ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಮಾಡಲಿದ್ದು,ಆಡಳಿತದ ಚುಕ್ಕಾಣಿ ಬಿಜೆಪಿ ಪಾಲಾಗುವುದು ಶತಸಿದ್ಧ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿಕೆ

 ಬೆಳಗಾವಿ (ಸೆ.04):  ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಮಾಡಲಿದ್ದು,ಆಡಳಿತದ ಚುಕ್ಕಾಣಿ ಬಿಜೆಪಿ ಪಾಲಾಗುವುದು ಶತಸಿದ್ಧ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿದರು.

ನಗರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಮತಚಲಾಯಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಿಶ್ಚಿತವಾಗಿ ಬಿಜೆಪಿಯ 45 ಪ್ಲಸ್‌ ಮಿಷನ್‌ ಕಾರ್ಯರೂಪಕ್ಕೆ ಬರುತ್ತದೆ. ನಿಶ್ಚಿತವಾಗಿ ಜನ ಬಿಜೆಪಿ ಕೈ ಹಿಡಿಯುತ್ತಾರೆ. ಬಿಜೆಪಿಯವರೇ ಮೇಯರ್‌ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ಪಾಲಿಕೆಗೆ ಈ ಹಿಂದೆ ಪಕ್ಷದ ಆಧಾರದ ಮೇಲೆ ಚುನಾವಣೆ ನಡೆದಿರಲಿಲ್ಲ. ಪಕ್ಷೇತರರಾಗಿ ಆಯ್ಕೆಯಾಗಿ ಆಯಾ ರಾಮ್‌ ಗಯಾ ರಾಮ್‌ ರೀತಿ ಮಾಡುತ್ತಿದ್ದರು. ಬಿಜೆಪಿ ಚಿಹ್ನೆ ಮೇಲೆ ಸ್ಪರ್ಧಿಸಿರುವುದರಿಂದ ಎಂಇಎಸ್‌ ಅಷ್ಟೇ ಅಲ್ಲದೇ ಎಲ್ಲ ರಾಜಕೀಯ ಪಕ್ಷಗಳಿಗೂ ನಡುಕ ಸೃಷ್ಟಿಯಾಗಿದೆ ಎಂದರು.

ಕುತೂಹಲದ ಫಲಿತಾಂಶ : ಯಾರಪಾಲಿಗೆ ಬೆಳಗಾವಿ ಗದ್ದುಗೆ?

ಬಿಜೆಪಿಗೆ ಬದ್ಧತೆ ಇರುವುದರಿಂದ ಎಲ್ಲ ರಾಜಕೀಯ ಪಕ್ಷಗಳಿಗೆ ನಡುಕ ಸೃಷ್ಟಿಯಾಗಿದೆ. ಸೆ. 6ರಂದು ಫಲಿತಾಂಶ ಬಂದ ಬಳಿಕ ಗೊತ್ತಾಗುತ್ತದೆ. ಸುಳ್ಳು ಆಶ್ವಾಸನೆಗಳಿಗೆ ಪೂರ್ಣವಿರಾಮ ಕೊಡುವ ಚುನಾವಣೆ ಇದಾಗುತ್ತದೆ ಎಂದರು.

ಬಿಜೆಪಿಯ ಮಿಷನ್‌ 45 ಹೇಳಿದ್ದು, ಮಿಷನ್‌ 4 ಸಹ ಆಗುವುದಿಲ್ಲ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾಲ್ಕು ಹೇಳಿದ್ದಾರಲ್ಲ. ಆರನೇ ತಾರೀಖು ಜನ ಉತ್ತರ ಕೊಡುತ್ತಾರೆ. ಹಿಂದೆ ಬೆಳಗಾವಿ ಪಾಲಿಕೆಯಲ್ಲಿ ನಡೆಯುತ್ತಿದ್ದ ಆಯಾರಾಮ್‌ ಗಯಾರಾಮ್‌ ಸಂಸ್ಕೃತಿಗೆ ಈ ಚುನಾವಣೆ ತಿಲಾಂಜಲಿ ಹೇಳಲಿದೆ. ಪಕ್ಷ ಆಧಾರಿತ ಚುನಾವಣೆ ಆರಂಭಿಸಿದ ಹೊಸ ಶಕೆ ಮಾಡಿದ ಹೆಗ್ಗಳಿಕೆ ಬಿಜೆಪಿಗೆಯಿದೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಹೊಸ ದಿಕ್ಕು ನೀಡಿದೆ ಎಂದರು.

ಇದೇ ವೇಳೆ ಶಾಸಕ ಅಭಯ ಪಾಟೀಲ ಅವರ ಪತ್ನಿ ಪ್ರೀತಿ ಪಾಟೀಲ ಮಾತನಾಡಿ, ಅಭಯ ಪಾಟೀಲ ಅವರ ಶ್ರಮಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ. ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು