ, ನಿರ್ವಹಣೆ ವೆಚ್ಚ ಸೇರಿದಂತೆ ನಾನಾ ಕಾರಣಗಳಿಂದ ನಷ್ಟಕ್ಕೆ ಸಿಲುಕಿ ಕಂಗೆಟ್ಟಿರುವ ಬಿಎಂಟಿಸಿಯು ವಿವಿಧ ಹಣಕಾಸು ಸಂಸ್ಥೆಗಳಿಂದ ಸುಮಾರು 1300 ಕೋಟಿ ಸಾಲ ಪಡೆದಿದ್ದು, ಪ್ರತಿ ವರ್ಷ ಕೋಟ್ಯಂತರ ರುಪಾಯಿ ಬಡ್ಡಿ ಪಾವತಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಸಾಲದ ಮೊತ್ತ ಬೆಟ್ಟದಂತೆ ಏರಿಕೆಯಾಗುತ್ತಿದೆ. ರಾಜ್ಯ ಸರ್ಕಾರ ನಷ್ಟದಿಂದ ತತ್ತರಿಸಿರುವ ಬಿಎಂಟಿಸಿ ನೆರವಿಗೆ ಧಾವಿಸಬೇಕು. ಇಲ್ಲವಾದರೆ, ಇನ್ನು ಕೆಲವೇ ತಿಂಗಳಲ್ಲಿ ನೌಕರರ ವೇತನ, ಭತ್ಯೆ ನೀಡುವುದು ನಿಗಮಕ್ಕೆ ಹೊರೆಯಾಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಡೀಸೆಲ್‌ ದರ ಹೆಚ್ಚಳವಾದಾಗಲೆಲ್ಲಾ ನಿಗಮಕ್ಕೆ ಆರ್ಥಿಕ ಹೊರೆ ಹೆಚ್ಚಾಗಲಿದೆ. ಇದೀಗ ಬಜೆಟ್‌ನಲ್ಲಿ ಇಂಧನದ ಮೇಲಿನ ತೆರಿಗೆ ಹೆಚ್ಚಳದಿಂದ ಎಂದಿನಂತೆ ಡೀಸೆಲ್‌ ದರ ಏರಿಕೆಯಾಗಲಿದೆ. ಇದು ನಿಗಮದ ಆರ್ಥಿಕತೆಯ ಮೇಲೆ ಪರಿಣಾಮ ಉಂಟು ಮಾಡಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ನೆರವು ಕೋರುತ್ತೇವೆ.

-ಸಿ.ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ