ತನ್ವೀರ್‌ಸೇಠ್ ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಪ್ರತಾಪ ಸಿಂಹ
- ದರ್ಗಾ, ಮಸೀದಿ ವಿಷಯಕ್ಕೆ ಬಂದರೆ ನಾವು ಕೈಗೆ ಬಳ್ಳೆ ತೊಟ್ಟು ಕೂರುವುದಿಲ್ಲ ಎಂಬ ಶಾಸಕ ತನ್ವೀರ್‌ಸೇಠ್ ಹೇಳಿಕೆ
- ಖಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ ಸಿಂಹ
ಮೈಸೂರು (ಸೆ.13): ದರ್ಗಾ, ಮಸೀದಿ ವಿಷಯಕ್ಕೆ ಬಂದರೆ ನಾವು ಕೈಗೆ ಬಳ್ಳೆ ತೊಟ್ಟು ಕೂರುವುದಿಲ್ಲ ಎಂಬ ಶಾಸಕ ತನ್ವೀರ್‌ಸೇಠ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ ಸಿಂಹ, ಹೆಣ್ಣನ್ನು ಬುರ್ಖಾದೊಳಗೆ ಕೂಡಿಟ್ಟು, ಭೋಗಕ್ಕೆ ಬಳಸುವುದು ನಿಮ್ಮ ಧರ್ಮದ ಸಂಸ್ಕೃತಿ ಆಗಿರಬಹುದು. ಆದರೆ ನಮ್ಮ ಧರ್ಮದಲ್ಲಿ ಹೆಣ್ಣಿಗೆ ಪೂಜ್ಯನೀಯ ಗೌರವವಿದೆ ಎಂದಿದ್ದಾರೆ.
ನಗರದ ಅಗ್ರಹಾರದ ನೂರೊಂದು ಗಣಪತಿ ದೇವಾಲಯದಲ್ಲಿ ಭಾನುವಾರ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ವೀರ್‌ಸೇಠ್ ಇತರ ಅಲ್ಪಸಂಖ್ಯಾತ ನಾಯಕರ ರೀತಿ ಅಲ್ಲ ಅಂದುಕೊಂಡಿದ್ದೆ.
ಮೈಸೂರಲ್ಲಿ 93 ದೇವಾಲಯ ತೆರವು : ಚರ್ಚ್ ಮತ್ತು ಮಸೀದಿ ಇಲ್ಲವೆ ಎಂದು ಸಿಂಹ ಆಕ್ರೋಶ
ಅವರಿಂದ ನಾನು ಇಂತಹ ಮಾತನ್ನು ನಿರೀಕ್ಷಿಸಿರಲಿಲ್ಲ. ಬಳೆ ಅಂದರೆ ಅಬಲೆಯ ಸಂಕೇತನಾ? ನೀವು ಪ್ರೀತಿಸುವ ಹೈದರಾಲಿಯ ಸೈನಿಕರನ್ನು ಹೊಡೆದಿದ್ದು ಒನಕೆ ಓಬವ್ವ, ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ್ದು ಕಿತ್ತೂರು ಚೆನ್ನಮ್ಮ, ವೀರ ವನಿತೆ ಅಬ್ಬಕ್ಕನ ಸಾಹಸಗಳು ನಮಗೆ ಆದರ್ಶ.
ನಾವು ಮಹಿಳೆಯನ್ನು ಆರಾಧಿಸುತ್ತೇವೆ. ತಾಯಿ ಚಾಮುಂಡಿ, ಭುವನೇಶ್ವರಿ ಕೂಡ ಹೆಣ್ಣೇ. ಪೌರುಷ ತೋರಿಸಲು ಹೆಣ್ಣನ್ನು ಬಳಸುವುದಿಲ್ಲ. ಅಂತಹ ಹೆಣ್ಣು ಹಾಕಿಕೊಳ್ಳುವ ಬಳೆಯನ್ನು ಅಬಲೆಯ ಸಂಕೇತ ಎಂದು ಹೇಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.