ಕೃಷ್ಣರಾಜಪುರ [ಜು.13]: ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ ಬೆಂಕಿಗೆ ಬೆಂಕಿಗೆ ಆಹುತಿಯಾಗಿರುವ ಘಟನೆ ಮಾರತ್ತಹಳ್ಳಿ ರಿಂಗ್‌ ರಸ್ತೆಯ ದೊಡ್ಡನೆಕ್ಕುಂದಿ ಬಸ್‌ ನಿಲ್ದಾಣ ಬಳಿ ಜರುಗಿದೆ.

ಬನಶಂಕರಿಯಿಂದ ಹೆಬ್ಬಾಳ ಕಡೆಗೆ ಸಂಚರಿಸುತ್ತಿದ್ದ 500ಅ ಮಾರ್ಗ ಸಂಖ್ಯೆಯ ಬಿಎಂಟಿಸಿ ಬಸ್‌ ಬೆಂಕಿಗೆ ಆಹುತಿಯಾಗಿದೆ. ದೊಡ್ಡನೆಕ್ಕುಂದಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಸಾಗುತ್ತಿದ್ದಂತೆ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡು ಕ್ಷಣಾರ್ಧದಲ್ಲಿ ಬಸ್‌ ಸುಟ್ಟು ಕರಕಲಾಗಿದೆ. ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಚಾಲಕ ಕೂಡಲೇ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಬಸ್‌ ಬೆಂಕಿಗೆ ಆಹುತಿಯಾಗಿರುವ ವಿಷಯ ತಿಳಿದು ಸ್ಥಳೀಯ ಖಾಸಗಿ ಸಂಸ್ಥೆಯ ಸಿಬ್ಬಂದಿ ಅಗ್ನಿ ನಂದಿಸುವ ಸಲಕರಣೆಯ ಮೂಲಕ ಬೆಂಕಿ ಆರಿಸಲು ಹರಸಹಸ ಪಟ್ಟರು. ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಈ ವೇಳೆಗೆ ಬಸ್‌ ಅರ್ಧದಷ್ಟುಸುಟ್ಟು ಭಸ್ಮವಾಗಿದೆ.