ಬೆಂಗಳೂರು [ಜು.14]:  ರಾಜಧಾನಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರದ ಕನಸಿಗೆ ಮರುಜೀವ ಬಂದಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಎಲೆಕ್ಟ್ರಿಕ್‌ ಬಸ್‌ ಖರೀದಿ ಪ್ರಕ್ರಿಯೆ ಚುರುಕುಗೊಳಿಸಿದ್ದು, ಶೀಘ್ರದಲ್ಲೇ ಟೆಂಡರ್‌ ಆಹ್ವಾನಿಸಲು ಸಿದ್ಧತೆ ನಡೆಸಿದೆ.

ಕಳೆದ ಫೆಬ್ರವರಿಯಲ್ಲಿ ನಡೆದ ಬಿಎಂಟಿಸಿ ಆಡಳಿತ ಮಂಡಳಿ ಸಭೆಯಲ್ಲಿ ನಿಗಮಕ್ಕೆ ಐದು ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ 1500 ಎಲೆಕ್ಟ್ರಿಕ್‌ ಬಸ್‌ ಖರೀದಿಸಲು ನಿರ್ಧರಿಸಲಾಗಿತ್ತು. ಅದರಂತೆ ಕಳೆದ ಮಾಚ್‌ರ್‍ 7ರಂದು ಎಲೆಕ್ಟ್ರಿಕ್‌ ಬಸ್‌ ಹಾಗೂ ಚಾರ್ಜಿಂಗ್‌ ಘಟಕಗಳ ಬಗ್ಗೆ ಮಾಹಿತಿ ನೀಡಲು ಆಸಕ್ತ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡಿತ್ತು. ಏ.15ರೊಳಗೆ ಮಾಹಿತಿ ಹಂಚಿಕೊಳ್ಳುವಂತೆ ಸೂಚಿಸಿತ್ತು. ಇದೀಗ ಎಲೆಕ್ಟ್ರಿಕ್‌ ಬಸ್‌ ತಯಾರಿಸುವ ಆರು ಕಂಪನಿಗಳು ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್‌ ಕುರಿತಂತೆ ಪ್ರಾತ್ಯಕ್ಷಿಕೆ ಮೂಲಕ ವಿಸ್ತೃತ ಮಾಹಿತಿ ನೀಡಿವೆ. ಒಲೆಕ್ಟ್ರಾ ಗ್ರೀನ್‌ ಟೆಕ್‌, ಅಶೋಕ ಲೇಲ್ಯಾಂಡ್‌, ಟಾಟಾ ಮೋಟ​ರ್‍ಸ್, ಇಡಿಸೆನ್‌ ಮೋಟಾ​ರ್‍ಸ್, ಜಿಬಿಎಂ ಗ್ರೂಪ್‌ ಹಾಗೂ ಎಎಂಐ ಎಲೆಕ್ಟ್ರಿಕ್‌ ಲಿಮಿಟೆಡ್‌ ಸೇರಿ ಆರು ಕಂಪನಿಗಳು ಮಾಹಿತಿ ಹಂಚಿಕೊಂಡಿವೆ. ಇದರ ಬೆನ್ನಲ್ಲೇ ಬಿಎಂಟಿಸಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಖರೀದಿ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.

ಬಿಎಂಟಿಸಿಯು ಏಕಾಏಕಿ 1500 ಎಲೆಕ್ಟ್ರಿಕ್‌ ಬಸ್‌ ಖರೀದಿಸುವುದಿಲ್ಲ. ಮೊದಲ ಹಂತದಲ್ಲಿ 80 ಎಲೆಕ್ಟ್ರಿಕ್‌ ಬಸ್‌ ಖರೀದಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಎಲೆಕ್ಟ್ರಿಕ್‌ ಬಸ್‌ ತಯಾರಿಸುವ ಆರು ಕಂಪನಿಗಳು ಎಲೆಕ್ಟ್ರಿಕ್‌ ಬಸ್‌ ತಂತ್ರಜ್ಞಾನ, ವಿನ್ಯಾಸ, ಚಾರ್ಜಿಂಗ್‌ ಘಟಕ ಮೊದಲಾದ ತಾಂತ್ರಿಕ ವಿಚಾರಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿವೆ. ಶೀಘ್ರದಲ್ಲೇ ನಿಗಮದ ಆಡಳಿತ ಮಂಡಳಿ ಸಭೆ ಜರುಗಲಿದ್ದು, ಟೆಂಡರ್‌ ಆಹ್ವಾನದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಎಲೆಕ್ಟ್ರಿಕ್‌ ಬಸ್‌ಗೆ ಫೇಮ್‌ ಅಡ್ಡಿ?

ಕೇಂದ್ರ ಬೃಹತ್‌ ಕೈಗಾರಿಕೆ ಸಚಿವಾಲಯವು ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಉತ್ತೇಜಿಸುವ ಹಿನ್ನೆಲೆಯಲ್ಲಿ ‘ಫಾಸ್ಟರ್‌ ಅಡಪ್ಷನ್‌ ಅಂಡ್‌ ಮ್ಯಾನುಫ್ಯಾಕ್ಚರಿಂಗ್‌ ಆಫ್‌ ಹೈಬ್ರಿಡ್‌ ಆ್ಯಂಡ್‌ ಎಲೆಕ್ಟ್ರಿಕ್‌ ವೆಹಿಕಲ್‌ (ಫೇಮ್‌)’ ಯೋಜನೆಯಡಿ ಸಹಾಯಧನ ನೀಡುತ್ತಿದೆ. ಬಿಎಂಟಿಸಿಯು ಈ ಹಿಂದೆ ಗುತ್ತಿಗೆ ಆಧಾರದಡಿ 150 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಮುಂದಾದಾಗ ಫೇಮ್‌ ಯೋಜನೆ ಮೊದಲ ಹಂತದಲ್ಲಿ ಸಹಾಯಧನಕ್ಕೆ ಮನವಿ ಮಾಡಿತ್ತು. ಈ ಮನವಿಗೆ ಒಪ್ಪಿದ್ದ ಕೇಂದ್ರ ಬೃಹತ್‌ ಕೈಗಾರಿಕೆ ಸಚಿವಾಲಯವು ವಿವಿಧ ಹಂತಗಳಲ್ಲಿ ಸಹಾಯಧನ ನೀಡಲು ಸಮ್ಮತಿ ಸೂಚಿಸಿತ್ತು. ಆದರೆ, ಬಿಎಂಟಿಸಿ ಅಂತಿಮ ಕ್ಷಣದಲ್ಲಿ ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್‌ ಬಸ್‌ ಪಡೆಯುವ ಯೋಜನೆ ಕೈಬಿಟ್ಟಿತ್ತು. ಇದೀಗ ಫೇಮ್‌ ಎರಡನೇ ಹಂತದಲ್ಲಿ ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಸಹಾಯಧನ ನೀಡುವಂತೆ ಮನವಿ ಮಾಡಲು ಬಿಎಂಟಿಸಿ ನಿರ್ಧರಿಸಿದೆ.

ಫೇಮ್‌ ಎರಡನೇ ಹಂತದಲ್ಲಿ ಗುತ್ತಿಗೆ ಆಧಾರದಡಿ ಪಡೆಯುವ ಬಸ್‌ಗಳಿಗೆ ಮಾತ್ರ ಸಹಾಯಧನ ನೀಡಲು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ ನಿರ್ಧರಿಸಿದೆ. ಆದರೆ, ಬಿಎಂಟಿಸಿ ಬಸ್‌ ಖರೀದಿಸಲು ತೀರ್ಮಾನಿಸಿರುವುದರಿಂದ ಫೇಮ್‌ ಯೋಜನೆಯಡಿ ಸಹಾಯಧನ ಸಿಗುವುದು ಸುಲಭವಲ್ಲ. ಈ ನಡುವೆ ಬಿಎಂಟಿಸಿಯು ಗುತ್ತಿಗೆ ಮಾದರಿಗಿಂತ ಎಲೆಕ್ಟ್ರಿಕ್‌ ಬಸ್‌ ಖರೀದಿಯಿಂದ ನಿಗಮಕ್ಕಾಗುವ ಲಾಭಗಳ ಬಗ್ಗೆ ಕೇಂದ್ರಕ್ಕೆ ಮನದಟ್ಟು ಮಾಡಿಸಿ, ಸಹಾಯಧನ ಪಡೆದುಕೊಳ್ಳಲು ತೀರ್ಮಾನಿಸಿದೆ.

 ನಿಗಮಕ್ಕೆ ಹೊರೆಯಾಗಲ್ಲ

ಎಲೆಕ್ಟ್ರಿಕ್‌ ಬಸ್‌ಗಳ ದರ ಸುಮಾರು ಒಂದೂವರೆ ಕೋಟಿ ರು. ಇದೆ. ಸದ್ಯ ನಿಗಮದ ಆರ್ಥಿಕ ಪರಿಸ್ಥಿತಿಯಲ್ಲಿ ಇಷ್ಟುದುಬಾರಿ ಮೊತ್ತ ಪಾವತಿಸಿ ಖರೀದಿಸುವುದು ಕಷ್ಟವಾಗುತ್ತದೆ. ಫೇಮ್‌ ಯೋಜನೆಯಡಿ ಪ್ರತಿ ಎಲೆಕ್ಟ್ರಿಕ್‌ ಬಸ್‌ಗೆ ಸುಮಾರು ಒಂದು ಕೋಟಿ ರು. ಸಹಾಯಧನ ಸಿಗುವ ಸಾಧ್ಯತೆಯಿದೆ. ಇದರ ಜತೆಗೆ ರಾಜ್ಯ ಸರ್ಕಾರಕ್ಕೂ ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಅನುದಾನಕ್ಕೆ ಮನವಿ ಮಾಡಲಾಗುವುದು. ಅಂತೆಯೆ ಚಾರ್ಜಿಂಗ್‌ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ನೀಡುವಂತೆಯೂ ಕೋರಲಾಗುವುದು. ಇದರಿಂದ ನಿಗಮಕ್ಕೆ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಎಲೆಕ್ಟ್ರಿಕ್‌ ಬಸ್‌ ಖರೀದಿ ಸಂಬಂಧ ಆಸಕ್ತ ಕಂಪನಿಗಳಿಂದ ಎಲೆಕ್ಟ್ರಿಕ್‌ ಬಸ್‌ ಹಾಗೂ ಚಾರ್ಜಿಂಗ್‌ ಸ್ಟೇಷನ್‌ಗಳ ಬಗ್ಗೆ ವಿಸ್ತೃತ ಮಾಹಿತಿ ನೀಡುವಂತೆ ಆಹ್ವಾನಿಸಲಾಗಿತ್ತು. ಆರು ಕಂಪನಿಗಳು ಮುಂದೆ ಬಂದು ಮಾಹಿತಿ ಹಂಚಿಕೊಂಡಿವೆ. ಶೀಘ್ರದಲ್ಲೇ ನಿಗಮದ ಆಡಳಿತ ಮಂಡಳಿ ಸಭೆ ಜರುಗಲಿದ್ದು, ಟೆಂಡರ್‌ ಮೊದಲಾದ ವಿಚಾರಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

-ಡಾ.ಎನ್‌.ವಿ.ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ.

ವರದಿ :  ಮೋಹನ ಹಂಡ್ರಂಗಿ