ಕಾಗವಾಡ(ನ.28): ಉಪಚುನಾವಣೆ ಮುಗಿದ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಿರುದ್ಯೋಗಿಗಳಾಗಲಿದ್ದಾರೆ. ಕಾಂಗ್ರೆಸ್‌ ಮನೆ ಸಂಪೂರ್ಣ ಖಾಲಿಯಾಗಲಿದ್ದು, ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಮಾತ್ರ ಕಾಂಗ್ರೆಸ್‌ ಪಕ್ಷದಲ್ಲಿ ಉಳಿಯಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರು ವ್ಯಂಗ್ಯವಾಡಿದ್ದಾರೆ.

ಶೇಡಬಾಳ ಪಟ್ಟಣದಲ್ಲಿ ಬುಧವಾರ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರವನ್ನು 17 ಜನ ಶಾಸಕರು ಉರುಳಿಸಿದರು ಎಂದು 17 ಜನರನ್ನು ಅನರ್ಹಗೊಳಿಸಲಾಯಿತು. ಆದರೆ, ನಿಜವಾಗಿಯೂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸಿದವರು ಈಗಿನ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಎಂದು ಆರೋಪಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳಾಗಿ ಕುಮಾರಸ್ವಾಮಿ 5 ತಿಂಗಳು ಆಗುವಷ್ಟರಲ್ಲಿ ಧರ್ಮಸ್ಥಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಿದ್ದರಾಮಯ್ಯ ಲೋಕಸಭೆಯ ಚುನಾವಣೆಯ ನಂತರ ಕುಮಾರಸ್ವಾಮಿ ಸರ್ಕಾರ ಬೀಳುತ್ತದೆ ಎಂದು ಹೇಳಿ ನಂತರ ಸರ್ಕಾರವನ್ನು ಅವರೇ ಬೀಳಿಸಿದರು. ಕಾರಣ ಶ್ರೀಮಂತ ಪಾಟೀಲರು ಅನರ್ಹರಲ್ಲ, 17 ಶಾಸಕರು ಅನರ್ಹರಲ್ಲ. ನಿಜವಾಗಿಯೂ ಸಿದ್ಧರಾಮಯ್ಯನವರೇ ಅನರ್ಹರು ಎಂದು ಕುಟುಕಿದರು.

ಮಂಗಸೂಳಿಯಿಂದ ಶೇಡಬಾಳದವರೆಗೆ 11 ಕಿಮೀ ಬೈಕ್‌ ರಾರ‍ಯಲಿಯಲ್ಲಿ ಸ್ವಪ್ರೇರಣೆಯಿಂದ ಭಾಗವಹಿಸಿದ ಸಾವಿರಾರು ಕಾರ್ಯಕರ್ತರನ್ನು ಕಂಡು ನಾನು ಪುಲಕಿತಗೊಂಡಿದ್ದೇನೆ. ಕಾಗವಾಡ ಕ್ಷೇತ್ರದ ಜನ ತಾವರೆ(ಕಮಲ)ಯನ್ನು ಮೆಚ್ಚಿದ್ದಾರೆ. ತಾವರೆಯನ್ನು ಅಪ್ಪಿದ್ದಾರೆ. ತಾವರೆಯನ್ನು ಅರಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಕರ್ನಾಟಕ ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಜಯಭೇರಿ ಭಾರಿಸಲಿದೆ ವಿಶ್ವಾಸ ವ್ಯಕ್ತಪಡಿಸಿದರು.

ಬೀದರ ಲೋಕಸಭಾ ಸದಸ್ಯ ಭಗವಂತ ಖುಭಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಸಂಜಯ ಪಾಟೀಲ, ಕುಡಚಿ ಶಾಸಕ ಪಿ. ರಾಜೀವ, ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಮೊದಲಾದ ಮುಖಂಡರು ಮಾತನಾಡಿದರು.

ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ಶಶಿಕಾಂತ ನಾಯಿಕ, ಮಂಡಲ ಅಧ್ಯಕ್ಷ ನಿಂಗಪ್ಪ ಖೋಕಲೆ, ಎಪಿಎಂಸಿ ಅಧ್ಯಕ್ಷ ರವೀಂದ್ರ ಪೂಜಾರಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಶೀತಲ ಪಾಟೀಲ, ಮಾಜಿ ಶಾಸಕಿ ಸೀಮಾ ಮಸುತಿ, ಭರತೇಶ ನರಸಗೌಡರ, ಅಭಿಜಿತ ಪಾಟೀಲ, ತಾಪಂ ಸದಸ್ಯ ಸಂಭಾಜಿ ಪಾಟೀಲ, ತಾಪಂ ಸದಸ್ಯ ಸುಧಾಕರ ಭಗತ, ಭರತೇಶ ನರಸಗೌಡರ, ಬಾಳಾಸಾಹೇಬ ಪಾಟೀಲ, ಸುಜಯ ಮಾಂಗುರೆ, ಸುಮತಿನಾಥ ಪಾಟೀಲ, ಬಾಬಾಸಾಬ ಗಣೆ, ಎಂ.ಎ.ಗಣೆ, ಶೀತಲ ಲಕ್ಕಪ್ಪಗೋಳ, ಸುಭಾಷ ಢಾಲೆ, ಶ್ರೀನಿವಾಸ ಕಾಂಬಳೆ, ರವಿ ಕಾಂಬಳೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕಾರ್ಯಕರ್ತರು, ಮುಖಂಡರು ಅಪಾರ ಸಂಖ್ಯೆಯಲ್ಲಿ ಇದ್ದರು.

ಶೇಡಬಾಳ ಪಟ್ಟಣದಲ್ಲಿ ಜರುಗಿದ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲರ ಚುನಾವಣಾ ಪ್ರಚಾರ ಸಭೆಯಲ್ಲಿ ಕರ್ನಾಟಕ ರಾಜ್ಯದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರು ಹಾಗೂ ಸಂಸದ ನಳೀನಕುಮಾರ ಕಟೀಲ್‌ ಮಾತನಾಡಿದರು.

ಸಿದ್ದರಾಮಯ್ಯ ಸರ್ಕಾರ ಕೊಟ್ಟಿದ್ದು ಆತ್ಮಹತ್ಯೆ ಭಾಗ್ಯ

ಸಿದ್ದರಾಮಯ್ಯ ಸರ್ಕಾರದಲ್ಲಿ ಅನೇಕ ಹಿಂದುಗಳ ಕಗ್ಗೊಲೆಯಾಗಿದೆ. ರೈತರ ಸಾವು, ಪ್ರಾಮಾಣಿಕ ಅಧಿಕಾರಿಗಳ ಕೊಲೆಯಾಗಿದೆ. ಸಿದ್ದರಾಮಯ್ಯ ಸರ್ಕಾರ ಆತ್ಮಹತ್ಯೆ ಭಾಗ್ಯ ಯೋಜನೆ ಕೊಟ್ಟಿದ್ದಾರೆ. ಸಮುದಾಯ ಒಡೆಯುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ವಾಗ್ದಾಳಿ ನಡೆಸಿದರು

ಬಿಜೆಪಿ ಬಗ್ಗೆ ಕಾಂಗ್ರೆಸ್‌ ಟೀಕೆ ಮಾಡುತ್ತದೆ. ಹೀಗಾಗಿ ಅದಕ್ಕೆ ಉತ್ತರ ಕೊಡಬೇಕಾಗುತ್ತದೆ. ಸಿದ್ದರಾಮಯ್ಯ ಕಾಂಗ್ರೆಸ್‌ ವಿಪಕ್ಷ ನಾಯಕರು. ಏಕಾಂಗಿಯಾಗಿ ಹೋರಾಟ ಮಾಡುತ್ತಾರೆ. ಹೀಗಾಗಿ ಅವರಿಗೆ ಟೀಕೆ ಮಾಡುತ್ತೇವೆ ಅಷ್ಟೇ. ನಾವು ರಾಜ್ಯದಲ್ಲಿ ಸಿದ್ದರಾಮಯ್ಯರನ್ನು ತೆಗಳಿ, ಟೀಕೆ ಮಾಡಿ ಮತ ಕೇಳುತ್ತಿಲ್ಲ. ರಾಜ್ಯದಲ್ಲಿ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು, ಅಭಿವೃದ್ಧಿ ಮುಂದಿಟ್ಟು ಮತ ಕೇಳುತ್ತೇವೆ ಎಂದರು.
ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಪತನ ವಿಚಾರವಾಗಿ ಇದು ಅಮಿತ್‌ ಶಾ ಮತ್ತು ಪ್ರಧಾನಿಗೆ ಕಪಾಳ ಮೋಕ್ಷ ಮಾಡಿದಂತೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ…, ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ. ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನದಲ್ಲೂ ಕುಳಿತುಕೊಳ್ಳುವ ಯೋಗ್ಯತೆ ಇಲ್ಲ. ಇದು ಯಾರಿಗೆ ಕಪಾಳ ಮೋಕ್ಷ? ರಾಹುಲ ಗಾಂಧಿಗೆ ಮಾಡಿದ್ದಾ? ಅಥವಾ ಸೋನಿಯಾ ಗಾಂಧಿಗೆ ಕಪಾಳ ಮೋಕ್ಷ ಮಾಡಿದ್ದಾ? ಅಂತಾ ಕಾಂಗ್ರೆಸ್‌ಗೆ ಪ್ರಶ್ನಿಸಿದರು.

ಸಮ್ಮಿಶ್ರ ಸರ್ಕಾರ ಹೋಯಿತು. ಹಾಗಾದರೆ ಇದು ಸಿದ್ದರಾಮಯ್ಯಗೆ ಕಪಾಳ ಮೋಕ್ಷ ಆಯ್ತಾ? ಗುಂಡೂರಾವ್‌ಗೆ ಕಪಾಳ ಮೋಕ್ಷ ಆಯ್ತಾ? ಇದು ಯಾರಿಗೆ ಕಪಾಳ ಮೋಕ್ಷ ಆಯ್ತು? ಎಂದು ಪ್ರಶ್ನಿಸಿದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.