'ರಾಮನಗರ : ಗ್ರಾಪಂ ಚುನಾವಣೆಯಿಂದ ಜೆಡಿಎಸ್-ಕಾಂಗ್ರೆಸ್ ಮುಕ್ತ '
ರಾಜ್ಯದಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ರಾಮನಗರದಲ್ಲಿ ಕೈ-ಜೆಡಿಎಸ್ ಚುನಾವಣೆಯಿಂದ ಮುಕ್ತವಾಗಲಿದೆ ಎನ್ನಲಾಗಿದೆ.
ರಾಮನಗರ (ಡಿ.02): ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ ಮೂಲಕ ಬಿಜೆಪಿ ಕುಟುಂಬ ಆಧಾರಿತ ಹಾಗೂ ದಬ್ಬಾಳಿಕೆ ರಾಜಕಾರಣಕ್ಕೆ ಇತಿಶ್ರೀ ಹಾಡಿ ಜೆಡಿಎಸ್ - ಕಾಂಗ್ರೆಸ್ ಮುಕ್ತ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಈವರೆಗೆ ಕುಟುಂಬದ ವ್ಯಕ್ತಿಯ ಸಬಲೀಕರಣಕ್ಕೆ ಮಾತ್ರ ಒತ್ತು ನೀಡುತ್ತಾ ಬಂದಿದೆ. ಬಿಜೆಪಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ನಾಯಕತ್ವ ಗುಣ ಬೆಳೆಸಿ ಪ್ರಗತಿಪರ ರಾಜಕಾರಣಕ್ಕೆ ಮುನ್ನುಡಿ ಬರೆಯಲಿದೆ. ಜಿಲ್ಲೆಯು ಆರೋಗ್ಯ, ಶಿಕ್ಷಣ, ನೀರಾವರಿ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿಯಲು ಹಾಗೂ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಲು ಜಿಲ್ಲೆಯ ನಾಯಕರು ಎನಿಸಿಕೊಂಡಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಜನಪ್ರತಿನಿಧಿಗಳು ಕಾರಣ ಎಂದು ಟೀಕಿಸಿದರು.
ಅಧಿಕಾರಿ ಅನುಭವಿಸಿದರೂ ಕನಿಷ್ಠ ಸೌಲಭ್ಯ ಕಲ್ಪಿಸಿಲ್ಲ: ರಾಮನಗರದ ನೆಲ ಎಷ್ಟೋ ನಾಯಕರಿಗೆ ರಾಜಕೀಯ ಪುನರ್ ಜನ್ಮ ನೀಡಿದೆ. ಅಲ್ಲದೆ ಮುಖ್ಯಮಂತ್ರಿಗಳನ್ನೂ ಕೊಡುಗೆಯಾಗಿ ನೀಡಿದೆ. ದಶಕಗಳಿಂದಲೂ ಅಧಿಕಾರ ಅನುಭವಿಸುತ್ತಾ ಬಂದಿರುವ ಕಾಂಗ್ರೆಸ್ - ಜೆಡಿಎಸ್ ನಾಯಕರು ಜಿಲ್ಲೆಯ ಜನರಿಗೆ ಕನಿಷ್ಠ ಸೌಲಭ್ಯ ಕಲ್ಪಿಸುವ ಪ್ರಯತ್ನವನ್ನೇ ಮಾಡಿಲ್ಲ ಎಂದು ದೂರಿದರು.
ವಿಶ್ವನಾಥ್‌ಗೆ ಸಚಿವ ಸ್ಥಾನ ವಿಚಾರ : ಸಾ.ರಾ ಮಹೇಶ್ ಹೊಸ ಬಾಂಬ್ ..
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಾತ್ಮ ಗಾಂಧೀಜಿ ಹಾಗೂ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದೆ. ಇದಕ್ಕಾಗಿಯೇ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಬಲೀಕರಣಗೊಳಿಸಲು ಒತ್ತು ನೀಡುತ್ತಿರುವುದೇ ಸಾಕ್ಷಿ ಎಂದರು.
ನರೇಗಾ, ಸ್ವಚ್ಛ ಭಾರತ್ ಮಿಷನ್ ಅನುಷ್ಠಾನ ಹಾಗೂ ಗ್ರಾಮದ ಆಸ್ತಿಗಳ ಗಣಕೀಕರಣ ಸೇರಿ ಪಂಚಾಯಿತಿ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಸಬಲೀಕರಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.
ಘೋಷಣೆಗಳಿಂದ ಉಪಯೋಗವಿಲ್ಲ: ಕಾಂಗ್ರೆಸ್ ಬರೀ ಘೋಷಣೆಗಳನ್ನು ಮಾಡುತ್ತಾ ಬಂದಿತ್ತು. ಅವುಗಳಲ್ಲಿ ಗರೀಬಿ ಹಠಾವೋ ಎನ್ನುವುದು ಕೂಡ ಒಂದು. ಇಂಥ ನೂರಾರು, ಸಾವಿರಾರು ಘೋಷಣೆಗಳನ್ನು ಕಾಂಗ್ರೆಸ್ ಮಾಡಿದೆಯಾದರೂ, ಸಿಕ್ಕಿರುವ ಫಲಿತಾಂಶ ಮಾತ್ರ ಶೂನ್ಯ ಎಂದು ಟೀಕಿಸಿದರು.
ಗರೀಬಿ ಹಠಾವೋ ಸೇರಿದಂತೆ ಯಾವುದೇ ಘೋಷಣೆಗಳ ಮೂಲಕ ಗ್ರಾಮಗಳಲ್ಲಿ ಬಡತನ ನಿರ್ಮೂಲನೆ ಆಗಲಿಲ್ಲ. ಎಪ್ಪತ್ತು ವರ್ಷಗಳಾದರೂ ಬಡತನ ಜೀವಂತವಾಗಿದೆ. ಮಾತಿನ ಬದಲಿಗೆ ರಚನಾತ್ಮಕವಾಗಿ ಕೆಲಸ ಮಾಡಿದರೆ ಗ್ರಾಮಗಳು ಉದ್ಧಾರವಾಗುತ್ತವೆ. ಆ ನಿಟ್ಟಿನಲ್ಲಿ ಬಿಜೆಪಿ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಮಾಡಲು ಯತ್ನಿಸುತ್ತಿದೆ. ಘೋಷಣೆ ಬದಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಬಿಜೆಪಿ ಪಂಚಸೂತ್ರಗಳನ್ನು ಅಳವಡಿಸಿಕೊಂಡು ಗ್ರಾಮ ಪಂಚಾಯಿತಿಯಿಂದ ಲೋಕಸಭಾ ಚುನಾವಣೆ ಎದುರಿಸುತ್ತಿದೆ. ಪಕ್ಷದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಬಿಜೆಪಿ ಬೆಂಬಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದರು