Asianet Suvarna News Asianet Suvarna News

ಬಿಎಂಟಿಸಿ ಸಿಬ್ಬಂದಿ ರಜೆ ಈಗ ಆನ್‌ಲೈನ್‌..!

ಎಲ್‌ಎಂಎಸ್‌ ವ್ಯವಸ್ಥೆಯಲ್ಲಿ ರಜೆ ನೀಡಲು ನಿರ್ಧಾರ| ಮೊದಲಿಗೆ ನಿಗಮದ ಆರು ಘಟಕಗಳಲ್ಲಿ ಜಾರಿ| ರಜೆ ನಿರ್ವಹಣೆ ಮಾಡುತ್ತಿದ್ದ ಕಿಯೋಸ್ಕ್‌ ವ್ಯವಸ್ಥೆ ವಿಫಲ| ಅಧಿಕಾರಿಗಳಿಂದ ರಜೆ ನೀಡಲು ಲಂಚಕ್ಕೆ ಬೇಡಿಕೆ ಹಿನ್ನೆಲೆ| 

BMTC staff Leave Now Online grg
Author
Bengaluru, First Published Oct 31, 2020, 9:23 AM IST

ಬೆಂಗಳೂರು(ಅ.31): ಬಿಎಂಟಿಸಿ ಚಾಲನಾ ಸಿಬ್ಬಂದಿ ರಜೆ ಪಡೆಯಲು ಇನ್ನು ಮುಂದೆ ಅಧಿಕಾರಿಗಳ ಎದುರು ಅಂಗಲಾಚದೇ ನೇರವಾಗಿ ಆನ್‌ಲೈನ್‌ನಲ್ಲಿ ರಜೆ ಪಡೆಯುವ ‘ಲೀವ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ (ಎಲ್‌ಎಂಎಸ್‌) ವ್ಯವಸ್ಥೆಯನ್ನು ಕಟ್ಟುನಿಟ್ಟಿನ ಜಾರಿಗೆ ನಿಗಮ ಮುಂದಾಗಿದೆ.

ಪ್ರಸ್ತುತ ಬಿಎಂಟಿಸಿ ಘಟಕಗಳ ಸಿಬ್ಬಂದಿ ರಜೆ ಪಡೆಯಲು ಘಟಕ ವ್ಯವಸ್ಥಾಪಕರು ಅಥವಾ ಹಿರಿಯ ಅಧಿಕಾರಿಗಳಿಗೆ ರಜೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯುತ್ತಿದ್ದಾರೆ. ಈ ನಡುವೆ ಕೆಲ ಘಟಕಗಳಲ್ಲಿ ರಜೆ ನೀಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ರಜೆ ವಿಚಾರವಾಗಿ ಸಿಬ್ಬಂದಿ ಹಾಗೂ ಅಧಿಕಾರಿಗಳ ನಡುವೆ ಜಟಾಪಟಿಗಳೂ ಏರ್ಪಡುತ್ತಿವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸಿಬ್ಬಂದಿಯೇ ಆನ್‌ಲೈನ್‌ನಲ್ಲಿ ರಜೆ ಪಡೆಯುವ ವ್ಯವಸ್ಥೆ ಜಾರಿಗೆ ನಿಗಮ ಮುಂದಾಗಿದೆ.

ಆರು ಘಟಕಗಳಲ್ಲಿ ಜಾರಿ:

ಆರು ವರ್ಷದ ಹಿಂದೆ ಸುಮಾರು 20 ಘಟಕಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿತ್ತಾದರೂ ಘಟಕಗಳಲ್ಲಿ ರಜೆ ನಿರ್ವಹಣೆ ಕಿಯೋಸ್ಕ್‌ಗಳ ವೈಫಲ್ಯದಿಂದ ಹೆಚ್ಚು ದಿನ ಈ ವ್ಯವಸ್ಥೆ ನಡೆಯಲಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿಯೇ ರಜೆ ಪಡೆಯುವ ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಲಾಗಿತ್ತು. ಇದೀಗ ಮತ್ತೆ ಪೀಣ್ಯ, ಕೆಂಗೇರಿ, ಹೆಣ್ಣೂರು, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಪೂರ್ಣಪ್ರಜ್ಞಾ ಲೇಔಟ್‌ ಘಟಕಗಳಲ್ಲಿ ‘ಲೀವ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ ಜಾರಿಗೆ ತರಲಾಗಿದೆ.

ಒಮ್ಮೆ ಚಾರ್ಜ್ ಮಾಡಿದ್ರೆ 250 KM ಸಂಚಾರ :BMTC ಎಲೆಕ್ಟ್ರಿಕಲ್ ಬಸ್ ಪ್ರಯೋಗಾರ್ಥ ಸಂಚಾರ

ರಜೆ ಪಡೆಯುವ ವಿಧಾನ ಹೀಗಿದೆ

ಸಿಬ್ಬಂದಿ ಆನ್‌ಲೈನ್‌ ರಜೆ ಪಡೆಯಲು ಬಿಎಂಟಿಸಿ ಅಭಿವೃದ್ಧಿ ಪಡಿಸಿರುವ (http://mybmtc.com/BMTC/) ತಂತ್ರಾಂಶದಲ್ಲಿ ಪಿ.ಎಫ್‌. ಸಂಖ್ಯೆ ಮತ್ತು ಪಾಸ್‌ ವರ್ಡ್‌ ಬಳಸಿ ಲಾಗಿನ್‌ ಆಗಬೇಕು. ರಜೆ ಪಡೆಯಲು ಕೋರಿಕೆ ದಿನಾಂಕದ ಹಿಂದಿನ 30 ದಿನಗಳ ಪೈಕಿ ಕನಿಷ್ಠ 22 ದಿನ ಕರ್ತವ್ಯ ನಿರ್ವಹಿಸಿರಬೇಕು. ಈ 30 ದಿನಗಳಲ್ಲಿ ಎರಡು ದಿನಕ್ಕೆ ಮೇಲ್ಪಟ್ಟು ಗೈರು ಹಾಜರಾಗಿರಬಾರದು. ಸಿಬ್ಬಂದಿ ತಿಂಗಳಿಗೆ ಮೂರು ದಿನ ಮಾತ್ರ ರಜೆ ಪಡೆಯಲು ಅವಕಾಶವಿದೆ. ಹೆಚ್ಚಿನ ಅವಧಿಗೆ ರಜೆಗೆ ಘಟಕ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕು. ಸಿಬ್ಬಂದಿ 48 ಗಂಟೆಗಳ ಮುಂಚಿತವಾಗಿ ರಜೆ ಪಡೆಯಬೇಕು. 30 ದಿನ ಮೊದಲೇ ಮುಂಗಡ ರಜೆ ಪಡೆಯಲೂ ಅವಕಾಶವಿದೆ. ಪಡೆದ ರಜೆಯನ್ನು 48 ಗಂಟೆ ಮುಂಚಿತವಾಗಿ ರದ್ದುಪಡಿಸಬಹುದು.

ನಿಗದಿತ ಆರು ಘಟಕಗಳಲ್ಲಿ ಇನ್ನು ಮುಂದೆ ಯಾವೊಬ್ಬ ಸಿಬ್ಬಂದಿಯೂ ಮ್ಯಾನುಯಲ್‌ ಮೂಲಕ ರಜೆ ಅರ್ಜಿ ಸಲ್ಲಿಸುವಂತಿಲ್ಲ ಮತ್ತು ಅದನ್ನು ಘಟಕ ವ್ಯವಸ್ಥಾಪಕರು ಅನುಮೋದಿಸುವಂತಿಲ್ಲ ಎಂದು ಬಿಎಂಟಿಸಿ ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
 

Follow Us:
Download App:
  • android
  • ios