ದಾವಣಗೆರೆ(ಅ.13):  ಶಿರಾ, ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ಮುನಿರತ್ನ ಸೇರಿದಂತೆ 17 ಜನ ಶಾಸಕರು ರಾಜಿನಾಮೆ ನೀಡಿದ್ದರಿಂದಲೇ ನಾವು ಇಂದು ಮಂತ್ರಿಗಳಾಗಿದ್ದೇವೆ, ಬಿಜೆಪಿ ಸರ್ಕಾರವೂ ಅಧಿಕಾರಕ್ಕೆ ಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಬಿಜೆಪಿ ಟಿಕೆಟ್‌ ಕೊಡುತ್ತೇವೆಂದರೂ ಡಿಪಾಜಿಟ್‌ ಸಹ ಕಳೆದುಕೊಳ್ಳುತ್ತೇವೆ, ನಿಮ್ಮ ಸಹವಾಸವೇ ಬೇಡವೆಂದು ಓಡಿಹೋಗುತ್ತಿದ್ದರು. ಈಗ ಚುನಾವಣೆಯೆಂದರೆ ಬಿಜೆಪಿ ಗೆಲುವು ಎಂಬುದಾಗಿ ಟಿಕೆಟ್‌ ಅಪೇಕ್ಷಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದರು.

 ಬಿಜೆಪಿ ಚಿಹ್ನೆಯ ಮೇಲೆಯೇ ಗೆಲ್ಲುತ್ತೇವೆ. ನಮಗೆ ವ್ಯಕ್ತಿ ಮುಖ್ಯವಲ್ಲ. ಪಕ್ಷದ ಚಿಹ್ನೆ ಮುಖ್ಯ ಎಂದು ಅವರು ಹೇಳಿದರು.

ಮುನಿರತ್ನಗೆ ಬಿಗ್ ರಿಲೀಫ್, ಮುನಿರಾಜು ಗೌಡ ಅರ್ಜಿ ವಜಾ!

ಬಿಜೆಪಿ ಅಭ್ಯರ್ಥಿ ಅಂದ ಮೇಲೆ ಮೂಲ ಬಿಜೆಪಿ, ವಲಸಿಗ ಬಿಜೆಪಿಯೆಂಬ ಪ್ರಶ್ನೆಯೇ ಇಲ್ಲ. ವೈಚಾರಿಕ, ಸೈದ್ಧಾಂತಿಕವಾಗಿ ನಮ್ಮ ಪಕ್ಷವನ್ನು ಒಪ್ಪಿ ಬಂದವರೆಲ್ಲರೂ ಬಿಜೆಪಿ ಕಾರ್ಯಕರ್ತರೇ ಆಗಿರುತ್ತಾರೆ.   ಮುನಿರತ್ನ ಸೇರಿದಂತೆ 17 ಜನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಬಿಜೆಪಿಗೆ ಬಂದರು. ಆ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು. ಉಳಿದ ಸಚಿವ ಸ್ಥಾನಗಳನ್ನು ಇತರರಿಗೆ ಹಂಚಬೇಕು. ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಗೂ ಸಚಿವ ಸ್ಥಾನ ಸಿಗಬಹುದು. ಅಲ್ಲಿವರೆಗೆ ಕಾಯಬೇಕಷ್ಟೇ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಖಾತೆ ಬದಲು ಕ್ರಮಕ್ಕೆ ಸಮರ್ಥನೆ:

ಆಡಳಿತಾತ್ಮಕ ದೃಷ್ಟಿಯಿಂದ ಯಾವುದೇ ಸೂಕ್ತವೋ, ಒಳ್ಳೆಯದು ಅನಿಸುತ್ತದೋ ಅದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡುತ್ತಾರೆ. ಕೊರೋನಾ ವೈರಸ್‌ ಅನೇಕ ಜಿಲ್ಲೆಯಲ್ಲಿ ವ್ಯಾಪಿಸುತ್ತಿದೆ, ಮತ್ತೆ ಕೆಲ ಜಿಲ್ಲೆಗಳಲ್ಲಿ ಕಡಿಮೆಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಖಾತೆಗಳು ಒಬ್ಬರ ಬಳಿಯೇ ಇರಲೆಂದು ಡಾ.ಸುಧಾಕರ್‌ಗೆ ಖಾತೆ ನೀಡಿ, ಅತ್ಯಂತ ದೊಡ್ಡ ಇಲಾಖೆಯಾದ ಸಮಾಜ ಕಲ್ಯಾಣ ಖಾತೆಯ ಹೊಣೆಯನ್ನು ಶ್ರೀರಾಮುಲು ಅವರಿಗೆ ನೀಡಿರಬಹುದು. ಅನೇಕ ದಶಕದಿಂದಲೂ ಸಾಮಾಜಿಕ ನ್ಯಾಯ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಶ್ರೀರಾಮುಲು ಆ ಕೆಲಸ ಮಾಡುವ ವಿಶ್ವಾಸದಿಂದ ಸಮಾಜ ಕಲ್ಯಾಣ ಸಚಿವ ಸ್ಥಾನ ನೀಡಿ, ಸಿಎಂ ಕ್ರಮ ಕೈಗೊಂಡಿದ್ದಾರೆ ಎಂದು ಖಾತೆ ಬದಲಾವಣೆ ಕ್ರಮವನ್ನು ಅವರು ಸಮರ್ಥಿಸಿಕೊಂಡರು.