ಮಂಗಳೂರು(ಮೇ.08): ಹೂವಿನ ಬೆಳೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ಟರ್‌ನಲ್ಲಿ ನೀಡಿದ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಿದ್ದರಾಮಯ್ಯ ಅವರು ಹೂವಿನಲ್ಲಿ ಚಿನ್ನ ತೆಗೆಯುವರು ಎಂದಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಮಂತ್ರಿಯಾಗಿ ಹಲವು ಬಾರಿ ಬಜೆಟ್‌ ಮಂಡನೆ ಮಾಡಿದವರು. ಒಬ್ಬ ರೈತ ಹೂವನ್ನು ಬೆಳೆಯಲು ಎಷ್ಟು ಖರ್ಚು ಮಾಡುತ್ತಾನೆ ಎಂಬ ಸಾಮಾನ್ಯ ಜ್ಞಾನವೂ ಅವರಿಗೆ ಇಲ್ಲ. ರೈತರು ಹೂವಿನ ಬೆಳೆ ಬೆಳೆಯಲು ಎಕರೆಗೆ 50 ಲಕ್ಷ ರು. ಖರ್ಚು ಮಾಡುತ್ತಾರೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ್ದಾರೆ.

ಹೊರರಾಜ್ಯಗಳಿಂದ ದ.ಕ. ಜಿಲ್ಲೆಗೆ ಆಗಮಿಸುವವರಿಗೆ ಎರಡು ಚೆಕ್‌ಪೋಸ್ಟ್ ಓಪನ್

ರಾಷ್ಟ್ರೀಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಲೂಗಡ್ಡೆಯಲ್ಲಿ ಚಿನ್ನ ತೆಗೆಯುವ ಹೇಳಿಕೆ ನೀಡಿದಂತೆ ಸಿದ್ದರಾಮಯ್ಯನವರು ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಿದ್ದಾರೆ ಎಂದು ನಳಿನ್‌ ಕುಮಾರ್‌ ವ್ಯಂಗ್ಯವಾಡಿದ್ದಾರೆ. ಕೊರೋನಾ ಭೀತಿ ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ನಾಡಿನ ಜನರ ರೈತರ ಕಣ್ಣಿರು ಒರೆಸುವ ಕೆಲಸ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ. ಅವರ ಕಾಲದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು, ಆಗ ಯಾಕೆ ಕೃಷಿಕರಿಗೆ ಯೋಜನೆ ಘೋಷಣೆ ಮಾಡಿಲ್ಲ ಎಂದು ಪ್ರಶ್ನಿಸಿದ ನಳಿನ್‌ ಕುಮಾರ್‌, ಯಡಿಯೂರಪ್ಪ ನೀಡಿರುವ ಯೋಜನೆ ಅತ್ಯುತ್ತಮವಾಗಿದ್ದು, ಅದನ್ನು ಸ್ವಾಗತಿಸುವುದನ್ನು ಬಿಟ್ಟು ಕ್ಷುಲ್ಲಕ ರಾಜಕಾರಣ ನಡೆಸುವುದು ಸರಿಯಲ್ಲ ಎಂದಿದ್ದಾರೆ.