ಮೈಸೂರು(ಸೆ.09): ಪ್ರತಿಪಕ್ಷಗಳ ಮೇಲಿನ ಕೋಪದ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಜನರ ಮೇಲೂ ದ್ವೇಷ ಯಾಕಿದೆ? ಕರ್ನಾಟಕ 25 ಸೀಟುಗಳನ್ನು ಗೆಲ್ಲಿಸಿ ಕಳುಹಿಸಿಕೊಟ್ಟಿದ್ದರೂ ಜನರ ಮೇಲೆ ಯಾಕೆ ಕಾಳಜಿ ತೋರಿಸುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಬಿ. ಖಂಡ್ರೆ ಪ್ರಶ್ನಿಸಿದರು.

ಕಣ್ಣು, ಬಾಯಿ ಮುಚ್ಕೊಂಡಿದೆ ಸರ್ಕಾರ:

ಕೇಂದ್ರ ಸರ್ಕಾರ ರಾಜ್ಯದಲ್ಲಿ ಸಂಭವಿಸಿರುವ ನೆರೆಪೀಡಿತ ಪ್ರದೇಶಗಳಿಗೆ ಅನುದಾನ ಘೋಷಿಸದಿದ್ದರೂ ಅದನ್ನು ಕೇಳಲು ಆಡಳಿತ ಪಕ್ಷಕ್ಕೆ ಏನಾಗಿದೆ? ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿದ್ದಾರೆ. ಪರಿಹಾರದ ಬಗ್ಗೆ ತುಟಿಕ್‌ ಪಿಟಿಕ್‌ ಎನ್ನುತ್ತಿಲ್ಲ. 40 ದಿವಸಗಳಾದರೂ ಕೇಂದ್ರ ಸ್ಪಂದಿಸುತ್ತಿಲ್ಲ. ನೆರೆ ಬಗ್ಗೆ ಚರ್ಚಿಸಲು ವಿಧಾನಮಂಡಲ ಅಧಿವೇಶನ ತುರ್ತಾಗಿ ಕರೆಯಬೇಕು ಎಂದು ಈಶ್ವರ್‌ ಖಂಡ್ರೆ ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಪ್ಪು ಮಾಡಿ BJP ಸೇರಿದ್ರೆ ಶಿಕ್ಷೆ ಇಲ್ಲ:

ತಪ್ಪು ಮಾಡಿದವರು ಬಿಜೆಪಿ ಸೇರಿದರೆ ಬಿಟ್ಟು ಬಿಡುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಶಾರದಾ ಹಗರಣದ ರೂವಾರಿ ಮುಕಲ್‌ ರಾಯ್‌ ಅವರನ್ನು ಬಿಜೆಪಿ ಸೇರಿಸಿಕೊಂಡಿತು. ಹಗರಣದ ಮುಖ್ಯ ರೂವಾರಿಯನ್ನು ಮೊದಲು ಬಂಧಿಸಿ ನಂತರ ಪಕ್ಷಕ್ಕೆ ಸೇರಿಸಿಕೊಂಡಿತು. ಬಿಜೆಪಿ ಸೇರಿದ ಮೇಲೆ ಸಂಪನ್ನರಾದರಾ? ಪ್ರಾಮಾಣಿಕರಾದರಾ? ಆ ಪ್ರಶ್ನೆ ಕೇಳಬೇಕಲ್ಲವೇ. ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಒಂದು ಕಾನೂನ ಇದೆಯಾ? ಇವತ್ತು ಕಾನೂನು ಮೀರಿ ತನಿಖಾ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಂಡು ದೇಶದಲ್ಲಿ ಬಾಯಿ ಮುಚ್ಚಿಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲು ಹೊರಟಿದ್ದಾರೆ ಎಂದು ಖಂಡ್ರೆ ಛೇಡಿಸಿದರು.

ಮೋದಿಗೆ ಕರ್ನಾಟಕ ಜನರ ಮೇಲೆ ದ್ವೇಷ ಯಾಕೆ?