'ಮಾಜಿ ಸಚಿವ ರಾಯರಡ್ಡಿಗೆ ಬುದ್ಧಿ ಭ್ರಮಣೆಯಾಗಿದೆ'

*  ದನಕಾಯೋರು ಎಂಎಲ್‌ಎ, ಮಂತ್ರಿ ಆಗಿದ್ದಾರೆಂಬ ಹೇಳಿಕೆಗೆ ಆಕ್ಷೇಪ
*  ಹಾಲಪ್ಪ ಆಚಾರರ ಅಭಿವೃದ್ಧಿ ಸಹಿಸದೆ ಅನಾಗರಿಕ ಹೇಳಿಕೆ ನೀಡುತ್ತಿರುವ ರಾಯರಡ್ಡಿ
*  ರೈತರ ಮಕ್ಕಳನ್ನು ಅವಮಾನಿಸಿದ ಮಾಜಿ ಸಚಿವ 

BJP Spokesperson Veeranna Hubballi Slams Congress Leader Basavaraj Rayareddy grg

ಯಲಬುರ್ಗಾ(ಆ.25):  ದನ ಕಾಯೋರು ಎಂಎಲ್‌ಎ, ಎಂಪಿ, ಮಂತ್ರಿ ಆಗಿದ್ದಾರೆ. ಅಂತವರಿಗೆ ಕಾನೂನಿನ ಜ್ಞಾನವಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿರುವುದಕ್ಕೆ ತೀಕ್ಷ್ಣಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಅವರು ಅಧಿಕಾರ ಕಳೆದುಕೊಂಡು ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. 

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ತಾಲೂಕು ಬಿಜೆಪಿ ಮುಖಂಡರು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಇತ್ತೀಚೆಗೆ ಬಣಜಿಗ ಸಮಾಜದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ರೈತರ ಮಕ್ಕಳನ್ನು ಅವಮಾನಿಸಿದ್ದಾರೆ. ಹಾಗಾದರೆ ಇವರು ಕೂಡ ದನಕಾದು ಮಂತ್ರಿಯಾಗಿದ್ದಾರಾ? ಎಂದು ಪ್ರಶ್ನಿಸಿದರು.

ರಾಯರಡ್ಡಿಯವರ 30 ವರ್ಷಗಳ ದುರಾಡಳಿತಕ್ಕೆ ಬೇಸತ್ತು ಕ್ಷೇತ್ರದ ಜನತೆ ಸೋಲಿನ ರುಚಿ ತೋರಿಸಿದ್ದಾರೆ. ಇದರಿಂದ ಹತಾಶರಾಗಿ, ಸಚಿವ ಹಾಲಪ್ಪ ಆಚಾರರ ಅಭಿವೃದ್ಧಿ ಸಹಿಸದೆ ಇಂತಹ ಅನಾಗರಿಕ ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರವಿಲ್ಲದೆ ರಾಯರಡ್ಡಿವರಿಗೆ ಬುದ್ಧಿಭ್ರಮಣೆಯಾಗಿದ್ದು, ಯಾವುದಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾದರೆ ಅದರ ಸಂಪೂರ್ಣ ವೆಚ್ಚವನ್ನು ತಾಲೂಕು ಬಿಜೆಪಿ ಭರಿಸಲಿದೆ ಎಂದು ತಿರುಗೇಟು ನೀಡಿದರು.

'ಜನ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಗೆ ಬಿಜೆಪಿ ಸರ್ಕಾರದ ದುರಾಡಳಿತವೇ ಕಾರಣ'

ಬಿಜೆಪಿ ಹಿರಿಯ ಮುಖಂಡರಾದ ಬಸವಲಿಂಗಪ್ಪ ಭೂತೆ ಹಾಗೂ ಸಿ.ಎಚ್‌. ಪಾಟೀಲ ಮಾತನಾಡಿ, ಸಚಿವ ಹಾಲಪ್ಪ ಆಚಾರ ಶಾಸಕ, ಸಚಿವರಾದ ಮೇಲೆ ತಾಲೂಕಿನಲ್ಲಿ ಶಾಲಾ-ಕಾಲೇಜು, ಕೆರೆ, ಕಟ್ಟೆಗಳು, ರಸ್ತೆಗಳು ಪಿಜಿ ಸೆಂಟರ್‌ ಕಟ್ಟಡ, ಪಿಯು ಕಾಲೇಜು ಸೇರಿದಂತೆ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದೆ ರಾಯರಡ್ಡಿ ಮನಬಂದಂತೆ ಮಾತನಾಡುತ್ತಿರುವುದು ಗೌರವ ತರುವಂಥದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಕಳಕಪ್ಪ ಕಂಬಳಿ ಹಾಗೂ ಮಾರುತಿ ಗಾವರಾಳ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ರಾಯರಡ್ಡಿ ಹಾಡಿ ಹೊಗಳುತ್ತಿರುವುದಕ್ಕೆ ಕ್ಷೇತ್ರದ ಹಾಲುಮತ ಸಮಾಜದ ಓಟುಗಳನ್ನು ಪಡೆಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಶಿವನಗೌಡ ಬನ್ನಪ್ಪಗೌಡ್ರ, ರತನ್‌ ದೇಸಾಯಿ, ಶಿವಣ್ಣ ವಾದಿ, ಶರಣಪ್ಪ ಇಳಗೇರ, ಅಮರೇಶ ಹುಬ್ಬಳ್ಳಿ, ವಸಂತ ಭಾವಿಮನಿ, ಶಿವಕುಮಾರ ನಾಗಲಾಪುರಮಠ, ಸುರೇಶಗೌಡ ಶಿವನಗೌಡ, ಸಿದ್ದರಾಮೇಶ ಬೇಲೇರಿ, ಬಸನಗೌಡ ತೊಂಡಿಹಾಳ, ಸಂಗಪ್ಪ ಬಂಡಿ, ರಸೂಲಸಾಬ ಹಿರೇಮನಿ, ಕರಿಬಸಯ್ಯ ಬಿನ್ನಾಳ, ಸುರೇಶ ಹೊಸಳ್ಳಿ, ಕಳಕಪ್ಪ ತಳವಾರ, ಭಾಪುಗೌಡ ಪಾಟೀಲ, ಕಲ್ಲೇಶ ಕರಮುಡಿ ಮತ್ತಿತರರು ಇದ್ದರು.
 

Latest Videos
Follow Us:
Download App:
  • android
  • ios