ಬೆಂಗಳೂರು(ಫೆ.26): ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಜನರು ಸುರಿಸಿದ ಕಣ್ಣೀರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒರೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

ನಗರದ ಮರಾಠ ಹಾಸ್ಟೆಲ್‌ನಲ್ಲಿ ಮಂಗಳವಾರ ನಡೆದ ಬೆಂಗಳೂರು ದಕ್ಷಿಣ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಎನ್‌.ಆರ್‌.ರಮೇಶ್‌ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರು ಮತ್ತು ಮಹಿಳೆಯರು ಕಣ್ಣೀರು ಸುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಎಚ್‌.ಡಿ.ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ರಾಜ್ಯದ ಜನತೆ ಕಣ್ಣೀರು ಸುರಿಸಿದರು. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರ ಕಣ್ಣೀರನ್ನು ಒರೆಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಮಾತ್ರ ಇದ್ದು, 150 ವರ್ಷಗಳ ಇತಿಹಾಸ ಇರುವ ಪಕ್ಷದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಅಲ್ಲಿ ಕುಟುಂಬ ರಾಜಕಾರಣವೇ ಮುಂದುವರೆದಿದೆ. ರಾಜ್ಯದಲ್ಲಿಯೂ ಕೆಪಿಸಿಸಿ ಅಧ್ಯಕ್ಷರು ರಾಜೀನಾಮೆ ನೀಡಿ ಬಹಳ ದಿನಗಳಾದರೂ ಹೊಸದಾಗಿ ನೇಮಕ ಮಾಡಿಲ್ಲ. ಕಾಂಗ್ರೆಸ್‌ ಒಂದು ರೀತಿಯಲ್ಲಿ ನಾವಿಕನಿಲ್ಲದ ದೋಣಿಯಾಗಿದೆ. ಬಿಜೆಪಿಯಲ್ಲಿ ಪ್ರತಿ ಮೂರೂವರೆ ವರ್ಷಕ್ಕೊಮ್ಮೆ ಅಧ್ಯಕ್ಷರ ಬದಲಾವಣೆಯಾಗುತ್ತದೆ. ಕಾಂಗ್ರೆಸ್‌ನಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಾಕಿಸ್ತಾನ ಪರ ಘೋಷಣೆ ಮಾಡಿದ ಯುವತಿಯ ಪರ ಹೇಳಿಕೆ ನೀಡಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು, ಜೈಲಿನಲ್ಲಿ ಭಾರತದ ಇತಿಹಾಸ ಓದಿಲ್ಲ. ಬದಲಿಗೆ ಪಾಕಿಸ್ತಾನದ ಇತಿಹಾಸ ಓದಿರಬೇಕು. ಒಂದು ಕಾಲದಲ್ಲಿ ತಿಹಾರ್‌ ಜೈಲಿನಲ್ಲಿ ಕಸಬ್‌, ಅಫ್ಜಲ್‌ ಗುರು, ಚೋಟಾ ಶಕೀಲ್‌ನಂತಹವರ ಹೆಸರು ಕೂಗಲಾಗುತ್ತಿತ್ತು. ಆದರೆ, ಇತ್ತೀಚೆಗೆ ಅದೇ ಜೈಲಿನಲ್ಲಿ ಚಿದಂಬರಂ, ರಾಜಾ, ಡಿ.ಕೆ.ಶಿವಕುಮಾರ್‌ ಎಂದು ಕೂಗುತ್ತಿದ್ದಾರೆ. ಕಾಂಗ್ರೆಸ್‌ ದೆಹಲಿ ಚುನಾವಣೆಯಲ್ಲಿ ಠೇವಣಿ ಉಳಿಸಿಕೊಳ್ಳಲು ವಿಫಲವಾಗಿದೆ. ಜನತೆ ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದು, ಬಿಜೆಪಿಯನ್ನು ಪುರಸ್ಕರಿಸಿದೆ ಎಂದು ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಬೇಕು. ಜಿಲ್ಲಾ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರ ಚುಕ್ಕಣಿ ಹಿಡಿಯಬೇಕು. ಬೆಂಗಳೂರಿನಲ್ಲಿ ಬಿಜೆಪಿ ಇನ್ನೂ ಹೆಮ್ಮರವಾಗಿ ಬೆಳೆಯಬೇಕು. ಪಕ್ಷವನ್ನು ಸಂಘಟಿಸಿ ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಎನ್‌.ಆರ್‌.ರಮೇಶ್‌, ಮೂರು ವರ್ಷಗಳ ಅವಧಿಯಲ್ಲಿ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಾಗುವುದು. ರಾಜ್ಯದಲ್ಲಿಯೇ ಬೆಂಗಳೂರು ದಕ್ಷಿಣ ಜಿಲ್ಲೆಯು ಮುಂಚೂಣಿಯಲ್ಲಿರುವಂತೆ ಮಾಡಲಾಗುವುದು. ಪಕ್ಷದ ವರಿಷ್ಠರು ತಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಸದರಾದ ಪಿ.ಸಿ.ಮೋಹನ್‌, ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್‌ ರೆಡ್ಡಿ, ಉದಯ ಗರುಡಾಚಾರ್‌, ಮಾಜಿ ಶಾಸಕ ಮುನಿರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.