ಬೆಂಗಳೂರು [ನ.02]:  ಚಾಮರಾಜಪೇಟೆಯಲ್ಲಿರುವ ಬಿಬಿಎಂಪಿ ಮಾಜಿ ಸದಸ್ಯರೊಬ್ಬರ ಮನೆ ಆವರಣದಲ್ಲಿ ದುಷ್ಕರ್ಮಿಗಳು ಹಂದಿಯ ರುಂಡ ಎಸೆದು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಕಾಂಗ್ರೆಸ್‌ ಮುಖಂಡರೂ ಆದ ಶ್ರೀನಿವಾಸಮೂರ್ತಿ (67) ಅವರು ಚಾಮರಾಜಪೇಟೆ ಠಾಣೆಗೆ ದೂರು ನೀಡಿದ್ದಾರೆ. ನನ್ನ ಹತ್ಯೆಗೆ ರಾಜಕೀಯ ವೈರಿಗಳು ಈ ರೀತಿ ಮಾಟ ಮಾಡಿಸಿದ್ದಾರೆ ಎಂದು ದೂರು ನೀಡಿದ್ದು, ಮೌಢ್ಯ ಪ್ರತಿಬಂಧಕ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಾಮರಾಜಪೇಟೆಯ ಆರ್‌.ಸಿ.ಅಗ್ರಹಾರ ನಾಲ್ಕನೇ ಮುಖ್ಯರಸ್ತೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ ಮೂರ್ತಿ ಅವರ ನಿವಾಸ ಇದೆ. ನ.27ರಂದು ಶ್ರೀನಿವಾಸ ಅವರ ನಿವಾಸದ ಕಾಂಪೌಂಡ್‌ ಒಳಗಡೆ ಕಿಡಿಗೇಡಿಗಳು ಒಂದು ಕಪ್ಪು ಬಣದ ಕವರ್‌ ಎಸೆದಿದ್ದರು. ಎಂದಿನಂತೆ ಬೆಳಗ್ಗೆ 6.30ರ ಸುಮಾರಿಗೆ ಶ್ರೀನಿವಾಸ್‌ ಮೂರ್ತಿ ಅವರು ಹೊರಗೆ ಬಂದಿದ್ದರು. ಆವರಣದಲ್ಲಿ ಬಿದ್ದಿದ್ದ ಕಪ್ಪು ಬಣ್ಣದ ಕವರ್‌ ನೋಡಿದ್ದ ಶ್ರೀನಿವಾಸ ಅವರು ಅನುಮಾನದಿಂದ ಕವರ್‌ ತೆಗೆದು ನೋಡಿದ್ದಾರೆ. ಈ ವೇಳೆ ಕವರ್‌ನಲ್ಲಿ ಹಂದಿ ಮರಿಯ ಕತ್ತನ್ನು ಕತ್ತರಿಸಿ, ಅದಕ್ಕೆ ಅರಿಶಿಣ, ಕುಂಕುಮ, ನಿಂಬೆ ಹಣ್ಣು, ಕಡಲೆ ಪುರಿ ಹಾಕಿ ಮಾಟ ಮಂತ್ರ ಮಾಡಿ ಬಿಸಾಕಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನ್ನ ಹತ್ಯೆಗೆ ನನ್ನ ರಾಜಕೀಯ ವೈರಿಗಳು ಈ ರೀತಿ ಮಾಡಿದ್ದಾರೆ. ಮನೆ ಆವರಣದಲ್ಲಿ ಈ ರೀತಿ ಹಂದಿಯ ರುಂಡ ಎಸೆದು ಮಾಟ ಮಾಡಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಬಿ.ಟಿ.ಶ್ರೀನಿವಾಸ ಮೂರ್ತಿ ಅವರು ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಸ್ಥಳೀಯ ನಿವಾಸಿಗಳ ಸಿಸಿಟಿವಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ, ದೂರು ನೀಡುವ ಮುನ್ನವೇ ಶ್ರೀನಿವಾಸ್‌ ಮೂರ್ತಿ ಅವರ ಕುಟುಂಬಸ್ಥರು ಹಂದಿಯ ರುಂಡವನ್ನು ಎಸೆದು ಬಿಟ್ಟಿದ್ದಾರೆ. ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.