Asianet Suvarna News Asianet Suvarna News

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಗೇ ಅಧಿಕಾರ : ಅರುಣ್‌ಸಿಂಗ್‌

ಕೇಂದ್ರ ಮತ್ತು ರಾಜ್ಯದ ಡಬಲ್‌ ಎಂಜಿನ್‌ ಸರ್ಕಾರದ ಬಗ್ಗೆ ಹಾಗೂ ಡಬಲ್‌ ವೇಗದ ಅಭಿವೃದ್ಧಿ ಬಗ್ಗೆ ರಾಜ್ಯದ ಜನತೆಗೆ ನಂಬಿಕೆ ಇದ್ದು ಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗೆದ್ದು ಮತ್ತೊಮ್ಮೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.

BJP will get power again in the state Arun Singh  snr
Author
First Published Jan 22, 2023, 6:18 AM IST

  ಚಿಕ್ಕಬಳ್ಳಾಪುರ :  ಕೇಂದ್ರ ಮತ್ತು ರಾಜ್ಯದ ಡಬಲ್‌ ಎಂಜಿನ್‌ ಸರ್ಕಾರದ ಬಗ್ಗೆ ಹಾಗೂ ಡಬಲ್‌ ವೇಗದ ಅಭಿವೃದ್ಧಿ ಬಗ್ಗೆ ರಾಜ್ಯದ ಜನತೆಗೆ ನಂಬಿಕೆ ಇದ್ದು ಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗೆದ್ದು ಮತ್ತೊಮ್ಮೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ಶನಿವಾರ ಬೂತ್‌ ವಿಜಯ ಸಂಕಲ್ಪ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಏನು ಮಾಡಿದೆ. ಬಿಜೆಪಿ ಬಳಿ ಕಾರ್ಯಕರ್ತರ ಸೈನ್ಯವಿದೆ. ಆದರೆ ಕಾಂಗ್ರೆಸ್‌ನಲ್ಲಿ ನಾಯಕರೂ ಇಲ್ಲ, ಕಾರ್ಯಕರ್ತರೂ ಇಲ್ಲ ಎಂದು ಗೇಲಿ ಮಾಡಿದರು.

ಕಾಂಗ್ರೆಸ್‌ ವಿರುದ್ಧ ಸಿಂಗ್‌ ಕಿಡಿ

ರಾಜ್ಯದಲ್ಲಿ ಚುನಾವಣೆಯ ಬಳಿಕ ಕಾಂಗ್ರೆಸ್‌ 130-140 ಸೀಟು ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತದೆ ಅನ್ನುವುದು ಬರೀ ಹಗಲು ಕನಸು ಮಾತ್ರ. ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಅನ್ನುವ ಬಗ್ಗೆ ರಾಜ್ಯದ ಜನರಿಗೆ ಜನರಿಗೆ ಅರಿವಿದೆ. ಕಾಂಗ್ರೆಸ್‌ ಆಡಳಿತದ ಸಮಯದಲ್ಲಿ ಪಿಎಫ್‌ಐ ಸಂಘಟನೆಯ ಸಂಪರ್ಕ ಬೆಳೆಸಿದ್ದು ದೊಡ್ಡ ಸಾಧನೆ. 32 ಹಿಂದೂಗಳನ್ನು ಕೊಲೆ ಮಾಡಲಾಗಿತ್ತು. ಹಲವು ಭ್ರಷ್ಟಾಚಾರಗಳನ್ನು ಮಾಡಿದ್ದೇ ದೊಡ್ಡ ಸಾಧನೆ ಎಂದು ಅವರು ಕಿಡಿಕಾರಿದರು.

ಅಧಿಕಾರಕಾರದಲ್ಲಿದ್ದಾಗ ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ಮುಳಗಿ ಕಾಲಹರಣ ಮಾಡಿದ್ದೇ ದೊಡ್ಡ ಸಾಧನೆ. ಕೇವಲ ಚಿಕ್ಕಬಳ್ಳಾಪುರ ಒಂದು ಜಿಲ್ಲೆಗೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಅನ್ನುವ ಬಗ್ಗೆ ಮಾತನಾಡಲಿ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ಒಂದು ಜಿಲ್ಲೆಯಲ್ಲೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಆದ್ದರಿಂದ ರಾಜ್ಯದ ಜನತೆಗೆ ಡಬಲ್‌ ಎಂಜಿನ್‌ ಸರ್ಕಾರದ ಅಗತ್ಯತೆ ಮತ್ತು ಅಭಿವೃದ್ಧಿ ಕೆಲಸಗಳ ವೇಗದ ಬಗ್ಗೆ ನಂಬಿಕೆ ಇದೆ. ಪ್ರಧಾನಿ ನರೇಂದ್ರ ಮೋದಿ ನಾಯತಕತ್ವ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಅರುಣ್‌ ಸಿಂಗ್‌ ತಿಳಿಸಿದರು.

ಜಿಲ್ಲೆಗೆ ಸಚಿವ ಡಾ.ಸುಧಾಕರ್‌ ಕೊಡುಗೆ

ಸಿದ್ದರಾಮಯ್ಯ ಅಧಿಕಾರ ಮಾಡುತ್ತಿದ್ದಾಗ ಮತ್ತು ಯುಪಿಎ ಅಧಿಕಾರದಲ್ಲಿದ್ದಾಗ ಜನರಿಗೆ ಕುಡಿಯಲು ನೀರು ಕೂಡ ಕೊಡುತ್ತಿರಲಿಲ್ಲ. ಆದರೆ ಜಲಜೀವನ್‌ ಮಿಷನ್‌ ಯೋಜನೆ ಮೂಲಕ ಚಿಕ್ಕಬಳ್ಳಾಪುರದಲ್ಲಿ 54,866 ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳೀಯ ಶಾಸಕ ಸುಧಾಕರ್‌ ಈ ಎಲ್ಲಾ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಶ್ರಮಿಸಿದ್ದಾರೆ. ಮೆಡಿಕಲ್‌ ಕಾಲೇಜು ಹಿಂದೆ ಆಡಳಿತ ಮಾಡಿದ ಸರ್ಕಾರಗಳು ಈ ಜಿಲ್ಲೆಗೆ ಕೊಟ್ಟಿರಲಿಲ್ಲ. ಆದರೆ ಶಾಸಕ ಸುಧಾಕರ್‌ ಅವರು ಸತತ ಪ್ರಯತ್ನ ಮಾಡಿ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮೂಲಕ ಇಲ್ಲಿಗೆ ಮೆಡಿಕಲ್‌ ಕಾಲೇಜು ಮಂಜೂರು ಮಾಡಿಸಿದ್ದರು. ಅದರ ಕಟ್ಟಡ ಕೂಡ ಸಿದ್ಧವಾಗಿದೆ. ಕೆಲವೇ ದಿನಗಳಲ್ಲಿ ಇದರ ಉದ್ಘಾಟನೆಯೂ ನಡೆಯುಲಿದೆ. ಕೋವಿಡ್‌ ಸಮಯದಲ್ಲಿ ಉಚಿತ ಪಡಿತರ ವಿತರಿಸಿ ಬಡವರ ಸಂಕಷ್ಟದ ಕಾಲದಲ್ಲಿ ಸರ್ಕಾರ ಮಿಡಿದಿದೆ ಎಂದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌,ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಬಿಎಂಟಿಸಿ ಉಪಾಧ್ಯಕ್ಷ ನವೀನ್‌ ಕಿರಣ್‌, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌ ಸೇರಿದಂತೆ ಮತ್ತಿತರರು ಇದ್ದರು.

ನಮಗೆ ಹೇಳಿಕೊಳ್ಳಲು ನಮ್ಮ ಸರ್ಕಾರದ ಸಾಧನೆ ಇದೆ. ನಮ್ಮಲ್ಲಿ ನಾಯಕರು ಇದ್ದಾರೆ. ಹೇಳಿ ಕೊಳ್ಳಲು ನಾವು ಮಾಡಿದ ಕೆಲಸವಿದೆ. ಕಾರ್ಯಕರ್ತರ ಸೈನ್ಯವಿದೆ. ಈ ಮೂಲಕ 150 ಸೀಟುಗಳನ್ನು ಗೆಲ್ಲುವುದು ಖಚಿತ. ಕಾಂಗ್ರೆಸ್‌ ಬಳಿ ನಾಯಕರೂ ಇಲ್ಲ. ಕೆಲಸವೂ ಇಲ್ಲ. ಹೀಗಾಗಿ ರಾಜ್ಯದಲ್ಲಿ ಅವರು ಸೋಲುವುದು ಖಚಿತ.

ಅರುಣ್‌ಸಿಂಗ್‌, ಬಿಜೆಪಿ ರಾಜ್ಯ ಉಸ್ತುವಾರಿ.

Follow Us:
Download App:
  • android
  • ios