Asianet Suvarna News Asianet Suvarna News

ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಪ್ರಚಾರಕ್ಕೆ ಬ್ಲಾಗರ್ಸ್ ಮೀಟ್

ಉಡುಪಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳ ಬಗ್ಗೆ ದೇಶ ಮತ್ತು ವಿದೇಶಗಳ ಕೋಟ್ಯಾಂತರ ಜನರನ್ನು ತಲುಪಲು ಈ ಬಾರಿಯ ಪ್ರವಾಸೋದ್ಯಮ ದಿನಾಚಾರಣೆ ಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಬ್ಲಾಗರ್ಸ್ ಮೀಟ್ ಆಯೋಜಿಸುವ  ಮೂಲಕ ವಿಶಿಷ್ಠ ಕಾರ್ಯಕ್ರಮ ರೂಪಿಸಲಾಗಿದೆ.

Bloggers meet to promote tourist spots in Udupi district gow
Author
First Published Sep 27, 2022, 8:03 PM IST

ಉಡುಪಿ (ಸೆ.27): ಉಡುಪಿ ಜಿಲ್ಲೆ ಪ್ರವಾಸಿ ತಾಣಗಳಿಗೆ ಪ್ರಸಿದ್ದಿ, ಇಲ್ಲಿನ ಬೀಚ್ ಗಳು ಮತ್ತು  ದೇವಾಲಯಗಳಿಗೆ ರಾಜ್ಯಾದ್ಯಂತ ಮತ್ತು ದೇಶದ ವಿವಿಧ ಭಾಗಗಳಿಗೆ ಪ್ರವಾಸಿಗರು ಅಗಮಿಸುತ್ತಿದ್ದಾರೆ, ಇಲ್ಲಿನ ಎಲ್ಲಾ ಪ್ರವಾಸಿ ತಾಣಗಳ ಬಗ್ಗೆ ದೇಶ ಮತ್ತು ವಿದೇಶಗಳ ಕೋಟ್ಯಾಂತರ ಜನರನ್ನು ತಲುಪಲು ಈ ಬಾರಿಯ ಪ್ರವಾಸೋದ್ಯಮ ದಿನಾಚಾರಣೆ ಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಬ್ಲಾಗರ್ಸ್ ಮೀಟ್ ಆಯೋಜಿಸುವ  ಮೂಲಕ ವಿಶಿಷ್ಠ ಕಾರ್ಯಕ್ರಮ ರೂಪಿಸಲಾಗಿದೆ. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಭರಾಟೆ ತೀವ್ರವಾಗಿದೆ, ಕ್ಷಣ ಮಾತ್ರದಲ್ಲಿ ಮಾಹಿತಿಗಳನ್ನು ತಲುಪಿಸುವಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ, ಇವುಗಳನ್ನು ಜಿಲ್ಲೆಯ ಪ್ರವಾಸಿ ತಾಣಗಳ ಪ್ರಚಾರಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ , ವಿಶ್ವ  ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರಸಿದ್ದ ಪ್ರವಾಸಿ ಬ್ಲಾಗರ್ ಗಳನ್ನು ಜಿಲ್ಲೆಗೆ ಆಹ್ವಾನಿಸಿ,  ಅವರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಈ ಬ್ಲಾಗರ್ ಮೀಟ್ ಕಾರ್ಯಕ್ರಮಕ್ಕೆ,  ಗೋವಾದಿಂದ 4, ಹೈದ್ರಾಬಾದ್ ನಿಂದ 1, ಜಾರ್ಖಂಡ್ ನಿಂದ 1, ಬೆಂಗಳೂರಿನಿಂದ 3, ಮಂಗಳೂರು 3 ಮತ್ತು ಮಥುರಾದಿಂದ 1  ಬ್ಲಾಗರ್ ಗಳು ಆಗಮಿಸಿದ್ದಾರೆ. ಈ ಎಲ್ಲಾ ಬ್ಲಾಗರ್ ಗಳು ತಮ್ಮ ಬ್ಲಾಗ್ ಗಳಲ್ಲಿ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ವಿಶ್ವದಾದ್ಯಂತ ಪ್ರಚುರಪಡಿಸಲಿದ್ದಾರೆ.

ಈ ಎಲ್ಲಾ ಬ್ಲಾಗರ್ ಗಳು ಒಟ್ಟು 8 ಲಕ್ಷಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದು, ಇದುವರೆಗೆ ತಾವು ಬರೆದ ಲೇಖನಗಳಿಗೆ 3 ಕೋಟಿಗೂ ಅಧಿಕ ವ್ಯೂಸ್ ಗಳ ದಾಖಲೆ ಹೊಂದಿದ್ದಾರೆ, ಇವರುಗಳನ್ನು 2 ದಿನಗಳ ಕಾಲ ಜಿಲ್ಲೆಯ ಎಲ್ಲಾ ಪ್ರವಾಸಿ ಕೇಂದ್ರಗಳಿಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಕರೆದೊಯ್ದು ಪ್ರವಾಸಿ ತಾಣಗಳ ವೀಕ್ಷಣೆ, ಮಾಹಿತಿ, ಅಲ್ಲಿನ ಸೌಲಭ್ಯಗಳು, ವಿಶೇಷತೆಗಳ ಕುರಿತ ಸಂಪೂರ್ಣ ಚಿತ್ರಣದ ಮಾಹಿತಿಯನ್ನು ನೀಡಲಿದ್ದು,  ಈ ಬ್ಲಾಗರ್ ಗಳು ತಮ್ಮ ಬ್ಲಾಗ್ ಗಳಲ್ಲಿ ಈ ಪ್ರವಾಸಿ ತಾಣಗಳ ಬಗ್ಗೆ ವಿಶೇಷ ಲೇಖನಗಳನ್ನು ಬರೆಯಲಿದ್ದಾರೆ.

ಪೂರಕವಾಗಿ ವೀಡಿಯೋಗಳು, ಪೋಟೋಗಳನ್ನು ಎಲ್ಲಾ ರೀತಿಯ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುವ ಮೂಲಕ ದೇಶ ಮತ್ತು ವಿದೇಶಗಳ ಕೋಟ್ಯಾಂತರ ಜನರಿಗೆ ತಿಳಿಸಲಿದ್ದಾರೆ.  ಈ ಬ್ಲಾಗರ್ ಗಳಲ್ಲಿ ಆರ್.ಜೆ ಗಳು ಮತ್ತು ಯು ಟ್ಯೂಬ್ ಗಳ ಅಡ್ಮಿನ್ ಗಳೂ ಕೂಡಾ ಇದ್ದಾರೆ.

ಈ ಬ್ಲಾಗರ್ ಗಳು, ಉಡುಪಿ ಜಿಲ್ಲೆಯ ಮಲ್ಪೆ ಬೀಚ್ , ಸೀ ವಾಕ್, ಹೌಸ್ ಬೋಟ್, ಕಯಾಕಿಂಗ್ ಪ್ರದೇಶಗಳು, ಹಸ್ತಶಿಲ್ಪ ಗ್ರಾಮ, ಶ್ರೀ ಕೃಷ್ಣ ಮಠ, ಕಾಪು ಲೈಟ್ ಹೌಸ್, ಪಡುಬಿದ್ರೆ ಬ್ಲೂ ಫ್ಲಾಗ್ ಬೀಚ್, ಅತ್ತೂರು ಚರ್ಚ್,  ಚರ್ತುಮುಖ ಬಸದಿ, ಕಾರ್ಕಳ ಗೊಮ್ಮಟ ಬೆಟ್ಟ,  ಸೈಂಟ್ ಮೇರಿಸ್ ಐಲ್ಯಾಂಡ್, ವರಂಗ ಕೆರೆ ಬಸದಿ, ಸಾಲು ಮರದ ತಿಮ್ಮಕ ಟ್ರೀ ಪಾರ್ಕ್ ಸೇರಿದಂತೆ ಇನ್ನಿತರೆ ಪ್ರದೇಶಗಳಿಗೆ 2 ದಿನಗಳ ಕಾಲ ಭೇಟಿ ನೀಡಲಿದ್ದಾರೆ. 

ತಾವು ಸಂಗ್ರಹಿಸಿದ ಪೊಟೋ, ವೀಡಿಯೋ ಮತ್ತು ವರದಿಯನ್ನು ದೇಶದ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ ಗೆ ಮತ್ತು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ ಗೆ ಲಿಂಕ್ ಮಾಡುವ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸಲಿದ್ದಾರೆ. 

ಯಾವಾಗ ಓಪನ್ ಆಗುತ್ತೆ ಮಲ್ಪೆ ಬೀಚ್? ಎಂಜಾಯ್ ಮಾಡಲು ಪ್ರವಾಸಿಗರ ಕಾತರ

ಸಾರ್ವಜನಿಕರಿಗೆ ಯಾವುದೇ ವಿಷಯಗಳು ಮತ್ತು ಯೋಜನೆಗಳ  ಮಾಹಿತಿ ನೀಡುವಲ್ಲಿ , ಪ್ರಸ್ತುತ ಇರುವ ಮಾಧ್ಯಮಗಳ ಜೊತೆಗೆ ಸಾಮಾಜಿಕ ಮಾಧ್ಯಮಗಳು ಕೂಡಾ ಪ್ರಚಾರ ನೀಡುವ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃಧಿಗೊಳಿಸಲು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬ್ಲಾಗರ್ಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಬಿಸುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ , ಅನುಮತಿಗಳನ್ನು ನೀಡುವಾಗ ಅಗತ್ಯವಿರುವ ನಿಯಮಗಳಲ್ಲಿ ಸರಳೀಕರಣ ಮತ್ತು ಅನ್‍ಲೈನ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

Follow Us:
Download App:
  • android
  • ios