ಬೆಳಗಾವಿ(ಫೆ.29): ಗಡಿ ವಿವಾದ, ಭಾಷೆ ಮತ್ತು ಗುಂಪು ಆಧಾರದ ಮೇಲೆ ಚುನಾವಣೆಗೆ ಖ್ಯಾತಿ ಹೊಂದಿದ್ದ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿಯಲು ಮುಂದಾಗಿರುವ ಬಿಜೆಪಿ, ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆಯಡಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಇರಾದೆ ವ್ಯಕ್ತಪಡಿಸಿದೆ. ಈ ಮೂಲಕ ರಾಜಕೀಯ ಪಕ್ಷವೊಂದು ಮುಂಬರಲಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ತನ್ನ ಅದೃಷ್ಟ ಪರೀಕ್ಷೆಗೂ ಮುಂದಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇಲ್ಲಿ ಭಾಷೆ ಮತ್ತು ಗುಂಪು ಆಧಾರದ ಮೇಲೆಯೇ ಚುನಾವಣೆಗಳು ನಡೆದಿವೆ. ಹೀಗಾಗಿ ಇಲ್ಲಿ ಭಾಷಾವಾರು ಆಧಾರದ ಮೇಲಿಂದ ಅಭ್ಯರ್ಥಿಗಳು ಕಣಕ್ಕೆ ಇಳಿಯುತ್ತಾರೆ. ಹೀಗಾಗಿ ಇಲ್ಲಿ ಯಾವುದೇ ಪಕ್ಷಗಳಿಗಳಿರಲಿ, ಅವುಗಳು ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಗೌಣವಾಗಿರುತ್ತಿದ್ದವು. ಇದರಿಂದಾಗಿಯೇ ಗಡಿ ವಿವಾದದಿಂದ ಪಾಲಿಕೆ ಸದಾ ಸುದ್ದಿಯಲ್ಲಿರುತ್ತಿತ್ತು. ಆದರೆ, ಈ ಬಾರಿ ಪಾಲಿಕೆ ಚುನಾವಣೆಯನ್ನು ತನ್ನ ಪಕ್ಷದ ಚಿಹ್ನೆಯ ಮೇಲೆ ಎದುರಿಸಲು ಬಿಜೆಪಿ ದೃಢ ನಿರ್ಧಾರ ಮಾಡಿರುವುದು ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಎಂಇಎಸ್‌ಗೆ ನಡುಕ ಹುಟ್ಟಿಸಿದೆ.

ಹೊಸ ಇತಿಹಾಸ ಸೃಷ್ಟಿಯಾಗುತ್ತಾ?

ಇತ್ತೀಚೆಗಷ್ಟೇ ಬೆಳಗಾವಿಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ನೇತೃತ್ವದಲ್ಲಿ ನಡೆದ ಕೋರ್‌ ಕಮೀಟಿ ಸಭೆಯಲ್ಲಿಯೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆಯ ಮೇಲೆಯೇ ಎದುರಿಸಲು ನಿರ್ಧರಿಸಲಾಗಿದೆ. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮತ್ತು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದೆ. ಈ ಬಾರಿ ಬೆಳಗಾವಿ ಪಾಲಿಕೆಯಲ್ಲಿ ಕಮಲ ಅರಳಿಸಿ ಹೊಸ ಇತಿಹಾಸಕ್ಕೆ ಬಿಜೆಪಿ ನಾಂದಿ ಹಾಡುವುದೇ ಎಂಬುದನ್ನು ಕಾಯ್ದುನೋಡಬೇಕು.

11 ತಿಂಗಳಿಂದ ಚುನಾವಣೆ ಮುಂದಕ್ಕೆ:

ಒಟ್ಟು 58 ಸದಸ್ಯರ ಬಲ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಮರಾಠಿ ಭಾಷಿಕ 36 ಸದಸ್ಯರು, ಕನ್ನಡ ಮತ್ತು ಉರ್ದು ಭಾಷಿಕ 26 ಸದಸ್ಯರಿದ್ದರು. 2019 ಮಾರ್ಚ್‌ಗೆ ಚುನಾಯಿತ ಸದಸ್ಯರ ಅವಧಿ ಮುಕ್ತಾಯವಾಗಿತ್ತು. ಆದರೆ, ವಾರ್ಡ್‌ಗಳ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ಪ್ರಶ್ನಿಸಿ ಕೆಲವರು ಹೈಕೋರ್ಟ್‌ಗೆ ಮೊರೆ ಹೋದರು. ಹಾಗಾಗಿ 11 ತಿಂಗಳಿಂದ ಚುನಾವಣೆಯೇ ನಡೆದಿಲ್ಲ. ಚುನಾವಣೆ ವಿಳಂಬವಾಗುತ್ತಲೇ ಇದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಮಾತನಾಡಿದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ನಾವು ಪಕ್ಷದ ಚಿಹ್ನೆಯೇ ಮೇಲೆಯೇ ಎದುರಿಸಿ ಬಹಮತ ಸಾಧಿಸಿ, ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯುವ ವಿಶ್ವಾಸ ನಮಗಿದೆ. ಚುನಾವಣೆಯಲ್ಲಿ ಗೆಲವಿನ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಎಂಇಎಸ್‌ಗೆ ನಡುಕ:

ಈ ಹಿಂದಿನ ಚುನಾವಣೆಗಳಲ್ಲಿ ಮರಾಠಿ ಭಾಷಿಕರು ಗೆದ್ದರೆ ಇವರೇ ನಮ್ಮ ಅಭ್ಯರ್ಥಿ ಎಂದು ಎಂಇಎಸ್‌ ಪ್ರತಿ ಬಾರಿ ಘೋಷಣೆ ಮಾಡುತ್ತಿತ್ತು. ಆದರೆ, ಇದೀಗ ಬಿಜೆಪಿ ನೇರವಾಗಿ ಚುನಾವಣಾ ಆಖಾಡಕ್ಕೆ ಇಳಿಯಲು ತೀರ್ಮಾನಿಸಿರುವುದು ಪಾಲಿಕೆ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆಯಿದೆ. ಬಿಜೆಪಿಯು ಮರಾಠಿ ಭಾಷಿಕರ ಮಾಜಿ ಸದಸ್ಯರನ್ನು ತನ್ನತ್ತ ಸೆಳೆಯಲೂ ಗಾಳ ಹಾಕಿದೆ. 

ಎಂಇಎಸ್‌ನ ಬಂಡವಾಳ ಅರಿತಿರುವ ಮರಾಠಿಗರು ಬಿಜೆಪಿ ಸೇರಲು ಮುಂದಾಗಿದ್ದಾರೆ ಎನ್ನುವ ಮಾತೂ ಕೇಳಿಬರುತ್ತಿದೆ. ಇದರ ನಡುವೆ ಎಂಇಎಸ್‌ ಕಣ್ಣಿಟ್ಟಿರುವ ಮರಾಠಿಗರ ಮತಗಳನ್ನು ಬಿಜೆಪಿ ಕಸಿದುಕೊಳ್ಳುವ ಆತಂಕವೂ ಇದಕ್ಕಿದೆ. ಇದರಿಂದಾಗಿ ಬೆಳಗಾವಿ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಮುಂದಾಲೋಚನೆ ಕೂಡ ಎಂಇಎಸ್‌ಗೆ ನಡುಕ ಹುಟ್ಟಲು ಪ್ರಮುಖ ಕಾರಣವಾಗಿದೆ.