ಶಿರಾ (ಅ.20):  ಶಿರಾ ಉಪಚುನಾವಣೆಯಲ್ಲಿ ಈ ಬಾರಿ ಕಮಲ ಅರಳುವುದು ಶತಃಸಿದ್ಧ. ಇದಕ್ಕಾಗಿ ಪಕ್ಷದ ಮುಖಡರು, ಕಾರ್ಯಕರ್ತರು ಸಂಘಟಿತವಾಗಿ ಚುನಾವಣೆ ನಡೆಸುತ್ತಿದ್ದಾರೆ. ರಾಜ್ಯ ಮಟ್ಟದ ಹಾಗೂ ಸ್ಥಳೀಯ ಮಟ್ಟದ ಮುಖಂಡರು ಬೂತ್‌ಮಟ್ಟದ ಸಮಿತಿ ಮಾಡಿ ಪಕ್ಷ ಸಂಘಟಿಸಿದ್ದಾರೆ. ಇಡೀ ರಾಜ್ಯವೇ ಅಚ್ಚರಿಪಡುವಂತ ಫಲಿತಾಂಶ ಹೊರಹೊಮ್ಮಲಿದೆ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಅವರು ನಗರದ ಬುಕ್ಕಾಪಟ್ಟಣ ರಸ್ತೆಯಲ್ಲಿರುವ ಸೇವಾ ಸದನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ. ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲ್ಲುವುದು ಖಚಿತವಾಗಿದೆ. ಪಕ್ಷದ ಆಂತರಿಕ ವರದಿ, ಕೇಂದ್ರ ಮತ್ತು ರಾಜ್ಯದ ಪೊಲೀಸ್‌ ಇಲಾಖೆ ವರದಿಯು ಸಹ ಬಿಜೆಪಿ ಖಾತೆ ತೆರೆಯುವುದು ಖಚಿತ ಎಂಬ ಮಾಹಿತಿ ಬಂದಿದೆ ಎಂದು ತಿಳಿಸಿದರು.

ಆಪ್ತ ಸ್ನೇಹಿತನ ವಿರುದ್ಧವೇ ಬೈ ಎಲೆಕ್ಷನ್ ಅಖಾಡಕ್ಕಿಳಿದ ಮಾಜಿ ಸಿಎಂ ಪುತ್ರ

ಬಿಜೆಪಿ ಪಕ್ಷದ ಸಂಘಟಿತ ಗೆಲುವು ಖಚಿತ. ಬಿಜೆಪಿ ಒಮ್ಮೆ ಗೆದ್ದರೆ ಶಾಶ್ವತ ಕೋಟೆ ಕಟ್ಟುತ್ತಾರೆ ಎಂಬ ಭಯದಿಂದ ಕಾಂಗ್ರೆಸ್‌ ಪಕ್ಷ ಹತಾಶ ಸ್ಥಿತಿ ತಲುಪಿದೆ. ಆರ್‌.ಆರ್‌. ನಗರ ಮತ್ತು ಶಿರಾ ಎರಡರಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಸೋಲು ಕಟ್ಟಿಟ್ಟಬುತ್ತಿ. ಇದರ ಪರಿಣಾಮ ರಾಜಕೀಯ ದೃವೀಕರಣ ಪ್ರಾರಂಭವಾಗಿದೆ. ಕಾಂಗ್ರೆಸ್‌ನವರಿಗೆ ಜೆಡಿಎಸ್‌ ಗೆಲ್ಲುವುದು ಇಷ್ಟವಿಲ್ಲ. ಜೆಡಿಎಸ್‌ನವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಗೆಲ್ಲಬಾರದು ಎಂದು ಹೇಳಿದ್ದಾರೆ. ಇದರ ಪರಿಣಾಮ ಬಿಜೆಪಿ ಗೆಲುವು ಶತಃಸಿದ್ಧ ಎಂದರು.

ಕಾಡುಗೊಲ್ಲ ಸಮುದಾಯ ಎಸ್‌.ಟಿ. ಗೆ ಸೇರಿಸುವ ಹೋರಾಟ ಬಹಳ ದಿನಗಳಿಂದ ಇದೆ. ಈಗ ನಮ್ಮ ಸರಕಾರ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ತೆರೆದು, ಅಭಿವೃದ್ಧಿ ನಿಗಮದ ಮೂಲಕ ಸಮುದಾಯಕ್ಕೆ ನ್ಯಾಯ ಕೊಡಲಿಕ್ಕೆ ಹೊರಟಿದ್ದೇವೆ. ಎಲ್ಲೂ ಕೂಡ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ಜಾತಿ ತಂದಿಲ್ಲ. ರೈತರಿಗೆ ಕಿಸಾನ್‌ ಸಮ್ಮಾನ್‌ ಯೋಜನೆಯಿಂದ 6000 ಹಣ ಹಾಕಿದ್ದೇವೆ. ಜನಧನ್‌ ಖಾತೆಗೆ 1000 ಹಣ ಹಾಕಿದ್ದೇವೆ. ಯಾವುದೇ ಜಾತಿ ಕೇಳಿಲ್ಲ. 8 ತಿಂಗಳ ಕಾಲ ಉಚಿತ ರೇಷನ್‌ ಕೊಟ್ಟಿದ್ದೇವೆ. ಯಾವ ಜಾತಿ ಎಂದು ಕೇಳಿಲ್ಲ. ಹಾಲಿಗೆ ಸಬ್ಸೀಡಿ ಕೊಟ್ಟಿದ್ದೇವೆ, ಭೇಟಿ ಬಚಾವೋ, ಭೇಟಿ ಪಡಾವೋ ಇವ್ಯಾವಕ್ಕೂ ನಾವು ಜಾತಿ ಕೇಳಿಲ್ಲ. ನಮ್ಮ ಉದ್ದೇಶ ಎಲ್ಲರ ಅಭಿವೃದ್ಧಿ ಮಾತ್ರ.

ಕೊಟ್ಟಮಾತಿನಂತೆ ನಡೆಯುತ್ತೇವೆ:

ಮದಲೂರು ಕೆರೆಗೆ ನೀರು ಹರಿಸುವ ಸಂಬಂಧ ಚುನಾವಣೆ ಘೋಷಣೆಯಾಗುವ ಮುಂಚೆಯೇ ಮಾತು ಕೊಟ್ಟಿದ್ದೇವೆ ಅದರಂತೆ ನಡೆಸುತ್ತೇವೆ. ಕೆರೆ ತುಂಬಿಸುವುದರಲ್ಲಿ ಮೀನಮೇಷ ಎಣಿಸುವುದಿಲ್ಲ. ಆದ್ಯತೆ ಮೇಲೆ ಕೆಲಸ ಮಾಡುತ್ತೇವೆ. ಯಡಿಯೂರಪ್ಪನವರು ಕೊಟ್ಟಮಾತನ್ನು ನಡೆಸಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಬೇದಬಾವ ಮಾಡುವುದಿಲ್ಲ. ಕೊಟ್ಟಮಾತಿನಂತೆ ಮದಲೂರು ಕೆರೆಗೆ ಸರಕಾರದ ಮಟ್ಟದಲ್ಲಿ ಶಾಶ್ವತ ಪರಿಹಾರ ಒದಗಿಸುತ್ತೇವೆ ಎಂದರು.

ಪತ್ರಿಕಾಗೊಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‌ ಗೌಡ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್‌, ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಸಿ.ಮಾಲಿಮರಿಯಪ್ಪ, ಶಿರಾ ಅಭಿವೃದ್ಧಿ ಪ್ರಾಧಿ​ಕಾರದ ಸದಸ್ಯ ಮದನ್‌ ಭಾರಧ್ವಜ್‌, ಕೃಷ್ಣಮೂರ್ತಿ, ನಿರಂಜನ್‌, ಹನುಮಂತನಾಯ್ಕ ಇದ್ದರು.