ಬೆಂಗಳೂರಿನಲ್ಲಿ ಮೋದಿ ಕಾರ‍್ಯಕ್ರಮ ಯಶಸ್ಸಿಗೆ ಸಿದ್ಧತೆ: ಸಿಎಂ ಬೊಮ್ಮಾಯಿ

ಎರಡು ದಿನಗಳ ರಾಜ್ಯಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಯಶಸ್ವಿಗೊಳಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

BJP Prepares For Grand Welcome To Prime Minister Narendra Modi gvd

ಬೆಂಗಳೂರು (ಜೂ.19): ಎರಡು ದಿನಗಳ ರಾಜ್ಯಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಯಶಸ್ವಿಗೊಳಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶನಿವಾರ ಬಾಬಾಸಾಹೇಬ್‌ ಡಾ. ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಸಂಸ್ಥೆಗೆ ಮತ್ತು ಕೊಮ್ಮಘಟ್ಟದಲ್ಲಿ ಪ್ರಧಾನಿ ಭಾಗಿಯಾಗುವ ಸಾರ್ವಜನಿಕ ಸಭೆಯ ವೇದಿಕೆಯ ಸಿದ್ಧತಾ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಕ್ಕೆ 20 ಮತ್ತು 21ರಂದು ಎರಡು ದಿನದ ಪ್ರವಾಸವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದಾರೆ. 

ಬೆಂಗಳೂರು ಮತ್ತು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಅವರ ಕಾರ್ಯಕ್ರಮದ ಪಟ್ಟಿಬಂದಿದೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಬೇಕು ಎಂಬ ಉದ್ದೇಶದಿಂದ ಸಚಿವ ಸಂಪುಟದ ಸಹೋದ್ಯೋಗಿಗಳು, ಸಂಸದ ಡಿ.ವಿ.ಸದಾನಂದಗೌಡ, ಎಲ್ಲಾ ಶಾಸಕರು ಶ್ರಮವಹಿಸುತ್ತಿದ್ದಾರೆ. ಅಧಿಕಾರಿಗಳು ಕೂಡ ಸಂಪೂರ್ಣ ಸಹಕಾರ ನೀಡಿ ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು. ಬಿಬಿಎಂಪಿ, ಬಿಡಿಎ, ಜಿಲ್ಲಾಧಿಕಾರಿಗಳು ಮತ್ತು ಭದ್ರತಾ ದೃಷ್ಟಿಯಿಂದ ಕರ್ನಾಟಕ ಪೊಲೀಸ್‌, ಬೆಂಗಳೂರು ಆಯುಕ್ತರು ಸೇರಿದಂತೆ ಎಲ್ಲರೂ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಸ್‌ಪಿಜಿ ಮಾರ್ಗದರ್ಶನದಲ್ಲಿ ಭದ್ರತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. 

Mysuru ಅರಮನೆಯಲ್ಲಿ ಪ್ರಧಾನಿ ಯೋಗ ಕಾರ್ಯಕ್ರಮ: ರಾಜ ಮನೆತನದ ಕುಟುಂಬಕ್ಕೆ ಆಹ್ವಾನ

ಪ್ರಧಾನಿಗಳು ಬೆಳಗ್ಗೆ 11.55ಕ್ಕೆ ಯಲಹಂಕ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಅವರು ಹೆಲಿಕಾಪ್ಟರ್‌ ಮೂಲಕ ಐಐಎಸ್‌ಸಿಗೆ ಆಗಮಿಸಲಿದ್ದು, ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬ್ರೈನ್‌ ಸೆಲ್‌ ಅಭಿವೃದ್ಧಿ ಕೇಂದ್ರವನ್ನು ಕ್ರಿಸ್‌ ಗೋಪಾಲಕೃಷ್ಣ ಅವರ .450 ಕೋಟಿ ದೇಣಿಗೆಯಲ್ಲಿ ನಿರ್ಮಿಸಲಾಗಿದೆ. ಅದರ ಉದ್ಘಾಟನೆ ಮಾಡಲಿದ್ದಾರೆ. ನಂತರ ಮೈಂಡ್‌ ಟ್ರೀ ಸಂಸ್ಥೆ 850 ಹಾಸಿಗೆಗಳ ಸಂಶೋಧನಾ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಸಂಸದ ಡಿ.ವಿ.ಸದಾನಂದಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 

ಸಬ್‌ಅರ್ಬನ್‌ ರೈಲ್ವೆಗೆ ಮೋದಿ ಶಂಕುಸ್ಥಾಪನೆ: ಕೊಮ್ಮಘಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ .15 ಸಾವಿರ ಕೋಟಿ ವೆಚ್ಚದ ಸಬ್‌ಅರ್ಬನ್‌ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಂಗಳೂರು ಹೊರವಲಯಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ ದೊರಕಲಿದೆ. ಇದರ ಜತೆಗೆ 6 ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಹಸಿರು ನಿಶಾನೆ ಸಿಗಲಿದೆ. ಎಸ್‌ಟಿಆರ್‌ಆರ್‌ ಯೋಜನೆಗೂ ಶಂಕುಸ್ಥಾಪನೆ ನೇರವೇರಲಿದೆ. ದಾಬಸ್‌ಪೇಟೆಯಿಂದ ಹೊಸಕೋಟೆವರೆಗೆ ಸಂಪರ್ಕಿಸುವ ರಸ್ತೆ ಇದಾಗಿದೆ. 

ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರೊಂದಿಗೆ ಎರಡು ಬಾರಿ ಮಾತನಾಡಿದ ಮೇಲೆ ವಿಶೇಷ ವಿನಾಯಿತಿ ನೀಡಿ ಆದೇಶ ನೀಡಿದ್ದಾರೆ. ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿಗಳು ಮಾತನಾಡಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ನಂತರ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿನ ಬಾಬಾಸಾಹೇಬ್‌ ಡಾ. ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ಗೆ ಭೇಟಿ ನೀಡಿ ಅಂಬೇಡ್ಕರ್‌ ಪ್ರತಿಭೆ ಅನಾವರಣ ಮತ್ತು ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಮೈಸೂರಿಗೆ ತೆರಳಲಿದ್ದಾರೆ. ಅಲ್ಲಿ ಎರಡು ದೊಡ್ಡ ಕಾರ್ಯಕ್ರಮಗಳಿವೆ. ಫಲಾನುಭವಿಗಳ ಸಮ್ಮೇಳನ ಇದೆ. ಅದನ್ನು ಮುಗಿಸಿ ಸುತ್ತೂರು ಮಠ ಮತ್ತು ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಮರುದಿನ ವಿಶ್ವಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಹಿಂದಿರುಗಲಿದ್ದಾರೆ ಎಂದು ವಿವರಿಸಿದರು.

ಮೋದಿ ಮೈಸೂರು ಭೇಟಿ ವೇಳೆ ದಸರಾ ರೀತಿ ದೀಪಾಲಂಕಾರ: ಸಚಿವ ಎಸ್‌.ಟಿ. ಸೋಮಶೇಖರ್‌

ಕಾರ‍್ಯಕ್ರಮದಲ್ಲಿ ಭಾಗವಹಿಸೋರು ಲಸಿಕೆ ಪಡೆದ ಪ್ರಮಾಣ ಪತ್ರ ತನ್ನಿ: ಕಾರ್ಯಕ್ರಮಗಳ ಸಿದ್ಧತೆ ವೀಕ್ಷಣೆ ಮಾಡಿದ್ದು, ಅಚ್ಚುಕಟ್ಟಾಗಿ ಸಿದ್ಧತೆಯಾಗುತ್ತಿದೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಪ್ರಧಾನಿಗಳು ಆಗಮಿಸುವ ವೇಳೆಯಲ್ಲಿ ಅತಿ ಹೆಚ್ಚು ಜನ ಸೇರುತ್ತಾರೆ. ಆದ್ದರಿಂದ ಅಗತ್ಯ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಬೆಂಗಳೂರಿನ ಮಹಾ ಜನತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರುತ್ತೇನೆ ಎಂದ ಅವರು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೋವಿಡ್‌ ಲಸಿಕೆ ಪಡೆದಿರುವ ಪ್ರಮಾಣ ಪತ್ರ ತೋರಿಸಬೇಕು. ಒಳಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಾತ್ರ ಕೋವಿಡ್‌ ಪರೀಕ್ಷೆ ಮಾಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Latest Videos
Follow Us:
Download App:
  • android
  • ios