ಬೆಳಗಾವಿ(ಸೆ.30): ರಾಜ್ಯ ಸೇರಿದಂತೆ ದೇಶದಲ್ಲಿ ಕಾಂಗ್ರೆಸ್‌ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ರೈತರನ್ನು ಎತ್ತಿಕಟ್ಟಿ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್‌ ಕಾಂಗ್ರೆಸ್‌ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸಿಎಎ ಕಾಯ್ದೆ ತಂದಾಗಲೂ ಇದೇ ರೀತಿ ಗಲಾಟೆ ಮಾಡಲು ಪ್ರಾರಂಭ ಮಾಡಿದ್ದರು. ಅವರ ಅಧಿಕಾರ ಇಲ್ಲದಿದ್ದಾಗ ಬೆಂಕಿ ಹಾಕುವುದೇ ಕೆಲಸ. ಕಾಂಗ್ರೆಸ್‌ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಶಾಸಕನಿಂದ ಕೋಟಿಗಟ್ಟಲೇ ಅನುದಾನ ಲೂಟಿ..?

ರಾಷ್ಟ್ರದಲ್ಲಿ ಕಾಂಗ್ರೆಸ್‌ ಜನವಿರೋಧಿ ನೀತಿಯಲ್ಲಿ ಕೆಲಸ ಮಾಡುತ್ತಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವುದನ್ನು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿಯೇ ಘೋಷಿಸಿತ್ತು. ಈಗ ಅವರೇ ವಿರೋಧಿಸುತ್ತಿದ್ದಾರೆ ಎಂದು ಕುಟುಕಿದರು.

ಸಿದ್ದರಾಯ್ಯನವರು ಓರ್ವ ಮಾಜಿ ಮುಖ್ಯಮಂತ್ರಿ. ಆದ್ದರಿಂದ ಸಿಎಂ ಬಿ.ಎಸ್‌.ಯಡಿಯೂರಪ್ಪನವರ ಬಗ್ಗೆ ಗೌರವವಾಗಿ ನಡೆದುಕೊಳ್ಳಬೇಕು. ಇವರ ಯೋಗ್ಯತೆ ಏನಿದೆ ಅಂತಾ ಗೊತ್ತು. ಇವರು ಅಧಿಕಾರದಲ್ಲಿದ್ದಾಗ ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ರಾಜ್ಯದಲ್ಲಿ ಹತ್ತಾರು ಹಂತಕರನ್ನು ಕಂಡಿದ್ದೇವೆ. ನೂರಾರು ಹಿಂದುಗಳ ಹತ್ಯೆ ಮಾಡಿಸಿದರು. ವೀರಶೈವ ಲಿಂಗಾಯತ ಸಮಾಜವನ್ನು ಒಡೆದರು. ಟಿಪ್ಪು ಜಯಂತಿ ಮಾಡಿಸಿ ಹಿಂದು ಮುಸ್ಲಿಮರ ನಡುವೆ ಬೆಂಕಿ ಹಚ್ಚಿದರು. ಅಧಿಕಾರ ಉಳಿಸಿಕೊಳ್ಳಲು ಬ್ರಿಟಿಷರಿಗಿಂತ ಕೆಟ್ಟದಾಗಿ ಸಮಾಜ ಒಡೆದವರು. ಸಿದ್ದರಾಮಯ್ಯರಂತಹ ಮುಖ್ಯಮಂತ್ರಿ ಬೇಡ ಎಂದು ಜನರೇ ತಿರಸ್ಕರಿಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.