Asianet Suvarna News Asianet Suvarna News

ವರ್ಣಾಶ್ರಮ ಜಾರಿಗೊಳಿಸುವುದು ಬಿಜೆಪಿ, ಆರ್‌ಎಸ್ಎಸ್ ಉದ್ದೇಶ: ದಿನೇಶ್ ಅಮೀನ್ ಮಟ್ಟು

ಅಂಬೇಡ್ಕರ್ ಸೇರಿದಂತೆ, ಸ್ವಾಮಿ ವಿವೇಕಾನಂದರು, ನಾರಾಯಣಗುರು, ರಾಮಕೃಷ್ಣ ಪರಮಹಂಸರು, ರಾಷ್ಟ್ರಕವಿ ಕುವೆಂಪು ಅವರು ಎಂದಿಗೂ ಹಿಂದೂ ವಿರೋಧಿಗಳಾಗಿರಲಿಲ್ಲ. ಆದರೇ, ಅವರನ್ನು ಅಲ್ಲಿನ ಪಟ್ಟಭದ್ರ ಹಿತಾಸಕ್ತಿಗಳು ಹಿಂದೂ ವಿರೋಧಿ ಎಂಬ ಪಟ್ಟ ಕಟ್ಟಿದರು: ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು 

BJP RSS Aim to Implement Varnashram Says Veteran Journalist Dinesh Amin Mattu grg
Author
First Published Dec 7, 2023, 1:54 PM IST

ಮೈಸೂರು(ಡಿ.07):  ಬಿಜೆಪಿ, ಸಂಘ ಪರಿವಾರದ ಹಿಂದೂ ರಾಷ್ಟ್ರದ ಕಲ್ಪನೆಯಲ್ಲಿ ರಾಮನ ಪೂಜೆ, ಮಂದಿರ ನಿರ್ಮಿಸುವುದು ಮಾತ್ರವಲ್ಲ, ದೇಶದ ಸಂವಿಧಾನ ದುರ್ಬಲಗೊಳಿಸಿ ವರ್ಣಾಶ್ರಮ ಪದ್ದತಿ ಜಾರಿಗೊಳಿಸುವುದೂ ಅವರ ಉದ್ದೇಶ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಾ.ಬಿ.ಆರ್. ಅಂಬೇಡ್ಕರ್ ಅವರ 67ನೇ ಪರಿನಿಬ್ಬಾಣ ದಿನದ ಅಂಗವಾಗಿ ಏರ್ಪಡಿಸಿದ್ದ ಹಿಂದೂ ರಾಷ್ಟ್ರ ಪರಿಕಲ್ಪನೆಯಲ್ಲಿ ಕೋಮುವಾದಿ ರಾಜಕಾರಣ- ಸಂಸದೀಯ ಪ್ರಜಾಪ್ರಭುತ್ವದ ಸವಾಲು ವಿಷಯ ಕುರಿತ ಜನ ಜಾಗೃತಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಭ್ರೂಣ ಪತ್ತೆ ಮತ್ತು ಹತ್ಯೆ ಬಗ್ಗೆ ಮಾಹಿತಿ ನೀಡಿದರೆ 50 ಸಾವಿರ ರೂ. ಬಹುಮಾನ

ವರ್ಣಾಶ್ರಮ ಪದ್ಧತಿ ಜಾರಿಗೊಳಿಸುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮನಸ್ಥಿತಿಯು ಹಿಂದೂ ರಾಷ್ಟ್ರ ನಿರ್ಮಾಣವೂ ಆಗಿರುವುದರಿಂದ ಅದು ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಎಂದು ಅವರು ಟೀಕಿಸಿದರು. ಅಂಬೇಡ್ಕರ್ ಸೇರಿದಂತೆ, ಸ್ವಾಮಿ ವಿವೇಕಾನಂದರು, ನಾರಾಯಣಗುರು, ರಾಮಕೃಷ್ಣ ಪರಮಹಂಸರು, ರಾಷ್ಟ್ರಕವಿ ಕುವೆಂಪು ಅವರು ಎಂದಿಗೂ ಹಿಂದೂ ವಿರೋಧಿಗಳಾಗಿರಲಿಲ್ಲ. ಆದರೇ, ಅವರನ್ನು ಅಲ್ಲಿನ ಪಟ್ಟಭದ್ರ ಹಿತಾಸಕ್ತಿಗಳು ಹಿಂದೂ ವಿರೋಧಿ ಎಂಬ ಪಟ್ಟ ಕಟ್ಟಿದರು ಎಂದು ಅವರು ಹೇಳಿದರು.

ದೇಶದಲ್ಲಿನ ಕೋಮುವಾದದ ರಾಜಕೀಯ ಅಪಾಯ ಜನತೆಗೆ ಅರ್ಥವಾಗಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ. 65ರಷ್ಟಿರುವ ಯುವ ಸಮೂಹವೂ ಕೋಮುವಾದಿಗಳ ಜತೆ ಗುರುತಿಸಿಕೊಂಡಿದ್ದಾರೆ. ಇದರಿಂದ ಒಂದು ಜಾತಿಗೆ ಅನುಕೂಲವಾದರೇ ಶೂದ್ರ, ಅಸ್ಪಶ್ಯ ಸಮುದಾಯಗಳ ಹಕ್ಕು ಕಸಿದುಕೊಳ್ಳಲಿವೆ ಎಂದು ಅವರು ಹೇಳಿದರು.

ಕೋಮುವಾದಿಗಳು ಅಂಬೇಡ್ಕರ್ ಅವರ ಸಮ ಸಮಾಜದ ಕನಸು ನುಚ್ಚುನೂರು ಮಾಡಲು ಅಂಬೇಡ್ಕರ್ಪರಿನಿಬ್ಬಾಣ ದಿನವನ್ನೇ ಆಯ್ಕೆ ಮಾಡಿಕೊಂಡರು. ಅವರು ನೂರು ರಾಮ ಮಂದಿರ ಕಟ್ಟಿದರೂ ನಮಗೆ ತಾಕರಾರಿಲ್ಲ. ಆದರೆ, ಮಸೀದಿಗಳನ್ನು ಒಡೆದು ಕಟ್ಟಬಾರದು. ಇದನ್ನು ದಲಿತ ಸಮುದಾಯ ಅರ್ಥ ಮಾಡಿಕೊಳ್ಳಬೇಕಿದೆ. ಕೋಮುವಾದಿಗಳ ಆಡಳಿತದಲ್ಲಿ ಸಂವಿಧಾನ ದುರ್ಬಲವಾಗುವುದರ ಜತೆಗೆ ಮೀಸಲಾತಿಗೂ ಪರೋಕ್ಷ ಅಪಾಯ ಎದುರಾಗಿದೆ ಎಂದರು.
ಕೇಂದ್ರ ಸರ್ಕಾರದ ಆಡಳಿತದಲ್ಲಿ ಮೀಸಲಾತಿ ತೆಗೆಯುತ್ತಿಲ್ಲ. ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ಎಲ್ಲವನ್ನೂ ಖಾಸಗೀಕರಣಗೊಳಿಸುತ್ತಿದ್ದಾರೆ. ಸರ್ಕಾರಿ ಸಂಸ್ಥೆಗಳಲ್ಲಿ ನಾವು ಮೀಸಲಾತಿ ಕೇಳಬಹುದು. ಆದರೇ, ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ಇರುವುದಿಲ್ಲ. ಇನ್ನು ಮುಂದೆ ನಮ್ಮ ಹೋರಾಟಗಳು ಖಾಸಗಿ ಕ್ಷೇತ್ರಗಳಲ್ಲೂ ಮೀಸಲಾತಿ ಕೇಳುವತ್ತ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.

ದೇಶದಲ್ಲಿ ಪ್ರತಿ 16 ನಿಮಿಷಕ್ಕೆ ಒಬ್ಬ ದಲಿತರ ಮೇಲೆ ದೌರ್ಜನ್ಯ, ಪ್ರತಿದಿನ ನಾಲ್ಕು ದಲಿತ ಮಹಿಳೆಯರ ಮೇಲೆ ಅತ್ಯಾಚಾರ, 6 ಪುರುಷರ ಕೊಲೆ ನಡೆಯುತ್ತಿವೆ. ಇಂತಹ ಘಟನೆಗಳು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಹೆಚ್ಚಾಗಿವೆ ಎಂಬುದು ಆತಂಕದ ವಿಷಯ. ಇಷ್ಟಾದರೂ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸುತ್ತಿದೆ. ಅವರಿಗೆ ದಲಿತ ಸಮುದಾಯದ ಮತ ಪಡೆಯಲು ತಡೆಯಾಗಿ ಅಂಬೇಡ್ಕರ್ ನಿಂತಿದ್ದಾರೆ. ಆದರೆ, ಹಿಂದುಳಿದ ವರ್ಗಗಳನ್ನು ಆಕರ್ಷಿಸುತ್ತಿರುವುದು ಈ ಸಮುದಾಯಗಳಿಗೆ ಅಪಾಯದ ಸಂಕೇತವಾಗಿದೆ ಎಂದು ಅವರು ಹೇಳಿದರು.

ಕಾರ್ಯಾಂಗವು ಶಾಸಕಾಂಗದ ಕೈಗೊಂಬೆಯಾದರೆ ಶಾಸಕಾಂಗ ಸಂಪೂರ್ಣ ದುರ್ಬಲವಾಗಿದೆ. ಇನ್ನು ನ್ಯಾಯಾಂಗದ ತೀರ್ಪುಗಳು ತಳ ಸಮುದಾಯದ ಅಭಿವೃದ್ಧಿಗೆ ವ್ಯತಿರಿಕ್ತವಾಗಿದೆ. ಸದ್ಯದ ಮಟ್ಟಿಗೆ ನ್ಯಾಯಾಂಗದ ನಂಬಿಕೆ ಇಡುವುದು ಕಷ್ಟ. ಇದಕ್ಕಾಗಿ ನ್ಯಾಯಾಂಗದಲ್ಲೂ ಮೀಸಲಾತಿ ತರಬೇಕು ಎಂದು ಅವರು ತಿಳಿಸಿದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೂಡು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ದಲಿತರು ಕೋಮುವಾದಿ ಬಿಜೆಪಿಯನ್ನು ರಾಜ್ಯದಿಂದ ಮೂಲೋತ್ಪಾಟನೆ ಮಾಡುವ ನಿರ್ಣಯ ಕೈಗೊಂಡು ಅದರಲ್ಲಿ ಯಶಸ್ವಿಯಾದಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ದೇಶದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸುವ ನಿರ್ಣಯ ಕೈಗೊಳ್ಳಬೇಕು ಎಂದರು.

ಮೈಸೂರು ದಸರಾದಲ್ಲಿ 7 ಬಾರಿ ಅಂಬಾರಿ ಹೊತ್ತ ಅರ್ಜುನ ಆನೆ ವೀರಮರಣ: ಮಾವುತನ ಪ್ರಾಣಕ್ಕಾಗಿ ತನ್ನ ಜೀವ ಬಲಿದಾನ

ಬಿಜೆಪಿಯವರು ದೇಶದಲ್ಲಿ ಮೋದಿ ಎನ್ನುವ ಭ್ರಾಂತಿ ಸೃಷ್ಟಿಸಿ, ಜನರಲ್ಲಿ ವೈದಿಕ ತತ್ವ, ಸಿದ್ಧಾಂತ ಬಿತ್ತಿ, ದೇವರು, ಧರ್ಮದ ವಿಚಾರ ಮುಂದಿಟ್ಟು ಜನರನ್ನು ಮರಳು ಮಾಡಿ ಚುನಾವಣೆ ಗೆಲ್ಲುತ್ತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಅದಕ್ಕೆ ಅವಕಾಶ ನೀಡಲಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅವನತಿ ಮೈಸೂರಿನಿಂದಲೇ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ರಾಜ್ಯ ಸಂಘಟನಾ ಸಂಚಾಲಕ ಎನ್. ವೆಂಕಟೇಶ್, ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ಉಪನ್ಯಾಸಕಿ ಡಾ. ಪದ್ಮಶ್ರೀ, ದಸಂಸ ಜಿಲ್ಲಾ ಖಜಾಂಚಿ ಬಿ.ಡಿ. ಶಿವಬುದ್ದಿ, ರಾಜ್ಯ ಸಂಶೋಧಕರ ವೇದಿಕೆ ಅಧ್ಯಕ್ಷ ರಾಜೇಶ್ ಚಾಕನಹಳ್ಳಿ, ಆಲಗೂಡು ಶಿವಕುಮಾರ್ ಮೊದಲಾದವರು ಇದ್ದರು. ಶಂಭುಲಿಂಗಸ್ವಾಮಿ ನಿರೂಪಿಸಿದರು. ಹೆಗ್ಗನೂರು ನಿಂಗರಾಜು ಮತ್ತು ಕಲ್ಲಹಳ್ಳಿ ಕುಮಾರ್ ತಂಡದವರು ಕ್ರಾಂತಿಗೀತೆ ಹಾಡಿದರು.

Follow Us:
Download App:
  • android
  • ios