Asianet Suvarna News Asianet Suvarna News

ಬಿಎಂಟಿಸಿಗೆ ಆರ್ಥಿಕ ಸಂಕಷ್ಟ: ಬಸ್‌, ಕಟ್ಟಡ ಅಡ ಇಟ್ಟು 230 ಕೋಟಿ ಸಾಲ ಪಡೆಯಲು ನಿರ್ಧಾರ

ನಿಗಮ ಸಾಲ ಪಡೆಯಲು ಅನುಮತಿ ನೀಡಿದ ರಾಜ್ಯ ಸರ್ಕಾರ| ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ಪಡೆಯಲು ತೀರ್ಮಾನ| ಆಸಕ್ತ ಬ್ಯಾಂಕ್‌ಗಳನ್ನು ಟೆಂಡರ್‌ಗೆ ಆಹ್ವಾನಿಸಿದ್ದು, ಕೆಲ ಷರತ್ತು ವಿಧಿಸಿದೆ| 

BMTC Decide for 230 Crore rs Loan grg
Author
Bengaluru, First Published Dec 21, 2020, 7:10 AM IST

ಬೆಂಗಳೂರು(ಡಿ.21): ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಬಸ್‌, ಭೂಮಿ ಹಾಗೂ ಕಟ್ಟಡಗಳನ್ನು ಆಧಾರವಾಗಿರಿಸಿ 230 ಕೋಟಿ ಸಾಲ ಪಡೆಯಲು ಮುಂದಾಗಿದೆ.

ರಾಜ್ಯ ಸರ್ಕಾರ ಕೂಡ ನಿಗಮ ಸಾಲ ಪಡೆಯಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ಪಡೆಯಲು ತೀರ್ಮಾನಿಸಿದೆ. ಈ ಸಂಬಂಧ ಆಸಕ್ತ ಬ್ಯಾಂಕ್‌ಗಳನ್ನು ಟೆಂಡರ್‌ಗೆ ಆಹ್ವಾನಿಸಿದ್ದು, ಕೆಲ ಷರತ್ತು ವಿಧಿಸಿದೆ. ಒಂದೇ ಕಂತಿನಲ್ಲಿ 230 ಕೋಟಿ ಸಾಲ ನೀಡಬೇಕು. ಸಾಲದ ಮರುಪಾವತಿ ಅವಧಿ ಏಳು ವರ್ಷ ಇರಬೇಕು. ಸಾಲ ಮರುಪಾವತಿ ಆರು ತಿಂಗಳ ನಂತರ ಪ್ರಾರಂಭವಾಗುತ್ತದೆ.

ಬಿಎಂಟಿಸಿ ಬಸ್ ಹತ್ತಿದ್ದ ಮಹಿಳಾ ಸಿಎಂ! ಕಂಡಕ್ಟರ್- ಪ್ರಯಾಣಿಕರಿಗೆ ಫುಲ್ ಶಾಕ್..!

ಬ್ಯಾಂಕ್‌ಗಳು ಬಡ್ಡಿ ದರವನ್ನು ಸ್ಥಿರ ಅಥವಾ ಬದಲಾಗುವ ದರದಲ್ಲಿ ಸೂಚಿಸಬಹುದು. ಯಾವುದೇ ದಂಡ ಶುಲ್ಕ ಪಾವತಿ ಇಲ್ಲದೆ ಸಾಲವನ್ನು ಮುಂಗಡವಾಗಿ ಪಾವತಿಸುವ ಹಕ್ಕನ್ನು ಬಿಎಂಟಿಸಿ ಹೊಂದಿರುತ್ತದೆ. ಯಾವುದೇ ಮುಂಗಡ ಶುಲ್ಕ, ಸಂಸ್ಕರಣ ಶುಲ್ಕಗಳು ಇರಬಾರದು. ಸಾಲದ ಪಾವತಿಗಾಗಿ ನಿಗಮವು ತನ್ನ ಒಡೆತನದ ಬಸ್ಸುಗಳು, ಭೂಮಿ ಹಾಗೂ ಕಟ್ಟಡಗಳನ್ನು ಮೇಲಾಧಾರವಾಗಿ ಇರಿಸಲಿದೆ. ಆಸಕ್ತ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಶೆಡ್ಯೂಲ್ಡ್‌ ಕಮರ್ಷಿಲ್‌ ಬ್ಯಾಂಕ್‌ಗಳು ಈ ಟೆಂಡರ್‌ನಲ್ಲಿ ಭಾಗವಹಿಸಬಹುದು ಎಂದು ಬಿಎಂಟಿಸಿ ತಿಳಿಸಿದೆ.

ಕೊರೋನಾದಿಂದ ಪ್ರಯಾಣಿಕ ಕೊರತೆ ಎದುರಿಸುತ್ತಿರುವ ನಿಗಮದ ಸಾರಿಗೆ ಆದಾಯ ಕುಸಿತವಾಗಿದ್ದು, ಆರ್ಥಿಕ ಸ್ಥಿತಿ ಅಧೋಗತಿ ತಲುಪಿದೆ. ಕಳೆದ ಏಳು ತಿಂಗಳಿಂದ ರಾಜ್ಯ ಸರ್ಕಾರ ನಿಗಮದ ನೌಕರರ ವೇತನ ಪಾವತಿಗೆ ಅನುದಾನ ನೀಡುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ನಿಗಮವು 230 ಕೋಟಿ ಸಾಲ ಪಡೆಯಲು ಮುಂದಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸತತ ನಷ್ಟಕ್ಕೆ ಸುತ್ತಾಗಿರುವ ನಿಗಮ ಈಗಾಗಲೇ ಸುಮಾರು .1 ಸಾವಿರ ಕೋಟಿ ಸಾಲ ಪಡೆದಿದ್ದು, ಕೋಟ್ಯಂತರ ರುಪಾಯಿ ಬಡ್ಡಿ ಪಾವತಿಸುತ್ತಿದೆ.
 

Follow Us:
Download App:
  • android
  • ios