ಬಿಜೆಪಿ ಸರ್ಕಾರದಿಂದ ದೇಶದ ಆರ್ಥಿಕ ಸ್ಥಿತಿ ಬಲಿಷ್ಠ: ಸಂಸದ ದೇವೇಂದ್ರಪ್ಪ
* ಮೋದಿ ಸರ್ಕಾರ ರೈತವಿರೋಧಿಯಲ್ಲ
* ರಸಗೊಬ್ಬರ ದರ ಇಳಿಕೆ ಮಾಡಿದ ಮೋದಿ ಸರ್ಕಾರ
* ವಿರೋಧಿ ಪಕ್ಷಗಳಿಂದ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ
ಕೊಟ್ಟೂರು(ಜೂ.16): ರೈತರ ಸರ್ವೋದಯ ಅಭಿವೃದ್ಧಿ ಮೂಲಮಂತ್ರವೇ ಕೇಂದ್ರ ಸರ್ಕಾರದ ನೀತಿ, ನಿಲುವುಗಳಾಗಿವೆ. ಯಾವುದೇ ಕಾರಣಕ್ಕೂ ರೈತ ವಿರೋಧಿ ನಿಲುವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತೆಗೆದುಕೊಂಡಿಲ್ಲ. ರಸಗೊಬ್ಬರ ಸೇರಿದಂತೆ ಎಲ್ಲ ಕೃಷಿ ಪರಿಕರಗಳು ಕನಿಷ್ಠ ದರಕ್ಕೆ ಸಿಗುವಂತೆ ಆರ್ಥಿಕ ಹೊರೆಯನ್ನು ಲೆಕ್ಕಿಸದೇ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸಂಸದ ವೈ. ದೇವೇಂದ್ರಪ್ಪ ಹೇಳಿದ್ದಾರೆ.
ಕೊಟ್ಟೂರಿನಲ್ಲಿ ಸೋಮವಾರ ಟಿಎಪಿಸಿಎಂಎಸ್ ಆಯೋಜಿಸಿದ್ದ ಶಿಕ್ಷಣಪ್ರೇಮಿ ದಿ. ಕೆ.ಎಸ್. ಈಶ್ವರಗೌಡ ಪ್ರತಿಷ್ಠಾನ ವತಿಯಂದ ರೈತರಿಗೆ ಉಚಿತ ರಸಗೊಬ್ಬರವನ್ನು ವಿತರಿಸಿ ಮಾತನಾಡಿ, ರಸಗೊಬ್ಬರ ಏರಿಕೆಯಾಗುತ್ತಿದ್ದಂತೆ ರಾಜ್ಯದ ಎಲ್ಲ ಸಂಸದರು ಪ್ರಧಾನಿಯವರನ್ನು ಭೇಟಿ ಮಾಡಿ ದರ ಇಳಿಸುವಂತೆ ಬೇಡಿಕೆ ಇಟ್ಟ ಕಾರಣಕ್ಕಾಗಿ ಕೂಡಲೇ ರಸಗೊಬ್ಬರ ದರವನ್ನು ಸರ್ಕಾರ ಇಳಿಕೆ ಮಾಡಿದೆ ಎಂದರು.
ಟಿಎಪಿಸಿಎಂಎಸ್ ಕೊಟ್ಟೂರಿನಿಂದ ಕೈಬಿಟ್ಟು ಹೋಗಿತ್ತು. ಈ ಸರ್ಕಾರಿ ಸಂಸ್ಥೆ ರೈತರಿಗೆ ಬಹುಬಗೆಯಲ್ಲಿ ನೆರವು, ಸೌಲಭ್ಯಗಳನ್ನು ದೊರಕಿಸಿ ಕೊಡುತ್ತಿರುವ ಕಾರಣಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಟಿಎಪಿಸಿಎಂಎಸ್ ಮತ್ತೆ ಕೊಟ್ಟೂರಿನಲ್ಲಿ ಪುನರ್ ಪ್ರಾರಂಭವಾಗುವಂತೆ ಮಾಡಿದ್ದೇವೆ ಎಂದರು.
'ಮೋದಿ, ಯಡಿಯೂರಪ್ಪ ಬಗ್ಗೆ ನಾಲಿಗೆ ಹರಿಬಿಡಬೇಡಿ'
ಮಾಜಿ ಶಾಸಕ ಕೆ. ನೇಮಿರಾಜ್ ನಾಯ್ಕ ಮಾತನಾಡಿ, ದೇಶದ ಆರ್ಥಿಕ ಸ್ಥಿತಿಯನ್ನು ಬಿಜೆಪಿ ಸರ್ಕಾರ ಬಲಿಷ್ಠಗೊಳಿಸಿದೆ. ಹಿಂದಿನ ಸರ್ಕಾರ ಮಾಡಿದ ಸಾಲವನ್ನು ತೀರಿಸಿ ರಾಷ್ಟ್ರ ಸ್ವಾವಲಂಬಿತನವನ್ನು ಸಾಧಿಸುವತ್ತಾ ಮುಂದಾಗಿದೆ. ವಿರೋಧಿ ಪಕ್ಷ ಬೆಲೆ ಏರಿಕೆಯ ವಿಷಯವನ್ನೇ ಪ್ರಧಾನವನ್ನಾಗಿರಿಸಿಕೊಂಡು ಬಿಜೆಪಿ ಸರ್ಕಾರ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಸ್. ಈಶ್ವರಗೌಡ, ಉಪಾಧ್ಯಕ್ಷ ಕಲ್ಲೇಶಪ್ಪ, ಕಡ್ಲಿ ಈರಣ್ಣ, ಪಟ್ಟಣ ಪಂಚಾಯಿತಿ ಸದಸ್ಯರಾದ ವಿನಯ್ ಹೊಸಮನಿ, ಜಿ.ಎಂ. ಸಿದ್ದಯ್ಯ, ಮುಖಂಡರಾದ ವೀರೇಶ ಗೌಡ, ಮರಬದ ನಾಗರಾಜ, ಕೋನಾಪುರ ಬಸವರಾಜ, ದೂಪದಹಳ್ಳಿ ಮಂಜುನಾಥ, ಪಿ. ದೇವೇಂದ್ರಗೌಡ, ಕರಿಬಸವನಗೌಡ ಮತ್ತಿತರರು ಪಾಲ್ಗೊಂಡಿದ್ದರು.