* ಹಿಂದೂಗಳು ಬಹುಸಂಖ್ಯಾತರಿದ್ದಾಗಷ್ಟೆ ಅಂಬೇಡ್ಕರ್‌ ಸಂವಿಧಾನ ಉಳಿಯುತ್ತದೆ* ಹಿಂದೂಗಳು ಅಲ್ಪಸಂಖ್ಯಾತರಾದರೆ ಗಾಂಧಾರ ದೇಶದ ಸ್ಥಿತಿ ಬರುತ್ತದೆ* ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಕಾಂಗ್ರೆಸ್‌ನಲ್ಲಿ ಅದಿಲ್ಲ  

ಕಲಬುರಗಿ(ಸೆ.01): ಬಿಜೆಪಿ ತತ್ವಸಿದ್ಧಾಂತ ಹಾಗೂ ಹಿಂದೂತ್ವಕ್ಕಾಗಿ ಬದ್ಧವಾಗಿರುವ ಪಕ್ಷ, ಹಿಂದುತ್ವ ಉಳಿದಾಗ ಮಾತ್ರ ಡಾ.ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನ ಉಳಿಯುತ್ತದೆ, ಹಿಂದೂಗಳು ಅಲ್ಪಸಂಖ್ಯಾತರಾದರೆ ಗಾಂಧಾರ ದೇಶದ ಸ್ಥಿತಿ ಬರುತ್ತದೆ, ಅಂಬೇಡ್ಕರ್‌ ಸಂವಿಧಾನ ಉಳಿಯಬೇಕೆನ್ನುವವರು ಈ ಕಟು ಸತ್ಯ ಮರೆಯಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ನಗರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರೆ ಗಾಡಾಂಧಕಾರ, ಗಾಂಧಾರ (ಈಗಿನ ಅಪಘಾನಿಸ್ತಾನ್‌)ದ ದುರವಸ್ಥೆ ಬರುತ್ತದೆ ಎಂದರು.

ಅದಕ್ಕೆ ಓಲೈಕೆ ರಾಜಕಾರಣ ಸರಿಯಲ್ಲ, ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಇನ್ನಷ್ಟುಪಾಕಿಸ್ತಾನಗಳು ಹುಟ್ಟಿಕೊಳಲ್ಳುತ್ತವೆಯೇ ಹೊರತು ಬೇರೇನು ಸಾಧನೆಯಾಗದು. ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆಯೇ ವಿನಹಃ ಬೇರೇನೂ ಅಲ್ಲಿ ಹುಟ್ಟಿಕೊಳ್ಳದು ಎಂದರು.

ಸಾಮರಸ್ಯ ಪ್ರೀತಿಸುವ, ಸಮಭಾವದ ಜನ, ಸನಾತನ ಹಿಂದೂ ಧರ್ಮದಲ್ಲಿ ನಂಬಿಕೆ ಇರುವವರು ಅಲ್ಪಸಂಖ್ಯಾತರಾದರೆ ಅದೇ ಗಳಿಗೆ ಅಫಘಾನಿಸ್ತಾನ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಚುನಾವಣೆ, ರಾಜಕೀಯ ಎಂದು ಓಲೈಕೆಗೆ ಮುಂದಾದರೆ ಕಲ್ಯಾಣ ನಾಡು, ಕಲಬುರಗಿಗೂ ಅಪಘಾನಿಸ್ತಾನದ ಗತಿ ಬಂದರೆ ಅಚ್ಚರಿ ಪಡಬೇಕಿಲ್ಲ ಎಂದರು.

'ನಮಗೆ ಜೆಡಿಎಸ್-ಕಾಂಗ್ರೆಸ್ ಯಾರೂ ಸಹಾಯ ಮಾಡಿಲ್ಲ : ದಳಕ್ಕೆ ನಮ್ಮ ಸಹಾಯವಿದೆ'

ಬುದ್ಧನ ಉರುಳಿಸಿದವರು ಸಹೋದರರೆ:

ಯಾರು ಶಾಂತವಾಗಿ ನಿಂತ ಬುದ್ಧನ ಮೂರ್ತಿಯನ್ನೇ ಛಿದ್ರ ಮಾಡಿದರೋ ಅಂತಹವರನ್ನು ಕಾಂಗ್ರೆಸ್‌ ರಾಜ್ಯಾಧ್ಯಕ್ಷರು ಸಹೋದರರು ಎಂದು ಸಂಬೋಧಿಸುತ್ತಾರೆ. ಡಾ.ಖರ್ಗೆಯವರು ಇದನ್ನರಿಯಬೇಕು. ಇಲ್ಲದೆ ಹೋದಲ್ಲಿ ತುಂಬ ಶ್ರಮಪಟ್ಟು ಬುದ್ಧ ವಿಹಾರ ಕಲಬುರಗಿಯಲ್ಲಿ ಮಾಡಲಾಗಿದೆ. ಅದಕ್ಕೂ ಬುದ್ಧನ ವಿಗ್ರಹಕ್ಕಾದ ಗತಿ ಬಂದೊದಗಬಹುದು. ಬುದ್ಧನನ್ನೇ ಬಿಡದವರು ಅಂಬೇಡ್ಕರ್‌ ಹಾಗೂ ಬಸವಣ್ಣನವರನ್ನು ಬಿಡುತ್ತಾರೆಯಾ ಎಂದು ಪ್ರಶ್ನಿಸಿದರು.
ದೇಶ ಮೊದಲು ಎಂದು ರಾಜಕಾರಣ ಮಾಡಬೇಕೇ ವಿನಹಃ ವೈಯಕ್ತಿಕ ಲಾಭಕ್ಕೋಸ್ಕರ ರಾಜಕೀಯ ಬೇಡ. ಕಾಂಗ್ರೆಸ್‌ ದೇಶವನ್ನೇ ಮರೆತಿದೆ. ದೇಶಭಕ್ತ ಸಂಘಟನೆ ಆರೆಸ್ಸೆಸ್‌ಗೆ ತಾಲಿಬಾನ್‌ಗೆ ಹೋಲಿಕೆ ಮಾಡುತ್ತಿದ್ದಾರೆ. ಭಯೋತ್ಪಾದಕರೆಲ್ಲಿ, ದೇಶ ಭಕ್ತರೆಲ್ಲಿ, ಈ ಅಂತರ ಕಾಂಗ್ರೆಸ್‌ ಅರಿಯಲಿ ಎಂದರು.

ಯಾರ ಎದೆಯಲ್ಲಿ ಎಷ್ಟಿವೆ ಗುಂಡು:

ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ರಾಂತಿಗೆ ಹೋದಾಗೆಲ್ಲಾ ಕಾಂಗ್ರೆಸ್‌ ಗೆಲ್ಲಬಾರದೆಂಬ ಸಂದೇಶ ನೀಡುತ್ತಾರೆ. ಕೆಲವೊಮ್ಮೆ ನೇರವಾಗಿ, ಕೆಲವು ಸಲ ಹಿಂಬಾಲಕರ ಮೂಲಕ ಸಂದೇಶ ನೀಡುತ್ತಾರೆ, ಈ ಬಾರಿ ಡಿಕೆಶಿ ನೇತೃತ್ವದಲ್ಲಿ ಯಾವ ಚುನಾವಣೆ ಗೆಲ್ಲಬಾರದು ಎಂಬ ಸಂದೇಶವಿದೆ. ಸಿದ್ದರಾಮಯ್ಯನವರ ಅಪೇಕ್ಷೆ ಜನ ಈಡೇರಿಸಲಿದ್ದಾರೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರು ಭಾಗಿಯಾಗಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಎದೆಯಲ್ಲಿ ಎಷ್ಟು ಗುಂಡುಗಳಿವೆ ಎಂದು ತೋರಿಸಲಿ, ಅದರಂತೆ ಡಿ.ಕೆ. ಶಿವಕುಮಾರ್‌ ಎದೆಯಲ್ಲಿ ಎಷ್ಟು ಗುಂಡುಗಳಿವೆ ಎಂದು ತೋರಿಸಲಿ ಎಂದು ಸವಾಲು ಹಾಕಿ, ಡಿಕೆಶಿ ಬಳಿ ಗುಂಡಿಲ್ಲ, ಗುಂಡಾಗಿರಿ ಇದೆ ಖಾರವಾಗಿ ನುಡಿದರು.

ಕ್ಯಾಂಟೀನ್‌ ಹೆಸರು ಬದಲಾದ್ರೆ ಗಂಟಲಲ್ಲಿ ಅನ್ನ ಇಳಿಯುವುದಿಲ್ಲವೇ? ಸಿ.ಟಿ.ರವಿ ಪ್ರಶ್ನೆ

ಕಾಂಗ್ರೆಸ್‌ ನೇರ ಕಾರಣ:

ಕಲ್ಯಾಣ ನಾಡು ಹಿಂದುಳಿಯಲು ಹಿಂದೆ ನಿಜಾಮ್‌ ಅರಸರು, ನಂತರ ಕಾಂಗ್ರೆಸ್ಸಿಗರೇ ಕಾರಣ, ಈ ಭಾಗದ ಜನರು ಹೆಚ್ಚು ಕಾಂಗ್ರೆಸ್‌ಗೆ ಬೆಂಬಲಿಸಿರುವುದರಿಂದ ಈ ಭಾಗ ಹಿಂದುಳಿದಿದೆ. ಈ ಭಾಗದ ಅಭಿವೃದ್ಧಿ ಕುಂಠಿತವಾಗಲು ಕಾಂಗ್ರೆಸ್‌ ನೇರ ಹೊಣೆ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಿಂತ ಕಾಂಗ್ರೆಸ್‌ ಪಕ್ಷದ ಅಭಿವೃದ್ಧಿಯೇ ಜಾಸ್ತಿ ಯಾಗಿದೆ, ನಮ್ಮ ಸರಕಾರ ಈ ಭಾಗದ ಅಭಿವೃದ್ಧಿಗೆ ಕಟಿಬದ್ಧವಾಗಿದ್ದು, ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಡಿಕೆಶಿ 8 ತಿಂಗಳಾದರೂ ತಮ್ಮ ತಂಡ ಕಟ್ಟಿಕೊಳ್ಳಲಾಗಿಲ್ಲ, 2 ವರ್ಷದಿಂದ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ ಅಧ್ಯಕ್ಷರ ಹುಡುಕಾಟದಲ್ಲಿದೆ. ಆದರೂ, ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಸಿಎಂ ಕನಸು ಕಾಣುತ್ತಿದ್ದಾರೆ. ಖಾಲಿ ಇಲ್ಲದ ಹುದ್ದೆಗೆ ನಾಲ್ಕೈದು ಜನ ಟವೆಲ್‌ ಹಾಕಿದ್ದಾರೆಂದು ರವಿ ವ್ಯಂಗ್ಯ ಮಾಡಿದರು.

ಸಿಎಂ ಬೊಮ್ಮಾಯಿ ಅವರನ್ನು ಬಿಜೆಪಿ ಪಂಜರದ ಗಿಳಿ ಮಾಡಿದೆ ಎಂಬ ಕಾಂಗ್ರೆಸ್‌ ಟೀಕೆಗೆ ಉತ್ತರಿಸಿದ ಅವರು, ಬಸವರಾಜ ಬೊಮ್ಮಾಯಿ ಆಡಳಿತದ ಅನುಭವ ಇರುವ ರಾಜಕಾರಣಿಗಳು, ಯಾರು ಯಾರನ್ನು ಪಂಜರದ ಒಳಗೆ ಹಾಕುವುದಕ್ಕೆ ಸಾಧ್ಯವಿಲ್ಲ , ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಕಾಂಗ್ರೆಸ್‌ನಲ್ಲಿ ಅದಿಲ್ಲ ಎಂದರು. ಶಾಸಕರಾದ ರಾಜಕುಮಾರ್‌ ಪಾಟೀಲ್‌, ಬಸವರಾಜ ಮತ್ತಿಮಡು,ಶಶೀಲ ನಮೋಶಿ, ಬಾಬುರಾವ ಚಿಂಚನಸೂರ, ಈಶ್ವರ ಸಿಂಗ್‌ ಠಾಕೂರ್‌, ಅಮರನಾಥ ಪಾಟೀಲ್‌, ಶರಣಪ್ಪ ತಳವಾರ ಉಪಸ್ಥಿತರಿದ್ದರು.