ಬಲ್ಲಾಳರಾಯನ ದುರ್ಗದ ಕೆಳಭಾಗದಲ್ಲಿ ಸದ್ದು: ಅರಣ್ಯ ಇಲಾಖೆಯಿಂದ ಪರಿಶೀಲನೆ
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆ ಸುರಿಯುತ್ತಿದ್ದು ಪ್ರವಾಹ ಪರಿಸ್ಥಿತಿಯುಂಟಾಗಿದೆ. ಭಾರೀ ಮಳೆ ಹಿನ್ನೆಲೆ ಬಲ್ಲಾಳರಾಯನದುರ್ಗದಲ್ಲಿ ಭೂಕುಸಿತದ ಸದ್ದು ಕೇಳಿ ಸ್ಥಳೀಯರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಬೆಳ್ತಂಗಡಿ((ಜು.17): ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಬಲ್ಲಾಳ ರಾಯನ ದುರ್ಗದ ಕೆಳಭಾಗದಲ್ಲಿ ಗುರುವಾರ ರಾತ್ರಿ 8ಗಂಟೆ ಸುಮಾರಿಗೆ ಕೇಳಿ ಬಂದ ಭಾರೀ ಸ್ಫೋಟದ ಸದ್ದು ಹಾಗೂ ಪರಿಸರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಈ ಘಟನೆಯಿಂದ ಸಮೀಪದ ಮಕ್ಕಿ, ಪರ್ಲ, ಎಲ್ಯರ ಕಂಡ, ದೈಪಿತ್ತಿಲು ಸಹಿತ ಇಲ್ಲಿನ 16 ಮನೆಗಳ ಜನರು ಆತಂಕಿತರಾಗಿದ್ದಾರೆ. ರಾತ್ರಿಯಿಡೀ ಭೂಕುಸಿತ, ಮಳೆಯ ಆತಂಕದಲ್ಲಿ ನಿದ್ದೆ ಮಾಡದೇ ಕಾಲ ಕಳೆದಿದ್ದಾರೆ..
ಈ ಪ್ರದೇಶಕ್ಕೆ ಬೆಳ್ತಂಗಡಿ (Beltangadi) ಅರಣ್ಯ ಇಲಾಖೆಯ (forest depertment) ವನ್ಯಜೀವಿ ವಲಯದ ಉಪ ವಲಯಾರಣ್ಯಾಧಿಕಾರಿ ರಂಜಿತ್, ಅರಣ್ಯ ರಕ್ಷಕ ರಾಜು, ಸಹಾಯಕರಾದ ಗೋಪಾಲ (Gopal) ಹಾಗೂ ಸತೀಶ್ ಶನಿವಾರ ಭೇಟಿ ನೀಡಿ ಸುತ್ತಮುತ್ತಲ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಶಿರಾಡಿ ಬಂದ್: ಸಾಲುಗಟ್ಟಿ ನಿಂತ ಸರಕು ವಾಹನಗಳು
ಗುರುವಾರ ರಾತ್ರಿ ಒಂದು ಬಾರಿ ಸದ್ದು ಕೇಳಿ ಬಂದಿದ್ದು, ಅದರ ಬಳಿಕ ಯಾವುದೇ ರೀತಿಯ ಸದ್ದು ಕೇಳಿ ಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಪರಿಸರದಲ್ಲಿರುವ ನದಿ, ಹಳ್ಳ, ತೊರೆಗಳಲ್ಲಿ ಯಾವುದೇ ರೀತಿಯ ಬೃಹತ್ ಗಾತ್ರದ ಕಲ್ಲು, ಬಂಡೆಗಳು ಕಂಡುಬಂದಿಲ್ಲ. ಸದ್ಯ ಮಾಮೂಲು ಸ್ಥಿತಿ ಮುಂದುವರಿದಿದ್ದರೂ ಸ್ಥಳೀಯ ಜನರಲ್ಲಿ ಭಯದ ವಾತಾವರಣ ಮುಂದುವರಿದಿದೆ.
ಕಲ್ಲು ಜಾರಿರುವ ಸಾಧ್ಯತೆ: ಮಳೆ ಹಾಗೂ ಮೇಲ್ಭಾಗದಿಂದ ರಭಸವಾಗಿ ನೀರು ಹರಿಯುವಾಗ ಬಲ್ಲಾಳ ರಾಯನ ದುರ್ಗದ ಭಾಗದಲ್ಲಿ ಕಲ್ಲು ಬಂಡೆ ಜಾರಿರುವ ಸಾಧ್ಯತೆ ಇದೆ. ಆದರೆ ಮೇಲ್ಬಾಗದಿಂದ ಹರಿದು ಬರುವ ನೀರು ಮಾಮೂಲು ಸ್ಥಿತಿಯಲ್ಲಿದ್ದು ಯಾವುದೇ ಬದಲಾವಣೆ ಇರುವುದಿಲ್ಲ. ಈ ಕಾರಣದಿಂದ ಪರಿಸರದ ಜನ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಅರಣ್ಯಾಧಿಕಾರಿಗಳ ತಂಡ ತಿಳಿಸಿದೆ. ಇದನ್ನೂ ಓದಿ: ಬೈಕಂಪಾಡಿ ತೀರದಲ್ಲಿ ಮನೆ ಸಮುದ್ರಪಾಲು, ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಪುನರ್ವಸತಿಗೆ ಸಿದ್ಧ: ಕುದುರೆಮುಖ ರಾಷ್ಟ್ರೀಯ ಉದ್ಯಾನ ಅಂಚಿನಲ್ಲಿ ಹಾಗೂ ಅರಣ್ಯ ಇಲಾಖೆಯ ವನ್ಯಜೀವಿ ವಲಯದ ತೀರ ಸಮೀಪ ಇರುವ ಈ 16 ಕುಟುಂಬಗಳು ಪುನರ್ವಸತಿ ಕಲ್ಪಿಸಿದರೆ ತೆರಳಲು ಸಿದ್ಧರಿದ್ದಾರೆ. ಪುನರ್ವಸತಿ ಬಗ್ಗೆ ಪ್ರದೇಶದ ಸಮೀಕ್ಷೆಯನ್ನು ಈ ಹಿಂದೆ ನಡೆಸಲಾಗಿದ್ದು, ಇನ್ನು ಅಂತಿಮ ಹಂತವನ್ನು ತಲುಪಿಲ್ಲ. ಸರ್ಕಾರದಿಂದ ಪರಿಹಾರವನ್ನು ಒದಗಿಸಿ, ಪುನರ್ವಸತಿ ಕಲ್ಪಿಸಿದರೆ ಇಲ್ಲಿಂದ ತೆರಳಲು ಸಿದ್ಧವಿರುವುದಾಗಿ ಕುಟುಂಬಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿವೆ.
ವೀಕ್ಷಣೆಗೆ ಮಳೆ ಅಡ್ಡಿ: ಶನಿವಾರ ಈ ಭಾಗ ಸೇರಿದಂತೆ ತಾಲೂಕಿನಲ್ಲಿ ಭಾರಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಉಂಟಾಗಿದೆ.. ಇಲ್ಲಿನ ಹಳ್ಳ, ನದಿ ಪ್ರದೇಶ ತುಂಬಿ ಹರಿಯುತ್ತಿದ್ದು, ಹೆಚ್ಚಿನ ವೀಕ್ಷಣೆಗೆ ಪ್ರವಾಸಿಗರಿಗೆ \ ಅಡ್ಡಿಯಾಗಿದೆ. ಮೇಲ್ಭಾಗದಿಂದ ರಭಸವಾಗಿ ಹರಿಯುವ ನೀರು, ಜಾರುವ ಕಲ್ಲು ಬಂಡೆಗಳು ಅಪಾಯಕಾರಿಯಾಗಿರುವ ಕಾರಣ ಬಲ್ಲಾಳರಾಯನ ದುರ್ಗದ ಭಾಗದಲ್ಲಿ ವೀಕ್ಷಣೆ ನಡೆಸಲು ಸಾಧ್ಯವಾಗಿಲ್ಲ. ದಿಡುಪೆ ಭಾಗದಿಂದ ಕಾಲ್ನಡಿಗೆ ಮೂಲಕ ಬೆಳಗ್ಗೆ 8 ಗಂಟೆಗೆ ಹೊರಟ ತಂಡ, ಸಂಜೆ 5ರ ಸುಮಾರಿಗೆ ಹಿಂದಿರುಗಿತು.